ADVERTISEMENT

ತೇಜಸ್ವಿ ನೆನಪಿನ ಕೀಟನಾಟಕ ಲೋಕ

ನಾಗೇಶ ಹೆಗಡೆ
Published 10 ಸೆಪ್ಟೆಂಬರ್ 2014, 19:30 IST
Last Updated 10 ಸೆಪ್ಟೆಂಬರ್ 2014, 19:30 IST
ತೇಜಸ್ವಿ ನೆನಪಿನ ಕೀಟನಾಟಕ ಲೋಕ
ತೇಜಸ್ವಿ ನೆನಪಿನ ಕೀಟನಾಟಕ ಲೋಕ   

ಕೀಟ ಪ್ರಪಂಚದಲ್ಲಿ ಇದು ಸಂಭ್ರಮದ ಸಮಯ. ನಸುಬಿಸಿಲಲ್ಲಿ ಅರಳಿದ ಹೂಗಳಿಗೆ ಪಾತರಗಿತ್ತಿಗಳು ಹಲೋ ಹೇಳುತ್ತ ಹಾರಾಡುತ್ತಿದ್ದರೆ ಸಿಕಾಡಾಗಳು ಇದೀಗಷ್ಟೆ ರವ­ರವ ಭಜನೆ ಹಾಡಿ ಮಿಲನ ಮಹೋತ್ಸವ ಮುಗಿಸಿ, ಮೊಟ್ಟೆ ಇಡಲೆಂದು ತರಗೆಲೆಗಳ ಹಾಸನ್ನು ಹೊಕ್ಕುತ್ತಿವೆ. ಹಸುರು ನೀಲಿ ಸ್ಕರ್ಟ್‌ ತೊಟ್ಟ ಮಿಡತೆಗಳು ಎಕ್ಕದ ಪೊದೆಗಳ ಏಕಾಂತ­ದಲ್ಲಿ ಒಂದರ ಮೇಲೊಂದು, ಕೆಲವೊಮ್ಮೆ ಎರಡು ಮೂರು ಏರಿ ಕೂರುತ್ತ ಬಹುಮಹಡಿ ಆಟ ಆಡುತ್ತಿವೆ. ಏರೋಪ್ಲೇನ್ ಚಿಟ್ಟೆಗಳು ಕೆರೆ­ಯಂಚಿನ ನೀರಿನ ಮೇಲೆ ಸ್ಕಿಪಿಂಗ್ ಮಾಡುತ್ತ ಪುಳಕ್ ಪುಳಕ್ಕೆಂದು ಮೊಟ್ಟೆಗಳನ್ನು ನೀರೊಳಗೆ ಒಂದೊಂದಾಗಿ ಇಳಿಬಿಡುತ್ತಿವೆ.

ಗದ್ದೆ ತೋಟಗಳಲ್ಲಿ ಇದೇ ದಿನಗಳಲ್ಲಿ ಪ್ರಕೃತಿ ಡಬಲ್ ಗೇಮ್ ಆಡುತ್ತಿರುತ್ತದೆ. ಹಸುರು ತುಂಬಿದ ಹೊಲಗಳಿಗೆ ಹಂದಿ, ಕಾಡೆಮ್ಮೆ, ಮಂಗ­ಗಳಂಥ ದೊಡ್ಡ ವೈರಿಗಳು ನುಗ್ಗದಂತೆ ತಡೆಯ­ಲೆಂದು ರೈತರು ಮಾಳ ಕಟ್ಟುತ್ತ, ಬೇಲಿ ಭದ್ರ ಮಾಡುತ್ತಿದ್ದಾಗಲೇ ಇತ್ತ ಜಿಗಿಹುಳುಗಳು ಲಕ್ಷೋ­ಪಲಕ್ಷ ಸಂಖ್ಯೆಯಲ್ಲಿ ಗದ್ದೆಯ ತುಂಬೆಲ್ಲ ಲಾಂಗ್ ಜಂಪ್ ಹೈಜಂಪ್ ಮಾಡುತ್ತವೆ. ಕಬ್ಬಿನ ಗದ್ದೆಗಳಿಗೆ ನುಗ್ಗುವ ಆನೆಗಳನ್ನು, ಬರ್ಕಗಳನ್ನು ಓಡಿಸಲೆಂದು ರೈತರು ಪಟಾಕಿ, ಗಜನಿ, ಸಿಡಿ­ಮದ್ದು­ಗಳ ಸಿದ್ಧತೆಯಲ್ಲಿದ್ದರೆ ಹಿಟ್ಟುತಿಗಣೆಗಳು ನಿಶ್ಶಬ್ದವಾಗಿ ಕಬ್ಬಿನ ರವುದಿಯ ಒಳಗೆ ಅಥವಾ ಪಪಾಯಾ ತೋಟದೊಳಗೆ ನುಗ್ಗುತ್ತಿರುತ್ತವೆ.

