ADVERTISEMENT

ಅವಳಿ ನಗರದಲ್ಲಿವೆ; 15 ಸಾವಿರ ಬೀದಿನಾಯಿಗಳು!

ಬಸವರಾಜ ಸಂಪಳ್ಳಿ
Published 23 ಜೂನ್ 2017, 5:27 IST
Last Updated 23 ಜೂನ್ 2017, 5:27 IST
ಹುಬ್ಬಳ್ಳಿಯ ಕಾರವಾರ ರಸ್ತೆಯ ಎಂಪಿಎಸ್‌ ಕಾಲೊನಿ ಬಳಿ ಕಂಡುಬಂದ ಬೀದಿನಾಯಿಗಳ ಹಿಂಡು
ಹುಬ್ಬಳ್ಳಿಯ ಕಾರವಾರ ರಸ್ತೆಯ ಎಂಪಿಎಸ್‌ ಕಾಲೊನಿ ಬಳಿ ಕಂಡುಬಂದ ಬೀದಿನಾಯಿಗಳ ಹಿಂಡು   

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಸದ್ಯ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಮಕ್ಕಳನ್ನು ಹೊರಗಡೆ ಒಬ್ಬರನ್ನೇ ಕಳುಹಿಸಲು, ರಾತ್ರಿ ವೇಳೆ ಒಬ್ಬಂಟಿಯಾಗಿ ತಿರುಗಾಡಲು ಜನ ಹೆದರುವ ಸ್ಥಿತಿ ಎದುರಾಗಿದೆ.

ರಸ್ತೆಗಳಲ್ಲಿ ಗುಂಪು, ಗುಂಪಾಗಿ ತಿರುಗಾಡುವ ಬೀದಿನಾಯಿಗಳು ಜನರ ಮೇಲೆ ಎರಗಿ, ಕಚ್ಚಿ ಗಾಯಗೊಳಿಸಿರುವ ಘಟನೆಗಳು ಪ್ರತಿದಿನ ವರದಿಯಾಗುತ್ತಿವೆ. ದ್ವಿಚಕ್ರ ವಾಹನಗಳನ್ನೂ ಬೆನ್ನಟ್ಟುತ್ತವೆ.

ಆನಂದನಗರದ ಮಿಲನ ಕಾಲೊನಿಯ ಮನೆ ಕಟ್ಟೆ ಮೇಲೆ ಕುಳಿತಿದ್ದ ಎರಡು ವರ್ಷದ ಹೆಣ್ಣು ಮಗು ಸನಾ ರಾಯಬಾಗ ಮೇಲೆ ಏಳೆಂಟು ಬೀದಿನಾಯಿಗಳು ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಪ್ರಕರಣ ಇತ್ತೀಚೆಗೆ ನಡೆದಿದ್ದನ್ನು ಸ್ಮರಿಸಿಕೊಳ್ಳಬಹುದು.

ADVERTISEMENT

ನಗರದಲ್ಲಿರುವ ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಮನೆಗಳಲ್ಲಿ ಉಳಿದ ಆಹಾರ ಮತ್ತು ಕುರಿ, ಕೋಳಿ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಪಾಲಿಕೆಯ ಕಂಟೈನರ್‌ಗಳಲ್ಲಿ, ಖಾಲಿ ಜಾಗಗಳಲ್ಲಿ ಎಸೆಯುತ್ತಿರುವುದರಿಂದ ಬೀದಿ ನಾಯಿಗಳಿಗೆ ಯಥೇಚ್ಛವಾಗಿ ಆಹಾರ ಸಿಗುತ್ತಿದೆ. ಇದರಿಂದ ಅವುಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇವೆ.

‘ಅವಳಿ ನಗರದಲ್ಲಿ ಅಂದಾಜು 15 ಸಾವಿರಕ್ಕೂ ಹೆಚ್ಚು ಬೀದಿ ನಾಯಿಗಳಿವೆ. ಈ ಬಗ್ಗೆ ತೊಂದರೆಗೆ ಒಳಗಾದ ಸಾರ್ವಜನಿಕರಿಂದ ನಿತ್ಯ ದೂರುಗಳು ಬರುತ್ತಿವೆ’ ಎಂದು ಪಾಲಿಕೆ ಆರೋಗ್ಯ ಅಧಿಕಾರಿ ಡಾ. ಪ್ರಭು ಎನ್‌. ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಇನ್ನೊಂದು ವಾರದೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂದರು.

