ADVERTISEMENT

ನಿರ್ಭಯತ್ವದ ಶಕ್ತಿ

ಡಾ. ಗುರುರಾಜ ಕರಜಗಿ
Published 20 ಸೆಪ್ಟೆಂಬರ್ 2018, 19:30 IST
Last Updated 20 ಸೆಪ್ಟೆಂಬರ್ 2018, 19:30 IST

ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಅವನ ಪಟ್ಟದ ರಾಣಿಯ ಗರ್ಭದಲ್ಲಿ ಜನಿಸಿದ. ಅವನಲಕ್ಷಣಗಳನ್ನು ಗಮನಿಸಿ ಪುರೋಹಿತರು ಈತ ಪಂಚಶಸ್ತ್ರಗಳನ್ನು ಬಳಸುವುದರಲ್ಲಿ ಪ್ರಸಿದ್ಧನಾಗುತ್ತಾನೆ. ಅವನಂಥ ಶೂರರು ಇರುವುದೇ ಸಾಧ್ಯವಿಲ್ಲ ಎಂದರು. ಮಗನಿಗೆ ರಾಜ ಪಂಚಾಯುಧ ಕುಮಾರ ಎಂದು ಹೆಸರಿಟ್ಟು ತಕ್ಷಶಿಲೆಯ ಲೋಕಪ್ರಸಿದ್ಧರಾದ ಆಚಾರ್ಯರ ಬಳಿ ಶಸ್ತ್ರಾಭ್ಯಾಸಕ್ಕೆ ಕಳುಹಿಸಿದ.

ರಾಜಕುಮಾರ ಪರಿಣಿತನಾಗಿ ಆಚಾರ್ಯರು ಕೊಟ್ಟ ಪಂಚಶಸ್ತ್ರಗಳನ್ನು ತೆಗೆದುಕೊಂಡು ವಾರಾಣಸಿಗೆ ಬರುವಾಗ ದಾರಿಯಲ್ಲಿ ಒಂದು ದಟ್ಟ ಕಾಡು ಬಂತು. ಅದರಲ್ಲಿ ಹೋಗಕೂಡದೆಂದು ಜನ ಹೇಳಿದರು. ‘ಈ ಕಾಡಿನಲ್ಲಿ ಶ್ಲೇಷಲೋಮನೆಂಬ ಯಕ್ಷನಿದ್ದಾನೆ. ಯಾರೇ ಬಂದರೂ ಕೊಂದು ಹಾಕುತ್ತಾನೆ’. ಈತ ಅವರ ಮಾತು ಕೇಳದೆ ಕಾಡಿನೊಳಗೆ ಹೋದ. ಇವನನ್ನು ಕಂಡ ಯಕ್ಷ ತನ್ನ ದೇಹವನ್ನು ತಾಳೆಯ ಮರದಷ್ಟು ಎತ್ತರವಾಗಿ ಬೆಳೆಸಿದ. ಅಸಾಧ್ಯವಾದ ದೊಡ್ಡ ತಲೆ, ಮೊರದಗಲದ ಕಣ್ಣುಗಳು, ಆನೆಯ ಕೋರೆಯಂಥ ಹಲ್ಲುಗಳು, ಬಿಳೀಮುಖ, ಬಣ್ಣಬಣ್ಣದ ಹೊಟ್ಟೆ, ನೀಲೀ ಬಣ್ಣದ ಕೈಕಾಲುಗಳು ಇವನ್ನೆಲ್ಲ ಕುಮಾರನಿಗೆ ತೋರಿಸುತ್ತ, ‘ನಿಲ್ಲು ಮುಂದೆ ಹೋಗಬೇಡ. ನೀನು ನನ್ನ ಇಂದಿನ ಆಹಾರ’ ಎಂದ. ಪಂಚಾಯುಧ ಕುಮಾರ, ‘ನನಗೆ ನಿನ್ನ ಬಗ್ಗೆ ಗೊತ್ತಿದ್ದೂ ಬಂದಿದ್ದೇನೆ. ನಿನ್ನನ್ನು ಕೊಂದುಬಿಡುತ್ತೇನೆ’ ಎಂದು ಕೂಗಿ ವಿಷಪೂರಿತವಾದ ಬಾಣಗಳನ್ನು ಬಿಟ್ಟ. ಅವು ಅವನ ಜಿಗುಟಾದ ಕೂದಲಿನಲ್ಲಿಯೇ ಸಿಕ್ಕುಹಾಕಿಕೊಂಡವು. ಯಕ್ಷನ ದೇಹವನ್ನು ತಲುಪಲೇ ಇಲ್ಲ. ಕುಮಾರ ಕತ್ತಿ ತೆಗೆದು ಯಕ್ಷನನ್ನು ಜೋರಾಗಿ ಇರಿದ. ಅದೂ ಕೂದಲಿನಲ್ಲಿಯೇ ಅಂಟಿಕೊಂಡಿತು. ಯಕ್ಷ ಗಹಗಹಿಸಿ ನಕ್ಕ. ಕುಮಾರ ಹೇಳಿದ, ‘ನಾನು ಕೇವಲ ನನ್ನ ಆಯುಧಗಳನ್ನು ನಂಬಿ ಯುದ್ಧಕ್ಕೆ ಬರಲಿಲ್ಲ. ನನ್ನ ಶಕ್ತಿಯನ್ನೇ ನಂಬಿದ್ದೇನೆ. ನಿನ್ನನ್ನು ನನ್ನ ಕೈಗಳಿಂದಲೇ ಹೊಡೆದು ಕೊಲ್ಲುತ್ತೇನೆ’ ಎಂದು ಬಲಗೈಯಿಂದ ಯಕ್ಷನ ತಲೆಯಮೇಲೆ ಪ್ರಹಾರ ಮಾಡಿದ. ಅವನ ಕೈಕೂಡ ಯಕ್ಷನ ತಲೆಯ ರೋಮಗಳ ಅಂಟಿನಲ್ಲಿ ಸಿಕ್ಕಿಹಾಕಿಕೊಂಡಿತು. ಎಡಗೈಯಿಂದ ಮತ್ತೆ ಹೊಡೆದ. ಅದೂ ಅಂಟಿಕೊಂಡಿತು. ಕಾಲಿನಿಂದ ಒದ್ದರೆ ಅವೂ ಅಂಟಿಕೊಂಡೇ ಉಳಿದವು. ಕೊನೆಗೆ ತಲೆಯಿಂದ ಎದೆಗೆ ಗುದ್ದಿದ. ತಲೆಯೂ ಅಲುಗಾಡದಂತೆ ಅಂಟಿಕೊಂಡಿತು. ಕುಮಾರ ಈಗ ಯಕ್ಷನ ದೇಹಕ್ಕೆ ಅಂಟಿಕೊಂಡು ನೇತಾಡತೊಡಗಿದ, ಆದರೂ ಆತನಿಗೆ ಭಯವಿರಲಿಲ್ಲ.

