ADVERTISEMENT

ತಜ್ಞರ ತನಿಖೆ ತಂಡ ರಚನೆಗೆ ಕ್ರಮ:ಭರವಸೆ

ನಗರಾಭಿವೃದ್ಧಿ ಹೋರಾಟ ಸಮಿತಿಯೊಂದಿಗೆ ಉಪವಿಭಾಗಧಿಕಾರಿ ದಿವ್ಯಪ್ರಭು ಚರ್ಚೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 6:58 IST
Last Updated 20 ಜುಲೈ 2017, 6:58 IST
ಸಿಂಧನೂರಿನ ಮಿನಿವಿಧಾನಸೌಧ ಸಭಾಂಗಣದಲ್ಲಿ ನಗರಾಭಿವೃದ್ಧಿ ಹೋರಾಟ ಸಮಿತಿಯ ಮುಖಂಡರ ಜತೆ ಲಿಂಗಸುಗೂರು ಉಪವಿಭಾಗಾಧಿಕಾರಿ ದಿವ್ಯಪ್ರಭು ಬುಧವಾರ ಸುದೀರ್ಘ ಚರ್ಚೆ ನಡೆಸಿದರು
ಸಿಂಧನೂರಿನ ಮಿನಿವಿಧಾನಸೌಧ ಸಭಾಂಗಣದಲ್ಲಿ ನಗರಾಭಿವೃದ್ಧಿ ಹೋರಾಟ ಸಮಿತಿಯ ಮುಖಂಡರ ಜತೆ ಲಿಂಗಸುಗೂರು ಉಪವಿಭಾಗಾಧಿಕಾರಿ ದಿವ್ಯಪ್ರಭು ಬುಧವಾರ ಸುದೀರ್ಘ ಚರ್ಚೆ ನಡೆಸಿದರು   

ಸಿಂಧನೂರು: ‘ನಗರದಲ್ಲಿ ನಡೆದಿರುವ ಯುಜಿಡಿ, ಕುಡಿಯುವ ನೀರು ಮತ್ತು ನಗರೋತ್ಥಾನ ಯೋಜನೆ ಕಾಮಗಾರಿಗಳ ಕುರಿತು ಸಮಗ್ರ ತನಿಖೆ ನಡೆಸಲು ವಿಶೇಷ ತಾಂತ್ರಿಕ ತಜ್ಞರ ತನಿಖಾ ತಂಡವನ್ನು ರಚಿಸುವಂತೆ ರಾಯಚೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರಿಗೆ  ಶಿಫಾರಸು ಮಾಡಲಾಗುವುದು’ ಎಂದು ಲಿಂಗಸುಗೂರು ಉಪವಿಭಾಗಧಿಕಾರಿ ದಿವ್ಯಪ್ರಭು ಭರವಸೆ ನೀಡಿದರು.

ಸ್ಥಳೀಯ ಮಿನಿವಿಧಾನಸೌಧ ಕಚೇರಿ ಸಭಾಂಗಣದಲ್ಲಿ ಬುಧವಾರ ನಗರಾಭಿವೃದ್ಧಿ ಹೋರಾಟ ಸಮಿತಿ ಮುಖಂಡರೊಂದಿಗೆ ಅವರು  90 ನಿಮಿಷಗಳ ಕಾಲ ಚರ್ಚೆ ನಡೆಸಿದರು.
ಚಂದ್ರಶೇಖರ ಗೊರಬಾಳ, ಎಸ್.ದೇವೇಂದ್ರಗೌಡ, ವೆಂಕನಗೌಡ ಗದ್ರಟಗಿ ಮಾತನಾಡಿ, ‘ಎರಡು ವರ್ಷಗಳಿಂದ ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳು ಕ್ರಿಯಾ ಯೋಜನೆ ಪ್ರಕಾರ ನಡೆದಿಲ್ಲ. ಕಳಪೆ ಗುಣಮಟ್ಟದ ಸಿಮೆಂಟ್, ಇಟ್ಟಿಗೆ, ಮರಳನ್ನು ಕಾಮಗಾರಿಗೆ ಬಳಸಲಾಗಿದೆ. ವಿವಿಧ ವಾರ್ಡ್‌ಗಳಲ್ಲಿ ನಿರ್ಮಿಸಿದ ಚರಂಡಿ ಮತ್ತು ಡಾಂಬರ್ ರಸ್ತೆ ಅವೈಜ್ಞಾನಿಕವಾಗಿವೆ’ ಎಂದರು.

‘ನಗರಕ್ಕೆ ನೀರು ಪೂರೈಕೆಯಾಗುವ ಸಣ್ಣ ಮತು ದೊಡ್ಡ ಕೆರೆಗಳು ಸಂಪೂರ್ಣ ಖಾಲಿ ಆಗಿವೆ, ಹತ್ತು ದಿನಕ್ಕೊಮ್ಮೆ ವಾರ್ಡ್‌ಗಳಿಗೆ ನೀರು ಬಿಡಲಾಗುತ್ತಿದೆ. ಆದರೆ, ನೀರು ಹೊಂಡು ಮಿಶ್ರಿತವಾಗಿರುವದರಿಂದ ಕುಡಿಯುವ ಹಾಗಿಲ್ಲ. ಇನ್ನೂ ನಗರಸಭೆ ನಿರ್ವಹಣೆ ಕೊರತೆಯಿಂದ ಶರಣಬಸವೇಶ್ವರ ಕಾಲೊನಿ, ಮಹಿಬೂಬಿಯಾ ಕಾಲೊನಿ, ಕಾಟಿಬೇಸ್ ಮತ್ತಿತರ ಓಣಿಗಳಲ್ಲಿರುವ ಸಾರ್ವಜನಿಕ ಶೌಚಾಲಯಗಳು ಹದೆಗೆಟ್ಟು ದುರ್ನಾತ ಬೀರುತ್ತಿವೆ.

