ADVERTISEMENT

ಕೋರೆಗೆ ‘ಮೃತ್ಯುಂಜಯ ಮಹಾಂತ’ ಪ್ರಶಸ್ತಿ

ಮುರುಘಾಮಠ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 6:08 IST
Last Updated 30 ಜನವರಿ 2017, 6:08 IST
ಧಾರವಾಡದ ಮುರುಘಾಮಠದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಪ್ರಭಾಕರ ಕೋರೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ಸಂದರ್ಭದಲ್ಲಿ ಸಂಸದ ಪ್ರಹ್ಲಾದ ಜೋಶಿ ಹಾಸ್ಯ ಚಟಾಕಿ ಹಾರಿಸಿದರು. ಚಿತ್ರದಲ್ಲಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಡಾ. ಸಿದ್ಧರಾಮ ಸ್ವಾಮೀಜಿ ಮತ್ತಿತರರು ಇದ್ದಾರೆ
ಧಾರವಾಡದ ಮುರುಘಾಮಠದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಪ್ರಭಾಕರ ಕೋರೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ಸಂದರ್ಭದಲ್ಲಿ ಸಂಸದ ಪ್ರಹ್ಲಾದ ಜೋಶಿ ಹಾಸ್ಯ ಚಟಾಕಿ ಹಾರಿಸಿದರು. ಚಿತ್ರದಲ್ಲಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಡಾ. ಸಿದ್ಧರಾಮ ಸ್ವಾಮೀಜಿ ಮತ್ತಿತರರು ಇದ್ದಾರೆ   
ಧಾರವಾಡ: ಬೆಳಗಾವಿ ಕೆ.ಎಲ್‌.ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ ಜೀವಮಾನ ಸಾಧನೆಗೆ ಇಲ್ಲಿನ ಮುರುಘಾಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರಸಕ್ತ ಸಾಲಿನ ಮೃತ್ಯುಂಜಯ ಮಹಾಂತ ಪ್ರಶಸ್ತಿಯನ್ನು ಶನಿವಾರ ಪ್ರದಾನ ಮಾಡಲಾಯಿತು.
 
ಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ನಾಗೂರ ರುದ್ರಾಕ್ಷಿ ಮಠದ ಡಾ. ಸಿದ್ಧರಾಮ ಸ್ವಾಮೀಜಿ ಮತ್ತು ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು.
 
ಪ್ರಶಸ್ತಿಯು 10 ಗ್ರಾಂ ಚಿನ್ನ, ₹25 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
 
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರಭಾಕರ ಕೋರೆ, ‘ಈ ಪುಣ್ಯ ಭೂಮಿಯಲ್ಲಿ ಪ್ರಶಸ್ತಿ ಲಭಿಸಿರು ವುದು ನನ್ನ ಪುಣ್ಯ. ಇದು ಸಪ್ತ ಋಷಿಗಳಿಗೆ ಮತ್ತು ಕೆಎಲ್‌ಇ ಆಡಳಿತ ಮಂಡಳಿಯ ಸದಸ್ಯರಿಗೆ ಸೇರಬೇಕು. ಅವರ ಸಹಕಾರದಿಂದಾಗಿ ಸಂಸ್ಥೆಯನ್ನು ಇಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಾಯಿತು’ ಎಂದರು.
 
ತಮಗೆ ನೀಡಿದ ಪ್ರಶಸ್ತಿ ಮೊತ್ತ ಹಾಗೂ ಚಿನ್ನವನ್ನು ಮಠಕ್ಕೆ ದಾನವಾಗಿ ನೀಡಿದ ಕೋರೆ, ಇದನ್ನು ಮಠದಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳುವಂತೆ ಸ್ವಾಮೀಜಿಗೆ ಮನವಿ ಮಾಡಿದರು.
 
ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ‘ದೇಶದಲ್ಲಿ ಇಂದಿಗೂ ಸುಮಾರು 80 ಕೋಟಿ ಜನರು ಪ್ರತಿನಿತ್ಯ ₹20ರಲ್ಲಿ ಬದುಕು ಸಾಗಿಸುತ್ತಿದ್ದಾರೆ. ಅಲ್ಲದೇ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಇಂದಿಗೂ ಹಲವಾರು ಜನರು ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ. ಉಳ್ಳವರು ಇಲ್ಲದವರಿಗೆ ನೀಡಿ ಸಮಾನವಾಗಿ ಜೀವನ ಸಾಗಿಸಬೇಕು ಎನ್ನುವುದು ಬಸವಣ್ಣನವರ ಕನಸಾಗಿತ್ತು’ ಎಂದರು.
 
ಹುಬ್ಬಳ್ಳಿ ಕೆಎಲ್‌ಇ ಸಂಸ್ಥೆ ಸದಸ್ಯ ಶಂಕ್ರಣ್ಣ ಮುನವಳ್ಳಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
 
ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕೌಟಗಿಮಠ, ಪ್ರಭುಲಿಂಗೇಶ್ವರ ಶುಗರ್ಸ್‌ ಅಧ್ಯಕ್ಷ ಜಗದೀಶ ಗುಡಗುಂಟಿ, ಡಾ. ವೀರಣ್ಣ ರಾಜೂರ, ಬಸವರಾಜ ಜಗಜಂಪಿ, ಶಿವಶಂಕರ ಹಂಪಣ್ಣವರ ಸೇರಿದಂತೆ ಇತರರು ಇದ್ದರು. ಪಂಡಿತ್‌ ಡಾ. ವೆಂಕಟೇಶಕುಮಾರ ಅವರಿಂದ ವಚನ ಸಂಗೀತ ನೆರವೇರಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.