ADVERTISEMENT

ಪ್ರಾದೇಶಿಕ ಭಾಷೆ ಉಳಿಸಲು ಕರ್ನಾಟಕದ ನೇತೃತ್ವ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ.ಪುರುಷೋತ್ತಮ ಬಿಳಿಮಲೆ ಸಲಹೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 8:29 IST
Last Updated 31 ಡಿಸೆಂಬರ್ 2017, 8:29 IST
ಪ್ರಾದೇಶಿಕ ಭಾಷೆ ಉಳಿಸಲು ಕರ್ನಾಟಕದ ನೇತೃತ್ವ
ಪ್ರಾದೇಶಿಕ ಭಾಷೆ ಉಳಿಸಲು ಕರ್ನಾಟಕದ ನೇತೃತ್ವ   

ಬೀದರ್: ‘ಕನ್ನಡ ಸೇರಿದಂತೆ ದೇಸಿಯ ಭಾಷೆಗಳನ್ನು ಉಳಿಸಿಕೊಳ್ಳುವ ಬೃಹತ್ ಚಳವಳಿಗೆ ಕರ್ನಾಟಕ ಮುಂದಾಳತ್ವ ವಹಿಸಿಕೊಳ್ಳಬೇಕು’ ಎಂದು ನವದೆಹಲಿಯ ಜೆಎನ್‌ಯು ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ.ಪುರುಷೋತ್ತಮ ಬಿಳಿಮಲೆ ಮನವಿ ಮಾಡಿದರು.

ಬಸವಕಲ್ಯಾಣ ತಾಲ್ಲೂಕಿನ ಹುಲಸೂರಲ್ಲಿ ಶನಿವಾರ 16ನೇ ಬೀದರ್‌ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ದೇಸಿಯ ಭಾಷೆಗಳ ಅಭಿವೃದ್ಧಿಗೆ ರಾಜಕೀಯ ಪಕ್ಷಗಳು ಒಂದಾಗಿ ಶ್ರಮಿಸುತ್ತಿಲ್ಲ. ಕನ್ನಡ ರಾಜಕೀಯ ಭಾಷಣಕ್ಕೆ ಸೀಮಿತವಾಗಿದೆ. ಯಾರೂ ಕನ್ನಡ ಸಾಯಿಸಿ ಅಧಿಕಾರಕ್ಕೆ ಬರುವುದು ಬೇಡ, ವೇದಿಕೆಗಳಲ್ಲಿ ಕನ್ನಡದ ಘನತೆಗೆ ಕುತ್ತು ತರುವುದೂ ಬೇಡ. ದೇಸಿ ಭಾಷೆಗಳ ಅಭಿವೃದ್ಧಿಗೆ ಒತ್ತು ಕೊಡಬೇಕು’ ಎಂದು ಹೇಳಿದರು.

ADVERTISEMENT

‘ಕನ್ನಡ ಭಾಷೆಗೆ ದೊಡ್ಡ ಘನತೆ ಇದೆ. ಕನ್ನಡ ಹೃದಯದ, ಬಸವನ ಭಾಷೆಯಾಗಿದೆ. ಅಕ್ಕ ಮಹಾದೇವಿ, ಅಲ್ಲಮಪ್ರಭು, ಪಂಪ, ರನ್ನ, ಕುವೆಂಪು, ದ.ರಾ. ಬೇಂದ್ರೆ ಸಾಹಿತ್ಯ ರಚಿಸಿದ ಭಾಷೆ ಇದಾಗಿದೆ. ಕನ್ನಡ ಭಾಷೆಗೆ ಕರುಣೆಯನ್ನು ಕೊಟ್ಟವರು ಬೌದ್ಧರು. ಇಂದು ಧರ್ಮದ ಹೆಸರಿನಲ್ಲಿ ರಾಜಕೀಯ ನಡೆದಿದೆ. ಧರ್ಮವೆಂಬ ದೋಣಿಯನ್ನು ಮುನ್ನಡಿಸುವ ಕುವೆಂಪು, ಕನಕದಾಸ ಅವರಂತಹ ಮಹಾನುಭಾವರು ಬೇಕಾಗಿದ್ದಾರೆ’ ಎಂದರು.

‘ಬೇರೆ ಯಾವ ಭಾಷೆಗೂ ಇಲ್ಲದ ಬಹುಮುಖ ಸಂಸ್ಕೃತಿ ಕನ್ನಡಕ್ಕೆ ಇದೆ. ರಾಜ ಮಹಾರಾಜರು ಕನ್ನಡ ಉಳಿಸಿ, ಬೆಳೆಸಿದ್ದಾರೆ. ಟಿಪ್ಪುವಿನ ಆಡಳಿತ ಅವಧಿಯಲ್ಲಿನ ಲಾವಣಿಗಳು ಇಂದಿಗೂ ಇವೆ’ ಎಂದು ತಿಳಿಸಿದರು.