ಕಾಫಿ ತೋಟಗಳಲ್ಲಿ ಓಡಾಟಕ್ಕೆ ಕಿರುಕುಳ ಕೊಡುವ ಹುಲ್ಲುಕಳೆಗಳನ್ನು ಸುಟ್ಟು ತೆಗೆಯ­ಲೆಂದು ಆಳುಗಳು ಘೋರ ಕಳೆನಾಶಕ ವಿಷವನ್ನು ಸುರಿಯುತ್ತಿದ್ದರೆ, ಅವರ ಕಿವಿಯ ಬಳಿ ಸಂಗೀತ ಹಾಡುತ್ತ ಬರುವ ಕೀಟಗಳು ಕಾಫಿಯ ಕಾಂಡ­ವನ್ನು ಕುಟುಕಿ ಮೊಟ್ಟೆಯಿಟ್ಟು ಪರಾರಿಯಾಗು­ತ್ತವೆ. ಕ್ರಮೇಣ ಕಾಂಡಕೊರಕ ಲಾರ್ವ ಹುಳು­ಗಳ ಸಾಮ್ರಾಜ್ಯವೇ ಇಡೀ ತೋಟಕ್ಕೆ ವಿಸ್ತರಿಸು­ತ್ತದೆ. ಅಡಿಕೆಯ ಗೊನೆಗಳಿಗೆ ಕೊಳೆರೋಗ ತಗು­ಲಿರಬಹುದೇ ಎಂದು ತೋಟದ ಮಾಲೀಕರು ಕತ್ತೆತ್ತಿ ನೋಡುತ್ತ ಸಾಗುತ್ತಿದ್ದರೆ ಅವರ ಕಾಲ ಬಳಿಯೇ ಓಡುಹುಳುಗಳು ಮೊಟ್ಟೆ ಇಡುತ್ತಿ­ರು­ತ್ತವೆ. ಆ ಮೊಟ್ಟೆಗಳೇ ನಾಳೆ ಲಾರ್ವಗಳಾಗಿ, ಅಡಿಕೆ ಮರಗಳನ್ನು ಒಣಗಿಸಿ ಬೀಳಿಸುವ ಬೇರು­ಹುಳುಗಳಾಗುತ್ತವೆ. ಅಲ್ಲೇ, ಅವುಗಳ ಗಂಟಲು­ನಾಳಕ್ಕೇ ಇಳಿದು ಭಕ್ಷಣೆ ಮಾಡಲೆಂದು ಕೂದ­ಲೆಳೆಗಿಂತ ಸಪೂರಾದ ನೆಮಟೋಡ್‌ಗಳು ನೆಲದಾಳದಲ್ಲಿ ಕಾಯುತ್ತಿರುತ್ತವೆ.

