ADVERTISEMENT

ಡಿಪ್ಲೊಮಾ: ಸಂಪೂರ್ಣ ಕ್ಯಾರಿ ಓವರ್ ಅಸಾಧ್ಯ

​ಪ್ರಜಾವಾಣಿ ವಾರ್ತೆ
Published 28 ಜುಲೈ 2012, 19:30 IST
Last Updated 28 ಜುಲೈ 2012, 19:30 IST

ತುಮಕೂರು: ಡಿಪ್ಲೊಮಾ ತರಗತಿಗೆ ಪೂರ್ಣ ಪ್ರಮಾಣದ ಕ್ಯಾರಿ ಓವರ್ ಪದ್ಧತಿ ಜಾರಿ ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಇಲ್ಲಿ ಶನಿವಾರ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಗಾಗಲೇ 3 ವರ್ಷದ ಕೋರ್ಸ್‌ನ 8 ವಿಷಯಗಳಿಗೆ ಕ್ಯಾರಿ ಓವರ್ ಪದ್ಧತಿ ಇದೆ. ಸಂಪೂರ್ಣ ಜಾರಿಯಾದರೆ ಶಿಕ್ಷಣದ ಗುಣಮಟ್ಟ ಕುಸಿಯುತ್ತದೆ. ಇದು ಸಾಧ್ಯವಿಲ್ಲದ ಕಾರ್ಯ ಎಂದರು.

ಅತಿಥಿ ಉಪನ್ಯಾಸಕರಿಗೆ ಕಳೆದ ಸಾಲಿನ 4 ತಿಂಗಳ ವೇತನದಲ್ಲಿ ರೂ. 32 ಕೋಟಿ ಬಾಕಿ ನೀಡಬೇಕಾಗಿದೆ. ಇದರಲ್ಲಿ ರೂ. 8 ಕೋಟಿ ಬಿಡುಗಡೆಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಶೀಘ್ರ ಬಾಕಿ ವೇತನ ಬಿಡುಗಡೆ ಮಾಡಲಾಗುವುದು. ರಾಜ್ಯದಲ್ಲಿ 847 ಉಪನ್ಯಾಸಕರ ಹುದ್ದೆ ಖಾಲಿ ಇದೆ. ಇದರಲ್ಲಿ 276 ಹುದ್ದಗಳನ್ನು ಶೀಘ್ರ ಕೆಪಿಎಸ್‌ಸಿ ಮೂಲಕ ಭರ್ತಿ ಮಾಡಲಾಗುತ್ತಿದೆ. ಉಳಿದಂತೆ ಅತಿಥಿ ಉಪನ್ಯಾಸಕರನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯಕ್ಕೆ ಭೂಮಿ ನೀಡುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ನಿರ್ಧಾರ ಕೈಗೊಳ್ಳುತ್ತಾರೆ. ಸಚಿವರ ಸಮ್ಮುಖದಲ್ಲಿ ಭೂಮಿ ಗುರುತಿಸಿ ಪ್ರಸ್ತಾವ ಸಲ್ಲಿಸಿದರೆ, ಶೀಘ್ರ ಕ್ರಮಕೈಗೊಳ್ಳಲಾಗುವುದು.

ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆಗೆ ಸಂಬಂಧಿಸಿದಂತೆ ಸರ್ಕಾರ ಮುಕ್ತವಾಗಿ ನಿರ್ಧಾರ ಕೈಗೊಳ್ಳುತ್ತದೆ. ಎಲ್ಲ ಕ್ಷೇತ್ರದಲ್ಲಿ ಜಾತೀಯತೆ ಇದೆ. ಆದರೆ ಕುಲಪತಿಗಳ ಆಯ್ಕೆಯಲ್ಲಿ ಜಾತಿಗಿಂತ ದಕ್ಷತೆ ಮತ್ತು ಅನುಭವವೇ ಮುಖ್ಯ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತುಮಕೂರು ವಿ.ವಿ. ಲಾಂಛನ ಬದಲಾವಣೆ ಬಗ್ಗೆ ಮಾಹಿತಿ ಇಲ್ಲ. ವಿ.ವಿ. ಗುಣಮಟ್ಟ ನಿರ್ಧರಿಸುವಲ್ಲಿ ಲಾಂಛನ ಮುಖ್ಯವಾಗುವುದಿಲ್ಲ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.