ADVERTISEMENT

ಅಕ್ರಮಗಳಿಗೆ ಕಡಿವಾಣ ಹಾಕಲು ಸೂಚನೆ

ಬ್ಯಾಂಕ್‌ ಅಧಿಕಾರಿಗಳು, ರಾಜಕೀಯ ಪಕ್ಷಗಳು, ಮುದ್ರಣ ಮಾಲೀಕರೊಂದಿಗೆ ಸಭೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 10:10 IST
Last Updated 29 ಮಾರ್ಚ್ 2018, 10:10 IST

ಧಾರವಾಡ: ‘ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬ್ಯಾಂಕ್‌ಗಳ ಮೂಲಕ ನಡೆಯಬಹುದಾದ ಅನುಮಾನಾಸ್ಪದ ವ್ಯವಹಾರಗಳು, ಹಣ ಪಡೆಯುವ ಹಾಗೂ ಠೇವಣಿ ಇಡುವವರ ಮಾಹಿತಿ ನೀಡಬೇಕು’ ಎಂದು ಚುನಾವಣಾಧಿಕಾರಿ ಡಾ. ಎಸ್‌.ಬಿ.ಬೊಮ್ಮನಹಳ್ಳಿ ಸೂಚಿಸಿದರು.

ಜಿಲ್ಲೆಯ ಬ್ಯಾಂಕ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಆರ್‌ಟಿಜಿಎಸ್‌, ನೆಫ್ಟ್ ಮತ್ತು ಇ–ಪಾವತಿ ಮೂಲಕ ಕೆಲವು ವ್ಯಕ್ತಿಗಳ ಖಾತೆಗಳಿಗೆ ನಿಯಮಿತವಾಗಿ ಹಣ ವರ್ಗಾವಣೆಯಾಗುತ್ತಿದ್ದರೆ, ₹1 ಲಕ್ಷಕ್ಕಿಂತಲೂ ಅಧಿಕ ಹಣವನ್ನು ರಾಜಕೀಯ ಪಕ್ಷಗಳ ಖಾತೆಯಿಂದ ಪಡೆದರೆ ಮಾಹಿತಿ ನೀಡಬೇಕು. ಅಭ್ಯರ್ಥಿಗಳು ಹಾಗೂ ಅವರ ಕುಟುಂಬದವರ ಹೆಸರಿನಲ್ಲಿ ₹1ಲಕ್ಷಕ್ಕಿಂ‌ತಲೂ ಅಧಿಕ ಹಣ ಇದ್ದರೆ, ಅದರ ಮೇಲೆ ನಿಗಾ ಇಡಬೇಕು’ ಎಂದು ಹೇಳಿದರು.

‘ಚುನಾವಣೆಗೆ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಹೊಸ ಖಾತೆ ತೆರೆಯಬೇಕಾಗುವುದರಿಂದ ಅವರಿಗೆ ಆದ್ಯತೆಯ ಮೇಲೆ ಖಾತೆ ತೆರೆದುಕೊಡಬೇಕು. ಸಹಕಾರ ಬ್ಯಾಂಕ್‌, ಸ್ತ್ರೀ ಶಕ್ತಿ ಹಾಗೂ ಸ್ವ ಸಹಾಯ ಸಂಘಗಳಿಗೂ ಸೂಚನೆ ನೀಡಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ADVERTISEMENT

ನಂತರ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮಾದರಿ ನೀತಿ ಸಂಹಿತೆ ಕುರಿತು ತಿಳಿವಳಿಕೆ ನೀಡಲಾಯಿತು.ಡಾ. ಬೊಮ್ಮನಹಳ್ಳಿ ಮಾತನಾಡಿ, ‘ನಿರ್ಭಯ, ಪಾರದರ್ಶಕತೆ ಮತ್ತು ಶಾಂತಿಯುತ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಜರುಗುವಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ’ ಎಂದು ಹೇಳಿದರು.

ಮುದ್ರಣ ಸಂಸ್ಥೆಗಳ ಮಾಲೀಕರ ಸಭೆ: ‘ರಾಜಕೀಯ ಪಕ್ಷಗಳ ಹಾಗೂ ಅಭ್ಯರ್ಥಿಗಳ ಕುರಿತ ಪ್ರಚಾರ ಸಾಮಗ್ರಿಗಳನ್ನು ಮುದ್ರಿಸುವ ಪೂರ್ವದಲ್ಲಿ ಕರಡು ಪ್ರತಿಯೊಂದಿಗೆ ಜಿಲ್ಲಾ ಚುನಾವಣಾ ಸಮಿತಿಯಿಂದ ಅನುಮತಿ ಪಡೆಯಬೇಕು. ಶಾಂತಿಯುತ ಮತದಾನಕ್ಕೆ ಧಕ್ಕೆ ತರುವ ಹಾಗೂ ಸಾಮರಸ್ಯ ಕೆಡಿಸುವ ಬರಹಗಳನ್ನು ಮುದ್ರಿಸಬಾರದು. ಪ್ರಚಾರ ಸಾಮಗ್ರಿಯಲ್ಲಿ ಪ್ರತಿಗಳ ಸಂಖ್ಯೆ, ಮುದ್ರಕರ ಹೆಸರು, ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕು’ ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿ ಮಹೇಶಕುಮಾರ್, ವೆಚ್ಚದ ನೋಡಲ್ ಅಧಿಕಾರಿ ಎಸ್.ಉದಯಶಂಕರ್, ಅಬಕಾರಿ ಉಪ ಆಯುಕ್ತ ಬಿ.ಆರ್.ಹಿರೇಮಠ, ಎಂ.ಸಿ.ಎಂ.ಸಿ. ನೋಡಲ್ ಅಧಿಕಾರಿ ಮಂಜುನಾಥ ಡೊಳ್ಳಿನ ಮಾದರಿ ನೀತಿ ಸಂಹಿತೆಯ ನಿಯಮಗಳನ್ನು ವಿವರಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂಗೀತಾ.ಜಿ, ಡಿಸಿಪಿ ರೇಣುಕಾ ಸುಕುಮಾರ್, ಪಾಲಿಕೆ ಉಪ ಆಯುಕ್ತ ಅಜೀಜ್ ದೇಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.