ಕೀಟಗಳ ಇಂಥ ರಂಗಿನಾಟದ ವೈಖರಿಯನ್ನು ತೋರಿಸುವ ಅಪರೂಪದ ಪ್ರದರ್ಶನವೊಂದು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಏರ್ಪಾಡಾಗಿದೆ. ಫೋಟೊಗ್ರಫಿ, ಲೇಖನ, ಕಥೆ ಕಾದಂಬರಿಗಳ ಮೂಲಕ ನಿಸರ್ಗದ ಬಹಳಷ್ಟು ನಿಗೂಢಗಳನ್ನು ತೆರೆದಿಟ್ಟ ಪೂರ್ಣಚಂದ್ರ ತೇಜಸ್ವಿ ಇಂದು ಬದುಕಿದ್ದಿದ್ದರೆ ಅವರಿಗೆ 75 ತುಂಬುತ್ತಿತ್ತು. ಅವರ ನೆನಪಿನ ಸಂದ­ರ್ಭದಲ್ಲಿ ರಾಜ್ಯದ ಖ್ಯಾತ ಹವ್ಯಾಸಿ ಛಾಯಾ­ಗ್ರಾಹಕರು ತಾವು ಕೈದು ಮಾಡಿದ ಕೀಟಗಳ, ಆರ್ಕಿಡ್‌ಗಳ ಸುಂದರ ಫೋಟೊ­ಗ­ಳನ್ನು ಇಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ (ಕಳೆದ ವರ್ಷ ಇದೇ ದಿನಗಳಲ್ಲಿ ತೇಜಸ್ವಿಯವರ ಪಕ್ಷಿ ಪ್ರಪಂಚದ ಪ್ರದರ್ಶನಗಳಿದ್ದವು). ಶಾಲಾ ಮಕ್ಕಳಿಗೆ ಅಲ್ಲಿ ಕಲಿಕೆಯ ರಸನಿಮಿಷಗಳು ಎಷ್ಟೊಂದಿವೆ. ಬೈನಾಕ್ಯುಲರ್, ಭೂತಗನ್ನಡಿ ತಂದರೆ ಉದ್ಯಾನದ ಪರಿಸರದಲ್ಲಿ ಪ್ರಾತ್ಯಕ್ಷಿಕೆ ಕೊಡಲು ಎಷ್ಟೊಂದು ಪಕ್ಷಿಗಳು, ಕೀಟಗಳು ಕಾಯುತ್ತಿವೆ.

ಕಾಕತಾಳೀಯ ಏನೆಂದರೆ ಇಂಗ್ಲೆಂಡಿನ ಮಕ್ಕ­ಳಿಗೆ ಇಂಥದ್ದೇ ವಿಜ್ಞಾನ ಮಹೋತ್ಸವ ಏರ್ಪಾ­ಟಾ­ಗಿತ್ತು. ದೇಶದ ವಿವಿಧ ನಗರಗಳ 400 ಶಾಲೆಗಳ 30 ಸಾವಿರ ಮಕ್ಕಳನ್ನು ಹೂದೋಟ­ಗಳಿಗೆ ಅಟ್ಟಲಾಗಿತ್ತು. ದುಂಬಿಗಳನ್ನು (ಬಂಬಲ್ ಬೀ) ಹುಡುಕಿ ಹುಡುಕಿ ಗಣತಿ ಮಾಡುವ ಕೆಲಸ­ದಲ್ಲಿ ಮಕ್ಕಳು ತೊಡಗಿದ್ದರು. ಅವರು ಸಂಗ್ರಹಿ­ಸಿದ ಮಾಹಿತಿಯ ಮುಖ್ಯಾಂಶಗಳನ್ನು ಬಿಬಿಸಿ ನಿನ್ನೆಯಷ್ಟೇ ಬಿಡುಗಡೆ ಮಾಡಿದೆ. ನಗರದಾಚಿನ ಪ್ರದೇಶಗಳಿಗಿಂತ ನಗರದ ಮಧ್ಯೆಯೇ ಹೆಚ್ಚಿನ ಸಂಖ್ಯೆಯ ದುಂಬಿಗಳಿವೆ (ಗುಂಗೀ ಹುಳು) ಎಂಬುದು ಈ ಸಮೀಕ್ಷೆಯಿಂದ ಗೊತ್ತಾಗಿದೆ. ಬ್ರಿಟಿಷ್ ನಗರವಾಸಿಗಳು ತಮ್ಮ ಮನೆಯ ಸುತ್ತ­ಲಿನ ಕೈದೋಟಗಳಲ್ಲಿ ನಸುನೀಲಿಯ, ಪರಿಮಳ­ಯುಕ್ತ ಲ್ಯಾವೆಂಡರ್ ಹೂಗಳನ್ನೇ ಹೆಚ್ಚಾಗಿ ಬೆಳೆ­ಯುವುದರಿಂದ ದುಂಬಿಗಳ ಸಂಖ್ಯೆ ಹಿಂದೆಂದಿ­ಗಿಂತ ಹೆಚ್ಚಾಗಿದೆ ಎಂಬ ತೀರ್ಮಾನಕ್ಕೆ ವಿಜ್ಞಾನಿ­ಗಳು ಬಂದಿದ್ದಾರೆ.

