ADVERTISEMENT

ತ್ವರಿತ ನ್ಯಾಯ: ಜಿಲ್ಲಾ ಕೋರ್ಟ್ ಮಾದರಿ ಕಾರ್ಯ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 8:42 IST
Last Updated 16 ಏಪ್ರಿಲ್ 2017, 8:42 IST
ತ್ವರಿತ ನ್ಯಾಯ: ಜಿಲ್ಲಾ ಕೋರ್ಟ್ ಮಾದರಿ ಕಾರ್ಯ
ತ್ವರಿತ ನ್ಯಾಯ: ಜಿಲ್ಲಾ ಕೋರ್ಟ್ ಮಾದರಿ ಕಾರ್ಯ   

ಚಿತ್ರದುರ್ಗ: ‘ನೊಂದವರಿಗೆ ತಕ್ಷಣ ಪರಿಹಾರ ಸಿಗುವಂತಾಗಬೇಕು. ನ್ಯಾಯಾಲಯಕ್ಕೆ ಬೇಕಾದ ಪೂರಕ ಸಾಕ್ಷ್ಯಾಧಾರಗಳನ್ನು ಪೊಲೀಸರು, ವಕೀಲರು ಒದಗಿಸಿದರೆ ಅನೇಕ ಪ್ರಕರಣಗಳು ಬಹುಬೇಗ ಇತ್ಯರ್ಥವಾಗುತ್ತವೆ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಅಭಿಪ್ರಾಯ
ಪಟ್ಟರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಶನಿವಾರ ನಗರದ ವಕೀಲರ ಭವನದಲ್ಲಿ ಆಯೋಜಿಸಿದ್ದ ‘ವಾಹನ ಅಪಘಾತ ಪ್ರಕರಣಗಳ ಕುರಿತು ಕಾನೂನು ಅರಿವು ಮತ್ತು ಪರಿಹಾರ ನೀಡುವ ಕಾರ್ಯಕ್ರಮ’ ಉದ್ಘಾಟಿಸಿ, ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಿಸಿ ಅವರು ಮಾತನಾಡಿದರು.

‘ಮಾನವೀಯ ಸ್ಪಂದನೆ ಅಗತ್ಯವಾಗಿ ಬೇಕಿದೆ. ಅಂಥ ಕೆಲಸವನ್ನು ಇಲ್ಲಿನ ಜಿಲ್ಲಾ ನ್ಯಾಯಾಲಯ ಮಾಡಿದೆ. ನೊಂದ ಕುಟುಂಬಗಳಿಗೆ ತಕ್ಷಣ ನ್ಯಾಯ ದೊರಕಿಸಿಕೊಡುವ ನ್ಯಾಯಾಧೀಶರ ಕಾರ್ಯವೈಖರಿ ಶ್ಲಾಘನೀಯ. ಇದು ನ್ಯಾಯಾಂಗ ವ್ಯವಸ್ಥೆಯ ಕರ್ತವ್ಯವೂ ಹೌದು’ ಎಂದರು.‘ರಸ್ತೆ ಅಪಘಾತದಲ್ಲಿ ಶೇ 99ರಷ್ಟು ಮಂದಿ ಸಾಯುತ್ತಿದ್ದಾರೆ. ಅವರಲ್ಲಿ ನಿತ್ಯ ಕೂಲಿ ಮಾಡಿ ಜೀವನ ಸಾಗಿಸುವವರೇ ಹೆಚ್ಚು. ಈ ಕುಟುಂಬಗಳಲ್ಲಿ ಒಬ್ಬರು ಮೃತಪಟ್ಟರೆ, ಉಳಿದವರಿಗೆ ಸಂಜೆಯ ಊಟವಿರುವುದಿಲ್ಲ.

ADVERTISEMENT

ಇಂಥ ಪರಿಸ್ಥಿತಿಯಲ್ಲಿ ಜಿಲ್ಲಾ ನ್ಯಾಯಾಲಯ ಕೂಲಿ ಕಾರ್ಮಿಕರ ಕುಟುಂಬಗಳಿಗೆ ತ್ವರಿತಗತಿ ಪರಿಹಾರ ಕೊಡಿಸಿ ದೊಡ್ಡ ಉಪಕಾರ ಮಾಡಿದೆ’ ಎಂದರು.
‘ಪ್ರಸ್ತುತ ಅಪಘಾತವಾದ ತಕ್ಷಣ ಮಾಹಿತಿ ಕಲೆಹಾಕುವಂಥ ಆಧುನಿಕ ತಂತ್ರಜ್ಞಾನಗಳಿವೆ. ಇಂಥವು ಹೆಚ್ಚು ಬಳಕೆಯಾಗಬೇಕು. ಸಂತ್ರಸ್ತ ಕುಟುಂಬಗಳು ಯಾವುದೇ ಹಂತದಲ್ಲಿ ಜಿಲ್ಲಾ ಮಟ್ಟದ ನ್ಯಾಯಾಧೀಶರನ್ನು ಸಂಪರ್ಕಿಸಿ ನ್ಯಾಯ ಪಡೆಯಬಹುದು. ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ನ್ಯಾಯಾಲಯ ನಿಮ್ಮ ನೆರವಿಗೆ ಧಾವಿಸಲಿದೆ’ ಎಂದರು.

‘ಕಾನೂನಾತ್ಮಕವಾಗಿ ಸಿಗಬೇಕಾದಂತಹ ಯಾವುದೇ ಸವಲತ್ತನ್ನು ನ್ಯಾಯಾಲಯ ಮತ್ತು ಕಾನೂನು ಸೇವಾ ಪ್ರಾಧಿಕಾರದಿಂದ ಪಡೆಯಬಹುದು. ಖಾತೆ, ಕಂದಾಯ, ಆರೋಗ್ಯ, ಸಬ್ಸಿಡಿ ಸೇರಿದಂತೆ ಯಾವುದೇ ಸಮಸ್ಯೆ ಇದ್ದರೂ ಪರಿಹರಿಸಿಕೊಳ್ಳಬಹುದು’ ಎಂದು ವಿವರಿಸಿದರು. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಜಿ.ಉಮಾ ಮಾತನಾಡಿ, ‘ತ್ವರಿತಗತಿಯ ನ್ಯಾಯ ಕೊಡಿಸುವ ಪ್ರಕ್ರಿಯೆ ಕೆಲವೇ ಪ್ರಕರಣಗಳಿಗೆ ಸೀಮಿತವಾಗ
ಬಾರದು. ನೊಂದವರ ಕಣ್ಣೀರು ಒರೆಸುವ ಕಾರ್ಯ ನಿರಂತರವಾಗಿ ಮುಂದುವರಿಯಬೇಕು. ನ್ಯಾಯಾಂಗ ವ್ಯವಸ್ಥೆ, ಪ್ರಾಧಿಕಾರದ ಮೇಲಿನ ಜನರ ವಿಶ್ವಾಸ ಹೆಚ್ಚಾಗಬೇಕು’ ಎಂದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ, ದಾವಣಗೆರೆ ವಿಭಾಗದ ನ್ಯಾಷನಲ್ ಇನ್ಶೂರೆನ್ಸ್‌ ಕಂಪೆನಿಯ ಸಹಾಯಕ ವ್ಯವಸ್ಥಾಪಕ ಮಾಲತೇಶ ಸಿ.ಹಳ್ಳೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್‌ ರಂಗರಾಜನ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್, ವಕೀಲರ
ಸಂಘದ ಅಧ್ಯಕ್ಷ ಬಿ.ಎಸ್.ನಾಗರಾಜ್ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.