ದಾನಿಯಾದಡೇನು ಅವನು ಬೇಡಿಲ್ಲದರಿಯಬಾರದು.
ರಣರಂಗ ಧೀರನಾದಡೇನು ಅಲಗಲಗು ಹಳಚಿದಲ್ಲದರಿಯಬಾರದು.
ಸ್ನೇಹವಾದಡೇನು ಅಗಲಿದಲ್ಲದರಿಯಬಾರದು.
ಹೇಮಜಾತಿಯಾದಡೇನು ಒರೆದಲ್ಲದರಿಯಬಾರದು.
ಮಹಾಲಿಂಗ ಕಲ್ಲೇಶ್ವರನ ಘನವನರಿದೆಹೆನೆಂದಡೆ,
ಸಂಸಾರಸಾಗರವ ದಾಂಟಿದಲ್ಲದರಿಯಬಾರದು.
-ಹಾವಿನಹಾಳ ಕಲ್ಲಯ್ಯ
ಹೇಳಿಕೆ-ಕೇಳಿಕೆಗಳನ್ನು ನಂಬದೆ, ಪ್ರಯೋಗಬದ್ಧ ಪ್ರಮಾಣಗಳ ಆಧಾರದಿಂದಲೇ ತಮ್ಮ ಯೋಚನೆಗಳನ್ನು ಸಾಕಾರ ಮಾಡಿಕೊಂಡವರು ಶರಣರು. ಅವರ ಈ ನಡೆ, ‘ಪ್ರತ್ಯಕ್ಷ ಕಂಡರೂ ಪ್ರಮಾಣಿಸಿಯೇ ಅರಿ’ಯಬೇಕೆಂಬ ಲೋಕರೂಢಿಯ ಕ್ರಿಯಾತ್ಮಕ ರೂಪ. ಹೀಗೆ ನಡೆದದ್ದರಿಂದಲೇ ಅವರ ಯೋಜನೆಗಳೆಲ್ಲ ಕೈಗೂಡಲು ಸಾಧ್ಯವಾಯಿತಷ್ಟೇ ಅಲ್ಲ; ಅದು ಅನುಮಾನ ರಹಿತ ಪರಿಪೂರ್ಣ ಕ್ರಮವೂ ಆಯ್ತು. ಶರಣರ ಇಂಥ ಪ್ರಾಯೋಗಿಕ ನಡೆಗೆ ಸಮರ್ಥ ಸಾಕ್ಷಿ ಹಾವಿನಹಾಳ ಕಲ್ಲಯ್ಯನ ವಚನ.
Podcast ಕೇಳಿ:ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–20
ಕಲ್ಲಯ್ಯ ಈ ವಚನದಲ್ಲಿ ದಾನಿ, ರಣರಂಗ ಧೀರ, ಗೆಳೆತನ ಮತ್ತು ಬಂಗಾರ-ಈ ನಾಲ್ಕೂ ಮೌಲಿಕ ಸಂಗತಿಗಳ ಮೂಲ ಗುಣಗಳನ್ನು ಅರಿಯುವ ಪ್ರಾಯೋಗಿಕ ಮಾರ್ಗ ಸೂಚಿಸುತ್ತಾನೆ. ಈ ನಾಲ್ಕೂ ಸಂಗತಿಗಳ ಗುಣ ಮತ್ತು ಮೌಲ್ಯಗಳ ಬಗ್ಗೆ ಎಲ್ಲರೂ ಸಾಮಾನ್ಯವಾಗಿ ಸದಭಿಪ್ರಾಯವನ್ನೇ ಹೊಂದಿರುತ್ತಾರೆ. ಹೀಗಿರುವ ಸಂದೇಹಾತೀತ ಸಂಗತಿಗಳನ್ನೂ ಹಾಗೆಯೇ ಒಪ್ಪದೆ, ಅವುಗಳನ್ನೂ ಪರೀಕ್ಷೆಗೊಳಪಡಿಸಿಯೇ ಸ್ವೀಕರಿಸಬೇಕೆನ್ನುತ್ತಾನೆ ಕಲ್ಲಯ್ಯ. ಇದಕ್ಕೆ ಆತ ಹೇಳುವ ಪರೀಕ್ಷಾ ಕ್ರಮ ಕುತೂಹಲಕಾರಿ.
