ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2015, 8:37 IST
Last Updated 30 ಮಾರ್ಚ್ 2015, 8:37 IST

ಗಂಗಾವತಿ: ನಗರದ ಎಂಟು ಕೇಂದ್ರ ಸೇರಿದಂತೆ ತಾಲ್ಲೂಕಿನ ಒಟ್ಟು 21 ಕೇಂದ್ರಗಳಲ್ಲಿ ಸೋಮವಾರದಿಂದ ನಡೆಯುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಾಗಿ ಶಿಕ್ಷಣ ಇಲಾಖೆ, ಕೊಠಡಿ, ಮೇಜು, ಅಭ್ಯರ್ಥಿಗಳ ನೊಂದಣಿ ಸಂಖ್ಯೆ ದಾಖಲು ಮೊದಲಾದ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.

ಪರೀಕ್ಷೆಗಳನ್ನು ನಕಲು ಮುಕ್ತವಾಗಿಸಿ ಹೆಚ್ಚು ನಿಖರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ನಡೆಸಲು ಉದ್ದೇಶಿಸಿದ್ದ ಶಿಕ್ಷಣ ಇಲಾಖೆಯ ಗೊಂದಲಕಾರಿ ಸಿಸಿ ಟಿವಿ ಅಥವಾ ಸಿಸಿ ಕ್ಯಾಮೆರಾಗಳ ಅಳವಡಿಸುವ ಆದೇಶಕ್ಕೆ ಸ್ವತಃ ಇಲಾಖೆ ಸೂಚನೆ ಸಡಿಲಿಸಿದೆ.
ತಾಲ್ಲೂಕಿನ ಪ್ರತಿಯೊಂದು ಕೇಂದ್ರಗಳಲ್ಲಿ ಇದ್ದ ಅಲ್ಪಾವಧಿಯಲ್ಲೆ ಸಿಸಿ ಕ್ಯಾಮೆರಾ ಅಳವಡಿಸುವಂತೆ ಕಡ್ಡಾಯಗೊಳಿಸಿದ್ದ ಆದೇಶದಿಂದ ಶಾಲೆಗಳ ಮುಖ್ಯಸ್ಥರು ನಿರಾಳರಾಗಿದ್ದಾರೆ.

ಭಾನುವಾರ ಮತ್ತೆ ನಾಲ್ಕು ಕೇಂದ್ರಗಳಲ್ಲಿ ಸಿಸಿ ಟಿವಿ ಅಳವಡಿಸುವ ಕಾರ್ಯ ಪೂರ್ಣವಾಗಿದೆ. ಈ ಮೊದಲು ಇಂದಿರಾನಗರದ ಜೆಎಸ್ಎಸ್, ಜಯನಗರ ವಿದ್ಯಾಗಿರಿಯ ಎಂಎನ್ಎಂ, ಹೊಸಳ್ಳಿ ರಸ್ತೆಯ ಲಿಟಲ್ ಹಾರ್ಟ್‌, ಬೇತೆಲ್ ಆಂಗ್ಲ ಮಾಧ್ಯಮ, ಐಎಂಎ ಭವನದ ಹಿಂದಿರುವ ಲಯನ್ಸ್ ಕ್ಲಬ್, ಸಿದ್ದಾಪುರದ ಸರ್ಕಾರಿ ಪ್ರೌಢ ಹಾಗೂ ರವಿನಗರದ ರೆಡ್ಡಿ ವೀರಣ್ಣ ಶಾಲೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು.

ಭಾನುವಾರ ಇಲ್ಲಿನ ಎಂಎನ್ಎಂ ಬಾಲಕಿಯರ, ಜೂನಿಯರ್ ಕಾಲೇಜು, ಶ್ರೀರಾಮನಗರದ ಸರ್ಕಾರಿ, ಕಾರಟಗಿಯ ಸರ್ಕಾರಿ   ಶಾಲೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಕೊಟ್ಟೂರೇಶ್ವರ, ಸರೋಜಮ್ಮ, ಬಸವಪಟ್ಟಣದ ಬಾಲಕಿಯರ, ಕಾರಟಗಿ ಶರಣಬಸವೇಶ್ವರ, ಸಿಎಂಎನ್, ಕನಕಗಿರಿಯ ರುದ್ರಮುನಿ, ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಹಾಗೂ ಆರಾ್ಹಾಳ, ನವಲಿಯ ಸರ್ಕಾರಿ ಶಾಲಾ ಕೇಂದ್ರದಲ್ಲಿ ಕ್ಯಾಮೆರಾ ಅಳವಡಿಸಬೇಕಿದೆ.

