ADVERTISEMENT

‘ನಾಡಿನ ಇತಿಹಾಸಕ್ಕೆ ಅಪಚಾರ ಸಲ್ಲ’

​ಪ್ರಜಾವಾಣಿ ವಾರ್ತೆ
Published 27 ಜೂನ್ 2017, 5:23 IST
Last Updated 27 ಜೂನ್ 2017, 5:23 IST

ಧಾರವಾಡ: ‘ನಾಡಿನ ಇತಿಹಾಸಕ್ಕೆ ಅಪಚಾರ ಎಸಗುವಂತ ಸಾಕಷ್ಟು ಘಟನೆಗಳು ಇತ್ತೀಚೆಗೆ ನಡೆಯುತ್ತಿವೆ, ಈ ಪ್ರವೃತ್ತಿ ಸರಿಯಲ್ಲ ಎಂದು ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಚ್.ಬಿ. ವಾಲಿಕಾರ ಹೇಳಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಶಿಕ್ಷಣ ಮತ್ತು ದತ್ತಿ ಟ್ರಸ್ಟ್ ಜ್ಞಾನ ವಿಹಾರ ವತಿಯಿಂದ ಸೋಮವಾರ ಆಯೋಜಿಸಿದ್ದ ರಾಜರ್ಷಿ ಛತ್ರಪತಿ ಶಾಹೂ ಮಹಾರಾಜರವರ 143ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ‘ಶಾಹೂರತ್ನ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಕರ್ನಾಟಕದಲ್ಲಿ ನೆಲೆಸಿ ಇಲ್ಲಿಯೇ ರಾಜ್ಯಭಾರ ಮಾಡಿದ ಶಾತವಾಹನರ ದೊರೆ ಗೌತಮಿ ಪುತ್ರ ಶಾತಕರ್ಣಿ ಹಾಗೂ ಅವರ ಆಸ್ಥಾನದ ಕವಿಯಾಗಿದ್ದ ನಾಗಾರ್ಜುನ ನಮ್ಮವನು ಎಂದು ಆಂಧ್ರಪ್ರದೇಶದವರು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಇವರು ಮೂಲತಃ ಕನ್ನಡ ನಾಡಿನವರು ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಇಂತಹ ಮಹನೀಯರ ಪೂರ್ವಾಪರ ಅರಿತುಕೊಳ್ಳದೆ ಇತಿಹಾಸಕ್ಕೆ ಅಪಚಾರ ಮಾಡಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ರಾಜ್ಯದಲ್ಲಿ ಕನ್ನಡ ಮಾಧ್ಯಮದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮಕ್ಕಳಿಗೆ ಸರ್ಕಾರಿ ಪಠ್ಯಪುಸ್ತಕ ಹೊರತುಪಡಿಸಿ ಗಣಿತ ಸೇರಿದಂತೆ ಎಲ್ಲ ವಿಷಯಗಳ ಪೂರಕ ಪುಸ್ತಕಗಳನ್ನು ಪರಿಚಯಿಸುವ ಅಗತ್ಯವಿದೆ. ಈಗಾಗಲೇ ಪ್ರೌಢಶಾಲೆ ಗಣಿತ ವಿಷಯದ ಪೂರಕ ಪಠ್ಯ ಪುಸ್ತಕ ರಚನೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಅಗಸ್ಟ್ ಅಂತ್ಯದೊಳಗೆ ಸ್ವತಃ ನಾನೇ ಜಿಲ್ಲೆಯ ಎಲ್ಲ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ ಪೂರಕ ಪಠ್ಯ ಪುಸ್ತಕಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸಬೇಕೆಂದಿದ್ದೇನೆ. ಜತೆಗೆ ಈ ಪೂರಕ ಪಠ್ಯ ಪುಸ್ತಕಗಳನ್ನು ಯುಟೂಬ್‌ನಲ್ಲಿ ಅಪ್‌ಲೋಡ್‌ ಮಾಡಲಾಗುವುದು’ ಎಂದರು. ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನ ಹಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಸುಶೀಲಾಬಾಯಿ ಛಲವಾದಿ ಅಧ್ಯಕ್ಷತೆ ವಹಿಸಿದ್ದರು.

ಡಾ. ಎಚ್.ಬಿ. ವಾಲಿಕಾರ,  ಅವರಿಗೆ ‘ಶಾಹೂರತ್ನ’  ಮತ್ತು ಕೆಎಸ್‌ಎಫ್‌ಸಿ ಬೆಳಗಾವಿ ಘಟಕದ ಪ್ರಧಾನ ವ್ಯವಸ್ಥಾಪಕ ಪಿ.ಆರ್.ಜಾಧವ, ಸಾಧನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಸಂಸ್ಥಾಪಕಿ ಡಾ. ಇಸಬೆಲ್ಲಾ ಝೇವಿಯರ್ ಅವರಿಗೆ ‘ಶಾಹೂಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರು, ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.