ಈ ಗಣತಿಯಿಂದ ನಗರ ಪರಿಸರದ ತುಸು ಸ್ಪಷ್ಟ ಚಿತ್ರಣ ಸಿಕ್ಕಂತಾಗಿದೆ. ವಿಜ್ಞಾನಿಗಳ ಕೆಲಸ ತುಸು ಹಗುರಾಗಿದೆ. ಏಕಕಾಲಕ್ಕೆ ಅಷ್ಟೊಂದು ಸ್ಥಳ­ಗಳನ್ನು ಭೇಟಿ ಮಾಡಲು ಅವರಿಂದ ಸಾಧ್ಯ­ವಾಗು­ತ್ತಿರಲಿಲ್ಲ. ಗಣತಿಯ ಮುನ್ನ ಮಕ್ಕಳಿಗೆ ಸೂಕ್ತ ತರಬೇತಿ ನೀಡಿದ್ದಲ್ಲದೆ, ಸಮೀಕ್ಷೆಯ ಸಂದ­ರ್ಭದಲ್ಲಿ ತಜ್ಞರು ಅನಿರೀಕ್ಷಿತ ಎಂಟ್ರಿ ಕೊಟ್ಟು ಅಲ್ಲಲ್ಲಿ ತಾಳೆ ನೋಡುತ್ತಿದ್ದರು. ‘ಮಕ್ಕಳು ನಮ­ಗಿಂತ ಅಚ್ಚುಕಟ್ಟಾಗಿ ಗಣತಿ ನಡೆಸಿದ್ದಾರೆ’ ಎಂದು ಇಕಾಲಜಿ ಅಧ್ಯಯನ ಸಂಸ್ಥೆಯ ಸಂಶೋಧಕಿ ಡಾ.ಹೆಲೆನ್ ರಾಯ್ ಹೇಳಿದ್ದನ್ನೂ ಬಿಬಿಸಿ ವರದಿ ಮಾಡಿದೆ. ಎಲ್ಲಕ್ಕಿಂತ ದೊಡ್ಡ ಲಾಭ ಏನೆಂದರೆ ಕೀಟಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಹುಟ್ಟುವಂತಾ­ಗಿದೆ. ಏನೂ ತರಬೇತಿ ಇಲ್ಲದ ಒಬ್ಬ ತೇಜಸ್ವಿ ತನ್ನ ಪರಿಸರದ ಸುತ್ತಲಿನ ಜೀವಲೋಕದ ಬಗ್ಗೆ ಅಷ್ಟೊಂದು ಮಾಹಿತಿ ಸಂಗ್ರಹಿಸಿ, ಅಷ್ಟೊಂದು ಸ್ವಾರಸ್ಯಕರ ಕತೆ ಬರೆದು ನೂರಾರು ಜನರಿಗೆ ಪರಿ­ಸರ ಅಧ್ಯಯನದ ಬಗ್ಗೆ, ಫೋಟೊಗ್ರಫಿಯ ಬಗ್ಗೆ ಪ್ರೇರಣೆ ನೀಡಿದ್ದಾರೆಂದರೆ, ನಮ್ಮ ಪ್ರತಿ ಶಾಲೆ­ಯಲ್ಲೂ ಅಂಥ ಒಂದಿಬ್ಬರನ್ನು ರೂಪಿಸ­ಬಹುದಲ್ಲ?   