‘ಇಲಾಖೆ ಆಯುಕ್ತರ ಸೂಚನೆಯ ಮೇರೆಗೆ ಈ ಬಾರಿ ಸಿಸಿ ಕ್ಯಾಮೆರಾ ಆದೇಶವನ್ನು ಕಡ್ಡಾಯಗೊಳಿಸಿಲ್ಲ.  ಆದರೆ ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ನಡೆಸಲು ತಕ್ಕ ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯ ಕುಮಾರ ಬಾರಕೇರ ತಿಳಿಸಿದರು. ಎಸ್ಸೆಸ್ಸೆಲ್ಸಿ ಪರೀಕ್ಷಾ ಮೇಲ್ವಿಚಾರಕ ಹುಂಬಣ್ಣ ರಾಠೋಡ ಇದ್ದರು.

ಕಾರಟಗಿ ವರದಿ
ಇಲ್ಲಿನ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಶರಣ ಬಸವೇಶ್ವರ ಆಂಗ್ಲ, ಕನ್ನಡ ಮಾಧ್ಯಮ ಶಾಲೆ ಮತ್ತು ಸಿ. ಮಲ್ಲಿಕಾರ್ಜುನ ನಾಗಪ್ಪ ಮಹಾ ವಿದ್ಯಾಲಯದ 3 ಕೇಂದ್ರಗಳಲ್ಲಿ ಸೋಮವಾರದಿಂದ ಎಸ್ಸೆಎಸ್ಸೆಎಲ್ಸಿ ಪರೀಕ್ಷೆಗಳು ನಡೆಯಲಿವೆ. ಒಟ್ಟು 723 ಪರೀಕ್ಷಾರ್ಥಿಗಳಿದ್ದು, ತಲಾ ಕೇಂದ್ರದಲ್ಲಿ 10 ಬ್ಲಾಕ್‌ಗಳನ್ನು ಮಾಡಲಾಗಿದೆ. ಭಾನುವಾರ ಪೂರ್ವ ಸಿದ್ಧತೆ ನಡೆಸಿದ್ದು, ಸಿಸಿ ಕ್ಯಾಮೆರಾ ಅಳವಡಿಕೆಯ ಕಾರ್ಯ  ನಡೆದಿರುವುದು ಕಂಡು ಬಂತು.

ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿಜಯಕುಮಾರ ಮಾತನಾಡಿ, ಸ್ಪಷ್ಟ ಸೂಚನೆ ಇರದಿರುವುದು, ಆರ್ಥಿಕ ಸಮಸ್ಯೆಯಿಂದ ಕೇಂದ್ರದ ಹೊರಗಡೆ 4 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದರು. ಶರಣಬಸವೇಶ್ವರ ಆಂಗ್ಲ, ಕನ್ನಡ ಮಾಧ್ಯಮ ಶಾಲೆಯ ಮುಖ್ಯಗುರು ವೀರೇಶ್ ಮ್ಯಾಗೇರಿ ವಿವರ ನೀಡಿ, ನಮ್ಮ ಕೇಂದ್ರದ 244 ವಿದ್ಯಾರ್ಥಿಗಳಿದ್ದು, ಸೂಕ್ತ ಆಸನ, ನೀರು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು.  ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದರು.

ಸಿ.ಮಲ್ಲಿಕಾರ್ಜುನ ನಾಗಪ್ಪ ಮಹಾವಿದ್ಯಾಲಯ ಪ್ರಾಚಾರ್ಯ ನಾರಾಯಣ ವೈದ್ಯ ಮಾತನಾಡಿ, ನಮ್ಮ ಕೇಂದ್ರದಲ್ಲಿ 240 ವಿದ್ಯಾರ್ಥಿಗಳಿದ್ದು, ಪ್ರತಿ ಹಾಲ್‌ನಲ್ಲಿ 2 ಬ್ಲಾಕ್ ಮಾಡಲಾಗಿದೆ. ಸಿಸಿ ಕ್ಯಾಮೆರಾ ಅಳವಡಿಸುವ ಕಾರ್ಯ ನಡೆದಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.