ADVERTISEMENT

ಕೃಷಿಕರು ಕೈ ಚಾಚಿ ಬೇಡದಿರಿ: ಸಿದ್ದೇಶ್ವರ ಸ್ವಾಮೀಜಿ

ತೋಟಗಾರಿಕೆ ಮೇಳದಲ್ಲಿ ಗಮನ ಸೆಳೆದ ಶ್ವಾನ ಪ್ರದರ್ಶನ; ವೀಕ್ಷಣೆಗೆ ಬಂದ ಅಪಾರ ಜನ, ಎಲ್ಲೆಡೆ ಸೆಲ್ಫಿ ಝಲಕ್‌

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2016, 6:36 IST
Last Updated 19 ಡಿಸೆಂಬರ್ 2016, 6:36 IST
ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯಗಳಲ್ಲಿ ನಡೆದ 5ನೇ ತೋಟಗಾರಿಕೆ ಮೇಳದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರಿಗೆ ಭಾನುವಾರ ಸನ್ಮಾನ ಮಾಡಲಾಯಿತು.
ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯಗಳಲ್ಲಿ ನಡೆದ 5ನೇ ತೋಟಗಾರಿಕೆ ಮೇಳದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರಿಗೆ ಭಾನುವಾರ ಸನ್ಮಾನ ಮಾಡಲಾಯಿತು.   
ಬಾಗಲಕೋಟೆ: ರೈತರಿಗೆ ನಿರ್ಸರ್ಗವೇ ಸಂಪತ್ತು. ಭೂಮಿ ಮೇಲಿರುವ ಮರಗಳೇ ದೇವರು. ಬೇಡುವ ಸಂಸ್ಕೃತಿ ಕೃಷಿಕನಲ್ಲ. ಯಾರ ಹತ್ತಿರ ಅವರು ಕೈಚಾಚಿ ಬೇಡ ಬೇಡಬಾರದು ಎಂದು ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಹೇಳಿದರು. 
 
ಇಲ್ಲಿನ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ 5ನೇ ತೋಟಗಾರಿಕಾ ಮೇಳದಲ್ಲಿ ಭಾನುವಾರ ಉದ್ಯಾನದಲ್ಲಿ ಮಾತನಾಡಿದರು. 
 
ಭೂಮಿತಾಯಿ ನಾನಾ ಸಂಪತ್ತನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿರುವಳು. ದೇವರ ನೀಡಿದ ದೊಡ್ಡ ಕೊಡುಗೆ ಇದು. ಮರವನ್ನು ನಾಶಗೊಳಿಸುವ ಮನಸ್ಸು ಬಿಟ್ಟು,ಮತ್ತಷ್ಟು ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲ ಶ್ರಮಿಸಬೇಕು ಎಂದು ಹೇಳಿದರು.
 
ದೇವರು ಭೂಮಿ ಮೇಲೆ ನೀಡಿರುವ ಒಂದು ವಸ್ತು ನಾವು ನಾಲ್ಕು ಮಾಡಿ ತೋರಿಸುವ ಶಕ್ತಿ ನಮ್ಮ ವಿಜ್ಞಾನಿಗಳಿಗೆ ಇದೆ. ಒಂದೇ ತಳಿಯ ಮಾವು ಇಂದು 300 ತಳಿಗಳಾಗಿ ಪರಿವರ್ತಿಸಿದ್ದಾರೆ ಎಂದರು.
 
ಮನುಷ್ಯರು ಇಲ್ಲಿರುವ ಸಂಪತ್ತು ಸವಿಯಲು ಬಂದ ಅತಿಥಿಗಳು,  ಅದನ್ನು ಕಸಿದು ಕೊಳ್ಳುವ, ನಾಶ ಮಾಡುವ ಹಕ್ಕು ಹೊಂದಿಲ್ಲ. ನೋಡಿ ಆನಂದಿಸಬೇಕು. ಸಾಧ್ಯವಾದರೇ ಇನ್ನಷ್ಟು ಬೆಳೆಸಲು ಪ್ರಯತ್ನಿಸಬೇಕು ವಿನಃ ಹಣದ ಆಸೆಗೆ, ಲಾಭಕ್ಕೆ ಜೋತು ಬಿದ್ದು ಭೂಮಿ ಮಾರಿಕೊಳ್ಳಬೇಡಿ ಎಂದು ಅವರು ಸಲಹೆ ನೀಡಿದರು. ಅರಣ್ಯ ನಾಶವನ್ನು ಪ್ರತಿಯೊಬ್ಬರು ತಡೆಗಟ್ಟಬೇಕು. ಭೂಮಿಯ ನೈಜ ಅಂಶವನ್ನು ಕೆಡಿಸಬಾರದು. ರಾಸಾಯನಿಕದಿಂದ ದೂರವಿರಬೇಕು. ಹಣದ ಆಶೆಗಾಗಿ ಯಾವತ್ತಲ್ಲೂ ಭೂಮಿ ಮಾರಾಟ ಮಾಡಬಾರದು ಎಂದರು. 
 