ಅಂದಹಾಗೆ ಚಾರ್ಲ್‌ಸ ಡಾರ್ವಿನ್‌ ಕೂಡ ಹಿಂದೆ ಈ ಬಂಬಲ್ ದುಂಬಿಗಳ ಸಮೀಕ್ಷೆ ನಡೆ­ಸಿದ್ದ. ಬೆಕ್ಕುಗಳು ಹೆಚ್ಚಾಗಿ ಕಂಡುಬರುವ ಪಟ್ಟಣ­ಗಳ ಸುತ್ತ ಕ್ಲೋವರ್ ಬೆಳೆ ಜಾಸ್ತಿ ಬರುತ್ತದೆ ಎಂಬ ಸ್ವಾರಸ್ಯಕರ ಸತ್ಯವನ್ನು ಹೊರಗೆಡವಿದ್ದ: ಆತನ ಸಂಶೋಧನೆ ಇಂದಿಗೂ ಇಕಾಲಜಿ ಪಠ್ಯ­ಗಳಲ್ಲಿ ಅಳಿಸಲಾಗದ ಪಾಠವೆನಿಸಿದೆ. ಹೇಗೆಂದರೆ, ದುಂಬಿಗಳ ಸಂಖ್ಯೆ ಜಾಸ್ತಿ ಇದ್ದರೆ ರೆಡ್‌ ಕ್ಲೋವರ್‌ ಹೂಗಳ ಪರಾಗಸ್ಪರ್ಶ ಚೆನ್ನಾಗಿ ನಡೆ­ಯುತ್ತದೆ. ಫಸಲು ಚೆನ್ನಾಗಿ ಬರುತ್ತದೆ. ದುಂಬಿ­ಗಳು ನೆಲದ ಪೊಟರೆಗಳಲ್ಲಿ ಮುಷ್ಟಿ ಗಾತ್ರದ ಗೂಡು ಕಟ್ಟಿ ಮೊಟ್ಟೆ ಇಡುತ್ತವೆ. ಅದರ ಲಾರ್ವಾ ಮರಿಗಳೆಂದರೆ ಇಲಿಗಳಿಗೆ ತುಂಬಾ ಇಷ್ಟ. ಅವು ದುಂಬಿಯ ಗೂಡುಗಳನ್ನು ಹುಡುಕಿ ಹುಡುಕಿ ದಾಳಿ ನಡೆಸುತ್ತವೆ. ಇಲಿಗಳ ಕಾಟ ಜಾಸ್ತಿ ಇರುವಲ್ಲೆಲ್ಲ ಕ್ಲೋವರ್ ಬೆಳೆ ಜಾಸ್ತಿ ಬರ­ಲಾರದು. ಆದರೆ ಬೆಕ್ಕುಗಳನ್ನು ಸಾಕಿಕೊಳ್ಳು­ವ­ವರ ಸಂಖ್ಯೆ ಜಾಸ್ತಿ ಇದ್ದರೆ ಅಂಥ ಊರುಗಳ ಸುತ್ತ­ಮುತ್ತ ಇಲಿಗಳ ಹಾವಳಿ ಕಡಿಮೆ, ದುಂಬಿ­ಗಳ ಸಂಖ್ಯೆ ಜಾಸ್ತಿ ಇರುತ್ತದೆ. ಹಾಗಾಗಿ ಅಲ್ಲಿ ಕ್ಲೋವರ್ ಬೆಳೆ ಚೆನ್ನಾಗಿ ಬರುತ್ತದೆ-. ಇದು ಡಾರ್ವಿನ್‌ ಕಂಡುಕೊಂಡ ಸತ್ಯ.

ಅಂಥ ಸಂಶೋಧಕ ಮನಃಸ್ಥಿತಿ ಇರುವ ಸಮಾ­ಜ­ದಲ್ಲೇ ವ್ಯಾಲೇಸ್, ಹಾಲ್ಡೇನ್, ಡೇವಿಡ್ ಅಟೆನ್‌ಬರೊನಂಥವರು  ರೂಪುಗೊಳ್ಳುತ್ತಾರೆ. ನಿಸರ್ಗ ವಿಜ್ಞಾನದ ಬಹಳಷ್ಟು ಕ್ರಾಂತಿಕಾರಿ ಸಂಶೋಧನೆಗಳು ಬ್ರಿಟನ್ ಎಂಬ ಆ ಪುಟ್ಟ ದೇಶ­ದಲ್ಲಿ ನಡೆದಿವೆ. ನಮ್ಮಲ್ಲಿ ಮಕ್ಕಳ ಪಾಠಗಳಲ್ಲಿ ನಿಸರ್ಗದ ಚೆಂದದ ಕತೆಗಳು ಅಪರೂಪಕ್ಕೆ ಸಿಕ್ಕಾವು ನಿಜ. ಈ ನಾಡಿನಲ್ಲಿ ಮರಿದುಂಬಿ­ಯಾಗಿ­ಯಾದರೂ ಹುಟ್ಟಬೇಕೆಂದು ಬನವಾಸಿ ದೇಶದ ಕುರಿತು ಪಂಪ ಹಾಡು ಕಟ್ಟಿದ್ದನ್ನು (ಕನ್ನಡ ಓದಬಲ್ಲ) ಮಕ್ಕಳು ಬಾಯಿಪಾಠ ಕೂಡ ಮಾಡ­ಬಹುದು ನಿಜ. ಆದರೆ ದುಂಬಿಗಳನ್ನು ಹೂ­ದೋಟ­ಗಳಲ್ಲಿ ಗುರುತಿಸುವುದು, ಬಲೆ ಹಾಕಿ ನಾಜೂಕಾಗಿ ಹಿಡಿದು ಹೆಣ್ಣುಗಂಡುಗಳನ್ನು ಗುರುತಿಸಿ ಮತ್ತೆ ಹಾರಿ ಬಿಡುವುದು, ನಕಾಶೆಯ ಮೇಲೆ ಗೆರೆ ಎಳೆದು ವ್ಯವಸ್ಥಿತ ಸಮೀಕ್ಷೆ ನಡೆಸಿ ವರದಿ ತಯಾರಿಸುವುದು ಇವೆಲ್ಲ ಎಲ್ಲಿದೆ?

