ADVERTISEMENT

ನಿರ್ಣಯ ರದ್ದತಿಗೆ ಜೆಡಿಎಸ್‌ ಸದಸ್ಯರಿಂದ ಪಟ್ಟು

ಸೊರಬ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಆರೋಪ–ಪ್ರತ್ಯಾರೋಪ

​ಪ್ರಜಾವಾಣಿ ವಾರ್ತೆ
Published 24 ಜೂನ್ 2017, 5:02 IST
Last Updated 24 ಜೂನ್ 2017, 5:02 IST

ಸೊರಬ:  ಸದಸ್ಯರ ನಡುವೆ ಆರೋಪ– ಪ್ರತ್ಯಾರೋಪ; ಗದ್ದಲದಿಂದಾಗಿ ಶುಕ್ರವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ಕೋಲಾಹಲ ಉಂಟಾಗಿತ್ತು.

ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ ನಿಗದಿ ವೇಳೆಗೆ ಸಭೆಗೆ ಬಂದರೂ  ಕೋರಂ ಇಲ್ಲದ ಕಾರಣ ಅರ್ಧ ಗಂಟೆ ಸಭೆಯನ್ನು ಮುಂದೂಡಲಾಯಿತು.

ಬಳಿಕ ಸಭೆ ಆರಂಭಗೊಳ್ಳುತ್ತಿದ್ದಂತೆ ಜೆಡಿಎಸ್ ಸದಸ್ಯ ನರೇಂದ್ರ ಒಡೆಯರ್ ಅವರು ಏಪ್ರಿಲ್‌ನಲ್ಲಿ ನಡೆದ ಸಾಮಾನ್ಯ ಸಭೆಯ ನಡಾವಳಿ ಮತ್ತು ನಿರ್ಣಯಗಳನ್ನು ರದ್ದುಪಡಿಸಲು ಮತಕ್ಕೆ ಹಾಕುವಂತೆ ಒತ್ತಾಯಿಸಿದರು.

ADVERTISEMENT

ಆ ಪಕ್ಷದ ಇತರ ಸದಸ್ಯರೂ ಬೆಂಬಲಕ್ಕೆ ನಿಂತು ನಿರ್ಣಯ ರದ್ದುಪಡಿಸುವವರೆಗೂ ಇಲಾಖಾವಾರು ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ, ಹಿಂದೆ ಕೈಗೊಂಡ ನಿರ್ಣಯಗಳನ್ನು ಕಾಲಮಿತಿಯೊಳಗೆ ಮಾತ್ರ ಕಾನೂನು ರೀತಿಯಲ್ಲಿ ರದ್ದುಗೊಳಿಸಲು ಸಾಧ್ಯ ಎಂದು ಆಕ್ಷೇಪಿಸಿದರು. ಮತಕ್ಕೆ ಹಾಕಲು ಅವಕಾಶ ನೀಡದಿದ್ದರೆ ಸಭೆ ನಡೆಸಲು ಬಿಡುವುದಿಲ್ಲ ಎಂದು ಜೆಡಿಎಸ್‌ ಸದಸ್ಯರು ಗಲಾಟೆ ಆರಂಭಿಸಿದರು.

ಕಾಂಗ್ರೆಸ್‌ನ ಚಿಕ್ಕಸವಿ ನಾಗರಾಜ್ ಹಾಗೂ ಬಿಜೆಪಿಯ ಪುರುಷೋತ್ತಮ್ ಅವರು ‘ನೀವು ಹಿಂದಿನ ಸಭೆಗೆ ಹಾಜರಾಗಿ, ನಂತರ ಬಹಿಷ್ಕರಿಸಿ ಹೊರಗೆ ಹೋಗಿದ್ದೀರಿ. ಕೋರಂ ಇದ್ದದ್ದರಿಂದ ಸಭೆ ನಡೆಸಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಅಂದೇ ನೀವು ವಿರೋಧಿಸ ಬೇಕಾಗಿತ್ತು’ ಎಂದು ತಿರುಗೇಟು ನೀಡಿದರು .

14 ಸದಸ್ಯರು ಒಪ್ಪಿಕೊಂಡಿರುವಾಗ ಕೆಲವೇ ಸದಸ್ಯರು ವಿರೋಧಿಸುತ್ತಾರೆ ಎಂಬ ಕಾರಣಕ್ಕೆ ನಿರ್ಣಯಗಳನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದ ಬಳಿಕ ಇಲಾಖಾವಾರು ಪ್ರಗತಿ ಪರಿಶೀಲನೆ ಆರಂಭಗೊಂಡಿತು.

ನಕಲಿ ವೈದ್ಯರ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪಕ್ಷಾತೀತವಾಗಿ ಸದಸ್ಯರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕು ವೈದ್ಯಾಧಿಕಾರಿ ಡಾ.ಸತೀಶ್, ಈಗಾಗಲೇ ತಾಲ್ಲೂಕಿನಲ್ಲಿ 10 ನಕಲಿ ವೈದ್ಯರನ್ನು ಗುರುತಿಸಿ ಶಿಸ್ತು ಕ್ರಮಕ್ಕೆ ಜಿಲ್ಲಾಧಿಕಾರಿಗೆ ಹಾಗೂ ಜಿಲ್ಲಾ ವೈದ್ಯಾಧಿಕಾರಿಗೆ ವರದಿ ಕಳುಹಿಸಲಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುನಾಥ್ ಮಾತನಾಡಿ, ‘ನೂರು ಶಾಲೆಗಳಿಗೆ ಹೊಸದಾಗಿ ಕೊಠಡಿ ನಿರ್ಮಾಣಕ್ಕೆ ಕ್ರಿಯಾ ಯೋಜನೆ ತಯಾರಿಸಲಾಗಿದೆ. 131 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಜುಲೈ 1ರಿಂದ ಕರ್ತವ್ಯಕ್ಕೆ ಹಾಜರಾಗ ಲಿದ್ದಾರೆ. ಈ ಬಾರಿ ವೇತನವನ್ನು ಸರ್ಕಾರ ಹೆಚ್ಚಿಸಿದೆ’ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ತೋಟಗಾರಿಕಾ ಹಿರಿಯ ನಿರ್ದೇಶಕ ಸೋಮಶೇಖರ್, ಸಮಾಜ ಕಲ್ಯಾಣಾ ಧಿಕಾರಿ ರವಿಕುಮಾರ್, ಮೆಸ್ಕಾಂ ಎಂಜಿನಿಯರ್‌ ನವೀನ ಕುಮಾರ್, ಜಿಲ್ಲಾ ಪಂಚಾಯ್ತಿ ಎಂಜಿನಿಯರ್‌ ನಂಜುಂಡಪ್ಪ, ಸಹಾಯಕ ಕೃಷಿ ಅಧಿಕಾರಿ ಮಂಜುಳಾ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.