ತೋಟಗಾರಿಕಾ ವಿಶ್ವವಿದ್ಯಾಲಯ ಕುಲಪತಿ ಡಾ. ಡಿ.ಎಲ್.ಮಹೇಶ್ವರ ಅಧ್ಯಕ್ಷತೆ ವಹಿಸಿದ್ದರು. 
 
ವಿವಿ ವಿಸ್ತರಣಾ ನಿರ್ದೇೇಶಕ ಡಾ. ವೈ.ಕೆ. ಕೋಟಿಕಲ್, ಶಿಕ್ಷಣ ನಿರ್ದೇಶಕ ಎಚ್.ಬಿ.ಲಿಂಗಯ್ಯ, ಸಂಶೋಧನಾ ನಿರ್ದೇಶಕ ಡಾ.ವಿ.ನಾಚೇಗೌಡ ಸೇರಿದಂತೆ ಸಿದ್ದೇಶ್ವರ ಸ್ವಾಮೀಜಿ ಅವರ ಪ್ರವಚನ ಕೇಳಲು ಸಾವಿರಾರು ಸಂಖ್ಯೆಯ ಜನರು ಬಂದಿದ್ದರು.
 
ಗಮನ ಸೆಳೆದ ಮತ್ಸ್ಯಲೋಕ 
ಬಾಗಲಕೋಟೆ: ನಗರದ ಪುಷ್ಪಗಳ ಮಳಿಗೆ ಪಕ್ಕದಲ್ಲಿ ಬಣ್ಣ ಬಣ್ಣದ ಜಲಚರ ನೋಡುಗರನ್ನು ತನ್ನತ್ತ ಸೆಳೆಯುತ್ತಿರುವುದೇ ಮತ್ಸ್ಯಲೋಕ. ವೀಕ್ಷಣೆಗೆ ಬಂದ ಜನರು ಇಷ್ಟೊಂದು ತಳಿ ಮೀನುಗಳು ಇದೇ ಎಂದು ಆಶ್ಚರ್ಯದಿಂದ ನೋಡುತ್ತಿರುವುದು ಕಂಡು ಬಂತು.
 
ಇಲ್ಲಿನ ಉದ್ಯಾನಗಿರಿಯಲ್ಲಿ ನಡೆದಿರುವ 5ನೇ ತೋಟಗಾರಿಕೆ ಮೇಳದಲ್ಲಿ ಮೀನುಗಾರಿಕೆ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಮತ್ಸ್ಯಮೇಳದಲ್ಲಿ ವಿವಿಧ ಪ್ರಬೇಧದ ನೂರಾರು ಬಗೆ ಬಗೆ ಮೀನುಗಳ ಪ್ರದರ್ಶನದಲ್ಲಿ ಅತ್ಯಂತ ಆಕರ್ಷಣೀಯ. 
 
ಆಕರ್ಷಕ ಮೀನು ಪ್ರದರ್ಶನ: ಅಲಂಕಾರಿಕ ಮೀನುಗಳು ಪ್ರದರ್ಶನದ ಕೇಂದ್ರ ಬಿಂದುವಾಗಿದೆ. 
 
ರೆಡ್ ಕ್ಯಾಪ್ ರಾಂಚು, ಗೋಲ್ಡ್ ಫಿಶ್, ರೆಡ್ ಪ್ಯಾರೆಟ್ ಬಿಗ್, ಆಸ್ಕರ್, ಪರ್ಲ್ ಸೀಲ್ ಗೋಲ್ಡ್, ಟೈಗರ್ ಚಿಲಿ, ರೆಡ್ ಆಸ್ಕರ್, ಫಿಲಮೆಂಟ್ ಬಾರ್ಬ್, ಜೈಟ್ ಡಾನಿಯೋ, ಬ್ಲೂ ಸ್ಪಾಟೆಡ್ ಹಿಲ್ ಟ್ರೌಟ್, ಪರ್ಲ್ ಅರೋವನಾ, ಒರಾಂಡ, ಬರಿಲಿಯಾಸ್ ಕನರೆನ್ಸಿಸ್, ರೆಡ್‌ಲೈನ್ ಟಾರ್‍ಸೆಡೊ, ಲಯನ್ ಹೆಡ್ ಗೋಲ್ಡ್, ಬ್ಲೂ ಗೌರಾ ಬಿಗ್, ರೆಡ್ ಆಂಡ್ ವೈಟ್ ಟೇಲ್ ಪ್ಲಾಟಿ, ಅಲ್ಬಿನಿ ಕ್ಯಾಟ್ ಫಿಶ್, ರೆಡ್ ಟೇಲ್ ಗಪ್ಪೀಸ್ ಸೇರಿದಂತೆ ವಿಭಿನ್ನ ರೂಪ, ಆಕಾರ, ಬಣ್ಣಗಳ ಮೀನು 30ಕ್ಕೂ ಅಧಿಕ ಅಕ್ವೇರಿಯಂಗಳಲ್ಲಿ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ ಎಂದು ಬೆಂಗಳೂರಿನ ನಂದಕುಮಾರ  ಮಾಹಿತಿ ನೀಡಿದರು.
 