ಬ್ರಿಟ­ನ್ನಿನಲ್ಲಿ ಹದಿನೈದು ವರ್ಷಗಳ ಹಿಂದೆ ಹೀಗೇ ಅಲ್ಲಿನ ಮಕ್ಕಳಿಂದ ‘ಲೇಡಿ ಬರ್ಡ್‌’, ಅಂದರೆ ಗುಲ­ಗಂಜಿ ಹುಳುಗಳ ರಾಷ್ಟ್ರವ್ಯಾಪಿ ಸಮೀಕ್ಷೆ ನಡೆಸಿದ್ದರು (ಆರೆಂಟು ವರ್ಷಗಳ ಹಿಂದೆ ಅಲ್ಲಿ ಇನ್ನೊಂದು ಮಜಾ ಪರೀಕ್ಷೆ ನಡೆದಿತ್ತು: ಇಡೀ ರಾಷ್ಟ್ರದ ಎಲ್ಲ ಮಕ್ಕಳನ್ನೂ ಒಂದು ನಿಗದಿತ ಮುಹೂ­ರ್ತದಂದು ಎರಡು ಅಡಿ ಎತ್ತರದ ಬೆಂಚ್ ಮೇಲಿಂದ ಏಕಕಾಲಕ್ಕೆ ಜಂಪ್ ಮಾಡಿಸಿ ಭೂಕಂಪ ಆದೀತೇ ಎಂದು ರಿಕ್ಟರ್ ಮಾಪಕದಲ್ಲಿ ಅಳೆದು ನೋಡಿದ್ದರು). ಬರೀ ಮಕ್ಕಳನ್ನಷ್ಟೇ ಅಲ್ಲ, ಈಗೀಗ ದೊಡ್ಡವರನ್ನೂ ಹುರಿದುಂಬಿಸಿ ಅವ­ರಿಂದಲೇ ಅಲ್ಲಿ ವಿವಿಧ ಬಗೆಯ ವೈಜ್ಞಾನಿಕ ಸಮೀಕ್ಷೆ ನಡೆಸಲಾಗುತ್ತಿದೆ.

ನಗರಗಳಲ್ಲಿ ಮರ­ಗಳನ್ನು ಕೊರೆಯುವ ನಾನಾ ಬಗೆಯ ಹುಳುಗಳ ಸಮೀಕ್ಷೆ, ಚಿಟ್ಟೆಗಳ ಗಣತಿ, ಜೇಡರ ಸಮೀಕ್ಷೆ, ಹೆಜ್ಜೇನುಗಳ ಗಣತಿ ಇವನ್ನೆಲ್ಲ ನಾಗರಿಕರ ಸಹಾ­ಯದಿಂದಲೇ ಕೈಗೊಳ್ಳಲಾಗುತ್ತದೆ. ಜನರನ್ನು ಹೀಗೆ ತೊಡಗಿಸಿಕೊಂಡರೆ ನಮ್ಮ ಪಟ್ಟಣಗಳಲ್ಲೂ ಎಷ್ಟೊಂದು ಬಗೆಯ ಸಮೀಕ್ಷೆ ನಡೆಸಲು ಸಾಧ್ಯ­ವಿದೆ. ಎಷ್ಟು ಜಾತಿಯ ಸೊಳ್ಳೆಗಳು ನಮ್ಮಲ್ಲಿವೆ, ಎಷ್ಟು ಬಗೆಯ ನಿಶಾಚರಿ ಹೆಗ್ಗಣಗಳು, ಅವುಗಳ ಬೇಟೆಗೆ ಯಾವ ಯಾವ ತೆರನಾದ ಗೂಬೆಗಳು, ಅವುಗಳ ಬಗ್ಗೆ ಏನೆಲ್ಲ ಮೂಢನಂಬಿಕೆಗಳಿವೆ ಇತ್ಯಾದಿ ಸಮೀಕ್ಷೆ ಹೇಗೂ ಇರಲಿ; ಮನೆಯ ಸುತ್ತಲಿನ ನಾಲ್ಕು ಮರಗಳ ಹೆಸರು ಹೇಳಲು ಬಾರ­ದವರು ಎಷ್ಟು ಮಂದಿ ಇದ್ದಾರೆ; ‘ಎಲೆ ಉದು-­ರುತ್ತದೆ’, ‘ಹಕ್ಕಿ ಪಿಕ್ಕೆ ಹಾಕುತ್ತದೆ’, ‘ಬಾವಲಿ­ಗಳು ಕೂರುತ್ತವೆ’, ‘ವಾಸ್ತು ದೋಷ’ ಎಂಬೆಲ್ಲ ನೆಪ ಹೇಳುತ್ತ ಮನೆಗೆ ನೆರಳಾದ ಮರ­ಗಳನ್ನು ಕಡಿಸಬೇಕೆನ್ನುವವರ ಸಂಖ್ಯೆ ಎಷ್ಟಿದೆ ಎಂಬುದಾದರೂ ಗೊತ್ತಾದೀತು.