‘ಮುದ್ರಣ ಮಾಧ್ಯಮಗಳು ಮಾತ್ರ ಕನ್ನಡ ಉಳಿಸಿಕೊಂಡಿವೆ. ದೃಶ್ಯ ಮಾಧ್ಯಮಗಳು ಭಾಷೆಯನ್ನು ಹಾಳು ಮಾಡುವಲ್ಲಿ ನಿರತವಾಗಿವೆ. ಪ್ರಸ್ತುತ ಕನ್ನಡದಲ್ಲಿ ಶೇ. 40ರಷ್ಟು ಇಂಗ್ಲಿಷ್ ಶಬ್ದಗಳು ಬಳಕೆಯಾಗುತ್ತಿವೆ. ದೃಶ್ಯ ಮಾಧ್ಯಮದವರಿಗೆ ಕನ್ನಡದ ಗುಣ ಗೊತ್ತಿಲ್ಲ. ಕನ್ನಡ ಭಾಷೆ ಬಗೆಗೆ ಮಾಧ್ಯಮ ಪ್ರತಿನಿಧಿಗಳಿಗೆ ಕನಿಷ್ಠ ಒಂದು ವಾರ ಪುನಶ್ಚೇತನ ಶಿಬಿರ ಆಯೋಜಿಸಬೇಕಿದೆ. ಮೂಲ ಪದಗಳನ್ನು ಹೇಳುವ ಸಾಮರ್ಥ್ಯ ಕನ್ನಡಕ್ಕೆ ಮಾತ್ರ ಇದೆ. ಕನ್ನಡದ ಚರಿತ್ರೆ ಹಾಗೂ ಮುಕ್ತಭಾವವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಸಣ್ಣ ಸಣ್ಣ ಸಮುದಾಯಗಳು ಹಾಗೂ ಸಮುದಾಯಗಳ ಸೃಜನಶೀಲತೆಯಿಂದ ದೇಶ ಉಳಿದಿದೆ. ಶಿಕ್ಷಣ ನೀತಿ ಬದಲಾಗುತ್ತಿದೆ. ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣ ಕೊಡಿಸುವ ಅಧಿಕಾರ ಸಹ ರಾಜ್ಯ ಸರ್ಕಾರದ ಬಳಿ ಉಳಿದಿಲ್ಲ. ಕನ್ನಡ ಕಟ್ಟುವ ಅಧಿಕಾರವನ್ನೂ ರಾಜ್ಯ ಸರ್ಕಾರ ಕಳೆದುಕೊಂಡಿದೆ. ಬೇರೆ ಭಾಷೆಗಳನ್ನು ಕಲಿಯುವುದಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ, ಕನ್ನಡಕ್ಕೆ ಪ್ರಾಧಾನ್ಯ ನೀಡಬೇಕು. ಸಂವಿಧಾನಕ್ಕೆ ತಿದ್ದುಪಡಿ ಮಾಡಿ ರಾಜ್ಯ ಭಾಷೆಗೆ ಒತ್ತುಕೊಡಲು ನಡೆಸಿದ ಪ್ರಯತ್ನ ಇಂದಿಗೂ ಸಫಲವಾಗಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘ರಾಜಕಾರಣಿಗಳು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳಿಸುತ್ತಿಲ್ಲ. ಒಂದು ಕನ್ನಡ ಶಾಲೆ ತೆರೆಯಲು ಯಾರೊಬ್ಬರೂ ಪ್ರಯತ್ನ ಮಾಡುತ್ತಿಲ್ಲ. ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಪ್ರಾಧಾನ್ಯ ನೀಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜನ ಪ್ರತಿನಿಧಿಗಳಿಗೆ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಪರಿಣಾಮಕಾರಿ ವಿಷಯಗಳನ್ನು ಮಂಡಿಸಲು ಸಾಧ್ಯವಾಗುತ್ತಿಲ್ಲ. ಮಲೆಯಾಳಿ, ತಮಿಳಿಗರು ಮಾಡುವಂತಹ ಕೆಲಸವನ್ನು ಕನ್ನಡಿಗರು ಮಾಡುತ್ತಿಲ್ಲ. ಲೋಕಸಭೆಯಲ್ಲಿ ಕರ್ನಾಟಕ ಬಹಳ ದುರ್ಬಲವಾಗಿ ಪ್ರತಿನಿಧಿಸಿದೆ’ ಎಂದು ನೋವಿನಿಂದ ನುಡಿದರು.

ಸಮ್ಮೇಳನಾಧ್ಯಕ್ಷ ಎಂ.ಜಿ.ದೇಶಪಾಂಡೆ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ, ಗೌರವ ಕಾರ್ಯದರ್ಶಿ ಬಸವರಾಜ ಬಲ್ಲೂರ ಮಾತನಾಡಿದರು. ಹಾರಕೂಡ ಚನ್ನವೀರ ಶಿವಾಚಾರ್ಯರು, ಶಿವಾನಂದ ಸ್ವಾಮೀಜಿ, ಅಕ್ಕ ಅನ್ನಪೂರ್ಣ, ಮಾಜಿ ಶಾಸಕ ಎಂ.ಜಿ.ಮುಳೆ, ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ, ಕೆಪಿಸಿಸಿ ಕಾರ್ಯದರ್ಶಿ ಬಿ.ನಾರಾಯಣರಾವ್, ಜಿಲ್ಲಾ ಪಂಚಾಯಿತಿ ಸದಸ್ಯ ಸುಧೀರ ಕಾಡಾದಿ, ಲತಾ ಹಾರಕೂಡೆ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಸದಸ್ಯ ಶಿವರಾಜ ನರಶೆಟ್ಟಿ, ಶಿವಶರಣ ಬಿರಾದಾರ, ಹಣಮಂತಪ್ಪ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಲಾ ಬಸವರಾಜ ಡೊಣಗಾಪುರೆ, ಶಿವಲೀಲಾ ಮಠಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.