1500 ಬಿಡಾಡಿ ಜಾನುವಾರು:
ಅವಳಿ ನಗರದಲ್ಲಿ ಬೀದಿ ನಾಯಿಗಳ ಜೊತೆಗೆ ಬಿಡಾಡಿ ಜಾನುವಾರುಗಳ ಹಾವಳಿ ಅಧಿಕವಾಗಿದೆ. ಆಗಾಗ ಜನರನ್ನು ತಿವಿದು ಗಾಯಗೊಳಿಸಿದ್ದು ಸುದ್ದಿಯಾಗುತ್ತಲೇ ಇರುತ್ತದೆ.
‘ಜವಳಿಸಾಲ, ಅಳಗುಂಡಗಿ, ಹಿರೇಪೇಟೆ, ಸಿಂಪಿಗಲ್ಲಿ ವ್ಯಾಪ್ತಿಯಲ್ಲಿ 100ಕ್ಕೂ ಅಧಿಕ ಬಿಡಾಡಿ ಜಾನುವಾರುಗಳು ಇದ್ದು, ವಾಹನ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ. ವೃದ್ಧರು, ಮಕ್ಕಳು ಅಲ್ಲಿ ಸಂಚರಿಸಲು ಹೆದರಬೇಕಾದ ಸ್ಥಿತಿ ಇದೆ’ ಎಂದು ಅಲ್ಲಿನ ನಿವಾಸಿ ವಿಜಯ ಅಳಗುಂಡಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅವಳಿ ನಗರದಲ್ಲಿ ಸುಮಾರು 1500ಕ್ಕೂ ಅಧಿಕ ಜಾನುವಾರುಗಳಿವೆ. ಇವುಗಳನ್ನು ಬೀದಿಗೆ ಬಿಡದಂತೆ ಜಾನುವಾರುಗಳ ಮಾಲೀಕರಿಗೆ ಹಾಗೂ ಮಠಗಳಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ’ ಎಂದು ಡಾ. ಪ್ರಭು ಬಿರಾದಾರ ಹೇಳಿದರು.

‘ಬೀದಿಯಲ್ಲಿ ತಿರುಗಾಡುವ 70ರಿಂದ 80 ಜಾನುವಾರುಗಳನ್ನು ಹಿಡಿದು ಹುಬ್ಬಳ್ಳಿಯ ಪಾಂಜರಪೊಳ ಗೋಶಾಲೆಗೆ ಬಿಡಲಾಗಿತ್ತು. ಅವುಗಳ ಮಾಲೀಕರು ದಂಡ ಕಟ್ಟಿ ಬಿಡಿಸಿಕೊಂಡು ಹೋಗಿದ್ದಾರೆ’ ಎಂದರು.

ಹಂದಿಗಳ ವಿರುದ್ಧ ಕಾರ್ಯಾಚರಣೆ:
ಅವಳಿ ನಗರದಲ್ಲಿ ಸದ್ಯ ಐದು ಸಾವಿರಕ್ಕೂ ಅಧಿಕ ಹಂದಿಗಳು ಇವೆ ಎಂದು ಪಾಲಿಕೆ ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ‘ಒಂದು ವರ್ಷದ ಈಚೆಗೆ ಅಂದಾಜು 9 ಸಾವಿರ ಹಂದಿಗಳನ್ನು ಹಿಡಿದು ತುಮಕೂರು, ಹಾಸನ ಮತ್ತು ತಮಿಳುನಾರು ರಾಜ್ಯಕ್ಕೆ ಕಳುಹಿಸಲಾಗಿದೆ. ಈ ಕಾರ್ಯಾಚರಣೆ ನಿರಂತವಾಗಿ ನಡೆಯುತ್ತಿರುತ್ತದೆ’ಎಂದು ಡಾ.ಪ್ರಭು ಎನ್‌.ಬಿರಾದಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.