ತೇಜಸ್ವಿಯವರ ನೆನಪಿನ ಈ ಉತ್ಸವದಲ್ಲಿ ಬೆಂಗಳೂರಿನಲ್ಲಿರುವ ಎನ್‌ಬಿಐಐ ಎಂಬ ಸಂಸ್ಥೆ ಕೂಡ ಭಾಗಿಯಾಗಿದೆ. ಇದು ‘ಕೃಷಿ ಉಪ­ಯೋಗಿ ಕೀಟಗಳ ರಾಷ್ಟ್ರೀಯ ಕಾರ್ಯಶಾಲೆ’ (ನ್ಯಾಶನಲ್ ಬ್ಯೂರೊ). ಅಲ್ಲಿನ ಕೀಟ ವಿಜ್ಞಾನಿ­ಗಳು ಸಾಕಷ್ಟು ಜನೋಪಯೋಗಿ ಕೆಲಸಗಳನ್ನು ಮಾಡುತ್ತಿದ್ದಾರೆ. ನಮ್ಮ ಸುತ್ತಮುತ್ತ ಇರುವ ಉಪಕಾರಿ, ಉಪದ್ರವಕಾರಿ ಕೀಟಗಳ ಬಗ್ಗೆ ಎಳೆಯ­ರಿಗೆ, ದೊಡ್ಡವರಿಗೆ ಪ್ರಾತ್ಯಕ್ಷಿಕೆ ಸಿಗಲೆಂದು ಒಂದು ಚಿಕ್ಕ ಜೀವಂತ ಮ್ಯೂಸಿಯಂ ನಿರ್ಮಿಸಿ­ದ್ದಾರೆ. ಕೀಟಗಳನ್ನೇ ಕೀಟಗಳ ವಿರುದ್ಧ ಯುದ್ಧಾ­ಸ್ತ್ರ­ವಾಗಿ ರೂಪಿಸುತ್ತಿದ್ದಾರೆ. ಯಾವುದೇ ರಾಜ್ಯ­ದಲ್ಲಿ ಕೀಟಗಳ ಹಾವಳಿ ಅತಿಯಾದರೆ ಅವುಗಳ ಸಮೀಕ್ಷೆಗೆ ಇಲ್ಲಿಂದ ತಜ್ಞರು ಹೋಗುತ್ತಿರು­ತ್ತಾರೆ.