ದಾನಿಯೆಂದರೆ ಕೊಡುಗೈಗೆ ಹೆಸರಾದವ. ಆದರೆ ಅಂಥ ದಾನಿಗೂ ದಾನದ ಮಹತ್ವ ಗೊತ್ತಾಗಬೇಕಾದರೆ ಮೊದಲು ಅವನೂ ಬೇಡಬೇಕೆನ್ನುತ್ತಾನೆ ಕಲ್ಲಯ್ಯ. ರಣರಂಗ ಧೀರನಾದವನು ಮಹಾವೀರನಾಗಿದ್ದರೂ, ಖಡ್ಗದೊಂದಿಗೆ ಎದುರಾಗಿಯೇ ಆತನ ವೀರಗುಣವನ್ನು ಅರಿಯಬೇಕೆಂಬುದು ಅವನ ಅಭಿಮತ. ಸ್ನೇಹ ಅಥವಾ ಗೆಳೆತನದ ನಿಜವಾದ ಗಟ್ಟಿತನ ತಿಳಿಯಲು ಮೊದಲು ಅಗಲಿ ನೋಡಬೇಕೆನ್ನುತ್ತಾನೆ ಆತ. ಹಾಗೆಯೇ, ಗುಣ ಮತ್ತು ಮೌಲ್ಯದ ಬಗ್ಗೆ ಯಾರ ತಕರಾರೂ ಇರಲಾರದ ಬಂಗಾರವನ್ನೂ ಒರೆಗಲ್ಲಿಗೆ ಹಚ್ಚಿದ ನಂತರವೇ ಅದನ್ನು ಸ್ವೀಕರಿಸಬೇಕೆನ್ನುತ್ತಾನೆ ಅವನು. ಹೀಗೆ ಗುಣಾತಿಶಯಗಳಿಂದ ಕೂಡಿದ ವ್ಯಕ್ತಿ ಮತ್ತು ವಸ್ತುಗಳನ್ನು, ಆ ಗುಣಾತಿಶಯಗಳ ಬೆನ್ನು ಹಿಡಿದೇ ಅವುಗಳ ನಿಜವಾದ ಅಂತಃಸ್ಸತ್ವವನ್ನು ಅರಿತು, ಅದಾದ ನಂತರವೇ ಅವುಗಳನ್ನು ಸ್ವೀಕರಿಸಬೇಕೆಂಬ ವಿನೂತನ ಕ್ರಮ ಸೂಚಿಸುತ್ತಾನೆ ಕಲ್ಲಯ್ಯ ಇಲ್ಲಿ.
ಇಂಥ ಉದಾಹರಣೆಗಳ ಮೂಲಕ ಅನುಭಾವದ ಜಗತ್ತನ್ನು ಪ್ರವೇಶಿಸುವ ವಚನವು, ಮಹಾಲಿಂಗ ಕಲ್ಲೇಶ್ವರನನ್ನು ಅರಿಯಬೇಕೆಂದರೆ, ಸಂಸಾರ ಸಾಗರವನ್ನು ದಾಟಿರಲೇಬೇಕೆಂಬ ಪರೀಕ್ಷಾ ಅರ್ಹತೆಯನ್ನು ನಿಗದಿಪಡಿಸುತ್ತದೆ. ಉಳಿದ ಧರ್ಮ ಮತ್ತು ದರ್ಶನಗಳಲ್ಲಿ ಸಂಸಾರವು ವರ್ಜ ಹಾಗೂ ಅದು ವೈರಾಗ್ಯಕ್ಕೆ ವಿರೋಧಿ ಎಂಬ ಭಾವನೆಯಿದೆ. ಆದರೆ ಶರಣರು ಸಾಂಸಾರಿಕ ಬದುಕಿಗೇ ಮೊದಲ ಆದ್ಯತೆ ಕೊಟ್ಟು, ಅದನ್ನು ದಾಟಿ ಬಂದಾಗಲೇ ಅನುಭಾವ ಸಾಧನೆಗೆ ನೆಲೆ-ಬೆಲೆ ದೊರಕಲು ಸಾಧ್ಯ ಎಂಬ ನಿಯಮ ಹಾಕಿಕೊಂಡರು. ಇದನ್ನೇ ಖಚಿತವಾಗಿ ಪ್ರತಿಪಾದಿಸುತ್ತದೆ ಕಲ್ಲಯ್ಯನ ವಚನ.
ಲೌಕಿಕ ಮತ್ತು ಆನುಭಾವಿಕ ಹೀಗೆ ಯಾವ ಕ್ಷೇತ್ರದ ವಸ್ತು-ವಿದ್ಯಮಾನಗಳನ್ನಾದರೂ, ಕೇವಲ ರೂಢಿಗತ ನಂಬಿಕೆಗಳಿಂದ ಮಾತ್ರ ಸ್ವೀಕರಿಸದೆ, ಎಲ್ಲವನ್ನೂ ಪರೀಕ್ಷೆಯ ಒರೆಗಲ್ಲಿಗೆ ಹಚ್ಚಿದ ನಂತರವೇ ಒಪ್ಪಿಕೊಳ್ಳಬೇಕೆಂಬ ಪ್ರಾಯೋಗಿಕ ಮಾರ್ಗವನ್ನು ಪ್ರಸ್ತುತ ವಚನ ಸೂಚಿಸುತ್ತದೆ. ಶರಣರ ವೈಚಾರಿಕ ಮತ್ತು ತಾರ್ಕಿಕ ಪ್ರಜ್ಞೆಗೆ ಸಾಕ್ಷಿಯಾಗಿದೆ ಹಾವಿನಹಾಳ ಕಲ್ಲಯ್ಯನ ಈ ವಚನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.