ADVERTISEMENT

ಕಸ ಮತ್ತು ಚರಂಡಿಗಳಲ್ಲಿನ ಘನತ್ಯಾಜ್ಯ ವಸ್ತುಗಳನ್ನು ಸರಿಯಾಗಿ ವಿಲೇವಾರಿಯಾಗುತ್ತಿಲ್ಲ. ಈ ಕುರಿತು ವಾರ್ಡಿನ ನಿವಾಸಿಗಳು ಮನವಿಗೆ ನಗರಸಭೆ ಸ್ಪಂದಿಸುತ್ತಿಲ್ಲ ಎಂದು ಮುಖಂಡರಾದ ಬಸವರಾಜ ಬಾದರ್ಲಿ, ಶಂಕರ ಗುರಿಕಾರ, ಕರೇಗೌಡ ಕುರಕುಂದಿ, ಗುಂಡಪ್ಪ ಬಳಿಗಾರ ಆಕ್ರೋಶ ವ್ಯಕ್ತಪಡಿಸಿದರು.

ಮಸ್ಯೆಗಳನ್ನು ಆಲಿಸಿದ ಉಪವಿಭಾಗಧಿಕಾರಿ ದಿವ್ಯಪ್ರಭು ಮಾತನಾಡಿ, ನಗರದಲ್ಲಿ ಯಾವುದೇ ಕಾಮಗಾರಿಗಳು ನಡೆಯುವಾಗ ಆಯಾ ವಾರ್ಡ್‌ಗಳ ಸದಸ್ಯರ ಅಧ್ಯಕ್ಷತೆಯಲ್ಲಿ ವಾರ್ಡ್‌ಸಭೆ ನಡೆಸಬೇಕೆಂದು ನಗರಸಭೆ ಕಾಯ್ದೆಯಲ್ಲಿ ಅಡಕವಾಗಿದೆ. ಆದರೆ ಇಲ್ಲಿಯ ಅಧಿಕಾರಿಗಳು ಸಭೆ ನಡೆಸಿಲ್ಲ. ಈ ಎಲ್ಲಾ ಸಮಸ್ಯೆಗಳ ಬಗ್ಗೆ  ಜಿಲ್ಲಾಧಿಕಾರಿ ಜತೆ ಚರ್ಚಿಸಿ ಕಾಮಗಾರಿಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗುವುದು.ಸಮಿತಿಯಲ್ಲಿ ಹೋರಾಟ ಸಮಿತಿ ಸದಸ್ಯರು ಇರುತ್ತಾರೆ ಎಂದರು.

ನಗರದಲ್ಲಿ ನಿರ್ವಹಣೆಯಿಲ್ಲದೆ ಹಾಳಾಗಿರುವ ಶೌಚಾಲಯಗಳನ್ನು ದುರಸ್ತಿಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕು. ಮುಖ್ಯರಸ್ತೆಯ ಕೆಲವೆಡೆ ಮೂತ್ರಾಲಯಗಳನ್ನು ನಿರ್ಮಿಸಬೇಕೆಂದು ನಗರಸಭೆ ಪೌರಾಯುಕ್ತ ರಮೇಶ ವಟಗಲ್‌ರಿಗೆ ಸೂಚಿಸಿದರು.

ಪ್ರಭಾರಿ ತಹಶೀಲ್ದಾರ್ ಶಂಶಾಲಂ, ನಗರಸಭೆ ಎಇಇ ಶಾಮಲಾ, ವ್ಯವಸ್ಥಾಪಕ ಗುರುರಾಜ ಸೌದಿ, ಹೋರಾಟ ಸಮಿತಿ ಮುಖಂಡರಾದ ಡಾ.ತಾಹೇರ್ಅಲಿ, ಬುದೆಪ್ಪ, ನಾರಾಯಣ ಬೆಳಗುರ್ಕಿ, ಯಾಖೂಬ್ಅಲಿ, ಶಂಕರ ವಾಲೇಕಾರ್, ಗಂಗಣ್ಣ ಡಿಶ್, ದಾವಲಸಾಬ ದೊಡ್ಮನಿ, ಸುರೇಶ ಕಟ್ಟಿಮನಿ, ಮೌನೇಶ ದೊರೆ, ಶಶಿಕಾಂತ ನಾಗಲಾಪೂರ, ಶೈಲಜಾ ಪ್ರಭಾಕರ್, ದುರುಗೇಶ, ಧರ್ಮರಾಜ ಉಪ್ಪಾರ, ಲಕ್ಷ್ಮಿ ಪತ್ತಾರ, ಬಸವರಾಜ ಗೋಡಿಹಾಳ, ಮುತ್ತು ಪಾಟೀಲ್ ಸಭೆಯಲ್ಲಿ ಇದ್ದರು.

**

ನಗರದಲ್ಲಿ ನಡೆದಿರುವ ಕಾಮಗಾರಿಗಳನ್ನು ಪರಿಶೀಲಿಸಿ, ಹೋರಾಟಗಾರರ ಒತ್ತಾಯದಂತೆ ತನಿಖಾ ತಂಡ ರಚಿಸಲು ಜಿಲ್ಲಾಧಿಕಾರಿ ಜೊತೆ ಚರ್ಚಿಸಲಾಗುವುದು
ದಿವ್ಯಪ್ರಭು
ಉಪವಿಭಾಗಾಧಿಕಾರಿ, ಲಿಂಗಸುಗೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.