ನಮ್ಮ ಅಡಿಕೆ ತೋಟಗಳಲ್ಲಿ ಬೇರುಹುಳು­ಗಳನ್ನು ಅತ್ಯಂತ ದಕ್ಷತೆಯಿಂದ ತಿಂದು ಮುಗಿಸ­ಬಲ್ಲ ಒಂದು ನೆಮಟೋಡ್ ಪ್ರಭೇದವನ್ನು ಪತ್ತೆ ಹಚ್ಚಿದ್ದಾರೆ. ಅವುಗಳ ಬೀಜಾಣುಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಿ ತೋಟಗಾರಿಕೆ ಸಂಸ್ಥೆಯ ಮೂಲಕ ಶಿವಮೊಗ್ಗ ಭಾಗದ ರೈತರಿಗೆ ವಿತರಿಸುವಲ್ಲಿ ನೆರವಾಗಿದ್ದಾರೆ. ಬೇರುಹುಳ ಹಾವಳಿಯಿಂದ ಕಂಗಾಲಾದ ರೈತರು ಕ್ಲೋರ್ ಪೈರಿ­ಫಾಸ್, ರೆಡೊಮಿಲ್, ಥಿಮೆಟ್ ಮುಂತಾದ ಘೋರ ವಿಷಗಳನ್ನು ಅಡಿಕೆ ಮರಗಳ ಬಳಿ ಇನ್ನು ಮೇಲೆ ಸುರಿಯಬೇಕಾಗಿಲ್ಲ. ಹಾಗೆಯೇ ಕಬ್ಬು, ಪಪಾಯಾ ತೋಟಗಳಲ್ಲಿ ಹಾವಳಿ ಎಬ್ಬಿಸುವ ಹಿಟ್ಟುತಿಗಣೆಗಳ ವಿರುದ್ಧ, ಕಾಫಿಯ ಕಾಂಡಕೊರಕ ಹುಳುಗಳ ವಿರುದ್ಧ ಕೀಟಗಳನ್ನೇ ಛೂಬಿಡುತ್ತಿದ್ದಾರೆ. ವಿಷ ರಸಾಯ­ನಗಳ ಬಳಕೆಗೆ ಬದಲೀ ಉಪಾಯ ಹುಡುಕು­ತ್ತಿ­ದ್ದಾರೆ. ಇಂಥದ್ದೊಂದು ಸಂಸ್ಥೆ ರಾಷ್ಟ್ರದಲ್ಲಿ ಬೇರೆಲ್ಲೂ ಇಲ್ಲ.

ನಮ್ಮ ರಾಜ್ಯಕ್ಕೆ ಐಐಟಿ ಬೇಕು, ಎಐಐ­ಎಮ್­ಎಸ್ ಬೇಕು ಎಂದೆಲ್ಲ ಪಟ್ಟು ಹಿಡಿಯುವವರು ಬೇಕಾದಷ್ಟು ಮಂದಿ ಇದ್ದಾರೆ. ನಮ್ಮಲ್ಲೇ ಇರುವ ರಾಷ್ಟ್ರೀಯ ಸಂಸ್ಥೆಗಳ ಸೂಕ್ತ ಪ್ರಯೋಜನ ಪಡೆಯುವವರ ಸಂಖ್ಯೆ ತೀರ ಕಡಿಮೆ ಇದೆ. ತೇಜಸ್ವಿ ನೆನಪಿನ ಪ್ರದರ್ಶನಕ್ಕೆ ಮಕ್ಕಳನ್ನು ಕಳಿಸಲು ‘ಡಿಡಿಪಿಐಯಿಂದ ನಿರ್ದೇಶನ ಬಂದಿಲ್ಲ’ ಎಂದು ಗೊಣಗುವ ಶಾಲೆ-ಕಾಲೇಜುಗಳು ಬೇಕಾ­ದಷ್ಟಿವೆ. ಮಕ್ಕಳಿಗೆ ಇಂಥ ಕಲಿಕೆಯೂ ಬೇಕೆಂದು ಶಾಲೆಗಳನ್ನು ಒತ್ತಾಯಿಸುವ ಪಾಲಕರ ಸಂಖ್ಯೆ ತೀರ ಕಡಿಮೆ ಇದೆ. ಇಂಥ ಸಂಚಾರಿ ಕೀಟ ಪ್ರದ­ರ್ಶನ ತಮ್ಮ ಶಾಲೆಗೂ ಬರಲೆಂದು ಹಾರೈಸುವ ಶಿಕ್ಷಕರು ಬೇಕಾದಷ್ಟಿದ್ದಾರೆ. ಕೊಂಡೊಯ್ಯ­ಬೇಕೆಂಬ ಉತ್ಸಾಹಿ ಅಧಿಕಾರಿಗಳ ಸಂಖ್ಯೆ ತೀರ ಕಡಿಮೆ ಇದೆ.  ಕಡತಗಳಿಗೆ ಕೆಂಪುಪಟ್ಟಿ ಬಿಗಿಯುವುದನ್ನು ಬ್ರಿಟಿ­­ಷರಿಂದ ಕಲಿತ ನಾವು ಅವರ ನಿಸರ್ಗ ಪ್ರೀತಿಯನ್ನು ಕಲಿಯುವುದು ಯಾವಾಗಲೊ?

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.