ಸೆಲ್ಪಿಗೆ ಮೊರೆ ಹೋದ ಜನರು: ಮಳಿಗೆಗೆ ಒಳ ಪ್ರವೇಶಸುತ್ತಿದ್ದಂತೆ ತಣ್ಣನೆ ಗಾಳಿ ಜೊತೆಗೆ ವಿವಿಧ ಬಗೆ ಬಣ್ಣ ಬಣ್ಣಗಳ ಮೀನು ಒಂದಕ್ಕಿಂತ ಒಂದು ಚಂದ ಇವೆ.   ಅಲಂಕಾರಿಕ ಮೀನುಗಳನ್ನು ನೋಡಲು ಬಂದಿರುವ ಯುವಕ ಯುವತಿಯರು ಸೆಲ್ಪಿಯಲ್ಲಿ ಸೆರೆ ಹಿಡಿಯುತ್ತಿರುವ ದೃಶ್ಯ ಅಲ್ಲಲ್ಲಿ ಕಂಡು ಬಂತು.  
 
ಮೇಳದಲ್ಲಿ ಅತ್ಯಾಧುನಿಕ ಮೀನುಗಾರಿಕೆಗೆ ಅವಶ್ಯವಾಗಿರುವ ಉಪಕರಣ  ಸಹ ವ್ಯವಸ್ಥೆ ಮಾಡಲಾಗಿದೆ. ಗಾಣ, ತಂಗೋಸ್, ಸ್ಪಿನ್ಷರ್, ಸ್ಪೂನ್, ಸಿವಿಲ್, ಸಿಂಕರ್‍್ಸ, ಮೀನಿನ ಕಲ್ಲಿಫ್, ಮೀನಿನ ರಾಡ್ ಜೊತೆಗೆ ವಿವಿಧ ರೀತಿಯ ಬಲೆಗಳು ಹಾಗೂ ಮೀನು ಸಾಕಾಣಿಕೆಗೆ ಬೇಕಾಗುವ ಆಹಾರ ಪದಾರ್ಥಗಳು ಸಹ ಇಲ್ಲಿವೆ. ಮತ್ಸ್ಯ ಖಾದ್ಯಗಳು ಮೀನು ಪ್ರಿಯರನ್ನು ಸೆಳೆಯುತ್ತಿವೆ.  
 
**
ಮೀನುಗಾರಿಕೆ ಮಾಹಿತಿ
ರಾಜ್ಯ ಸರ್ಕಾರದ ಮೀನುಗಾರಿಕೆ ಇಲಾಖೆ ವತಿಯಿಂದ ಮೀನು ಸಾಕಣೆ ಸಿಗುತ್ತಿರುವ ಸೌಲಭ್ಯ ನೋಡಲು ಬರುವ ರೈತರಿಗೆ ಇಲಾಖೆ ಮಾಹಿತಿ ಒದಗಿಸುತ್ತದೆ. ರೈತರು ಕೃಷಿ ಭೂಮಿ ತಮ್ಮ ಜಮೀನಿನಲ್ಲಿ ಬಾವಿ, ಕೃಷಿ ಹೊಂಡಗಳಲ್ಲಿ ಬೆಳೆಸಲು ಯೊಗ್ಯವಾಗಿರುವ ಕಟ್ಲಾ, ರೋಹು, ಮೃಗಾಲ್, ಹುಲ್ಲು ಗೆಂಡೆ, ಸಾಮಾನ್ಯ ಗೆಂಡೆ, ಕಾಡ್ಲಾ ರೋಹು, ಬೆಳ್ಳಿ ಗೆಂಡೆ ಸೇರಿದಂತೆ ಹಲವು ಪ್ರಬೇಧದ ಮೀನು ರೈತರು ಮೀನು ಸಾಕಣೆ ಮಾಡಬಹುದು ಎಂದು ಇಲಾಖೆ ಕ್ಷೇತ್ರಪಾಲಕ ಆರ್.ವಿ.ಶಿಂಧೆ ಮಾಹಿತಿ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.