ಇದನ್ನು ಕಂಡು ಯಕ್ಷನಿಗೆ ಭಾರೀ ಆಶ್ಚರ್ಯವಾಯಿತು. ಈ ತರುಣ ನಿಜವಾಗಿಯೂ ಪರಾಕ್ರಮಶಾಲಿಯಾಗಿದ್ದಾನೆ. ನಾನು ಇಷ್ಟೊಂದು ಜನರನ್ನು ಕೊಂದು ಹಾಕಿದ್ದೇನೆ. ಹೀಗೆ ಅಸಹಾಯಕನಾಗಿದ್ದರೂ ನಿರ್ಭಯನಾಗಿದ್ದವನು ಇವನೊಬ್ಬನೇ. ಯಕ್ಷ ಕುಮಾರನನ್ನು ಕೇಳಿದ, ‘ಅಯ್ಯಾ ತರುಣ, ನಿನಗೆ ಮರಣದ ಭಯವಿಲ್ಲವೇ?’ ಕುಮಾರ ಹೇಳಿದ, ‘ನನ್ನ ಹೊಟ್ಟೆಯಲ್ಲಿ ಒಂದು ಭಯಂಕರವಾದ ವಜ್ರಾಯುಧ ಇದೆ. ನೀನು ನನ್ನನ್ನು ತಿಂದರೆ ಅದು ನಿನ್ನ ಕರುಳುಗಳನ್ನು ಚೂರುಚೂರು ಮಾಡುತ್ತದೆ. ನಾನು ಸತ್ತರೂ ಸರಿ, ನೀನು ಬದುಕಿ ಉಳಿಯುವದಿಲ್ಲ’.

ADVERTISEMENT

ಇವನ ಧೈರ್ಯವನ್ನು ಮೆಚ್ಚಿ, ‘ಯುವಕ, ನಿನ್ನ ಧೈರ್ಯಕ್ಕೆ ಮೆಚ್ಚಿ ನಿನ್ನನ್ನು ಬಿಡುತ್ತೇನೆ. ಚೆನ್ನಾಗಿ ಬದುಕು’ ಎಂದು ಅವನನ್ನು ಅಂಟಿನಿಂದ ಬಿಡಿಸಿದ. ಕುಮಾರ, ‘ಯಕ್ಷ ನೀನು ಇಷ್ಟು ಶಕ್ತಿಶಾಲಿಯಾಗಿದ್ದು ಕ್ರೂರಿ ಯಾಕಾದೆ? ನೀನು ಧರ್ಮಮಾರ್ಗದಲ್ಲಿ ನಡೆದರೆ ನಿನ್ನ ಶಕ್ತಿ ದ್ವಿಗುಣವಾಗುತ್ತದೆ. ಹಿಂಸೆ ಮಾಡಬೇಡ. ನೀನೊಬ್ಬ ಮಹಾನುಭಾವನಾಗುತ್ತೀ’ ಎಂದು ಒಪ್ಪಿಸಿ ಅವನನ್ನು ಜ್ಞಾನಮಾರ್ಗಕ್ಕೆ ತಂದು ಅಲ್ಲಿಂದ ಹೊರಟ.

ದೈಹಿಕ ಶಕ್ತಿ, ಬುದ್ಧಿ ಶಕ್ತಿಗಳು ಅವಶ್ಯವೇನೋ ನಿಜ. ಆದರೆ ಅವುಗಳಿಂದ ಸಮಾಜಕ್ಕೆ ಪ್ರಯೋಜನವಾಗುವುದು ಅವುಗಳು ಧರ್ಮಮುಖಿಯಾದಾಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.