ADVERTISEMENT

ಬರದ ಛಾಯೆ ಅಳಿಸದ ಪಶುಭಾಗ್ಯ

ಶಾಸಕರು– ಆಯ್ಕೆ ಸಮಿತಿ ಸದಸ್ಯರ ‘ಪಾಲು ಸಂಘರ್ಷ’; ಸೌಲಭ್ಯ ಹಂಚಿಕೆ ವಿಳಂಬ

ಎಂ.ಚಂದ್ರಪ್ಪ
Published 9 ಮಾರ್ಚ್ 2017, 7:37 IST
Last Updated 9 ಮಾರ್ಚ್ 2017, 7:37 IST
ಬರದ ಛಾಯೆ ಅಳಿಸದ ಪಶುಭಾಗ್ಯ
ಬರದ ಛಾಯೆ ಅಳಿಸದ ಪಶುಭಾಗ್ಯ   
ತುಮಕೂರು:  ಸತತ ಬರದಿಂದ ಮಳೆ, ಬೆಳೆ ಕಳೆದುಕೊಂಡಿರುವ ರೈತ ಸಮುದಾಯಕ್ಕೆ ವರವಾಗಬೇಕಿದ್ದ ಪಶುಭಾಗ್ಯ ಯೋಜನೆ ಬರದ ಮೇಲೆಯೇ ಮತ್ತೊಂದು ಬರೆ ಎಳೆದಿದೆ. ಹೈನೋದ್ಯಮ ಉತ್ತೇಜಿಸುವ ಜತೆಗೆ ರೈತರನ್ನು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡಲು 2015–16ರಲ್ಲಿ ರಾಜ್ಯ ಸರ್ಕಾರ ಪಶುಭಾಗ್ಯ ಯೋಜನೆ ಜಾರಿಗೆ ತಂದಿತು. 
 
ಜಿಲ್ಲೆಯಾದ್ಯಂತ ಈ ವರ್ಷ ಒಟ್ಟು 768 ಫಲಾನುಭವಿಗಳಿಗೆ ಯೋಜನೆ ಮಂಜೂರಾಗಿದೆ. ಆದರೆ, ಪಾವಗಡ, ತುರುವೇಕೆರೆ, ತುಮಕೂರು ಗ್ರಾಮಾಂತರ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಈವರೆಗೂ ಫಲಾನುಭವಿ ಆಯ್ಕೆ ಪ್ರಕ್ರಿಯೆಯೇ ನಡೆದಿಲ್ಲ.
 
ಫಲಾನುಭವಿಗಳ ತಲಾ ಹಂಚಿಕೆಯಲ್ಲಿ ಸರ್ಕಾರದ ನಾಮ ನಿರ್ದೇಶಿತ ಸದಸ್ಯರು ಹಾಗೂ ಆಯ್ಕೆ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕರ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿರುವ ಕಾರಣ ಸೌಲಭ್ಯ ಹಂಚಿಕೆ ವಿಳಂಬ ಆಗಿದೆ.
 
ಪ್ರತಿ ತಾಲ್ಲೂಕಿಗೆ ಹಂಚಿಕೆಯಾದ ಫಲಾನುಭವಿಗಳ ಸಂಖ್ಯೆಯಲ್ಲಿ ಶೇ 50ರಷ್ಟು ತಮಗೂ ನೀಡಬೇಕು ಎಂದು ನಾಮ ನಿರ್ದೇಶನ ಸದಸ್ಯರು ಪಟ್ಟು ಹಿಡಿದಿದ್ದರೆ, ಅರ್ಧದಷ್ಟು ಫಲಾನುಭವಿಗಳ ಆಯ್ಕೆ ಸ್ವಾತಂತ್ರ್ಯವನ್ನು ನೀಡಲು ಶಾಸಕರು ಒಪ್ಪುತ್ತಿಲ್ಲ. ಹಾಗಾಗಿ ಪಶುಭಾಗ್ಯ ಯೋಜನೆ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸಲಾಗಿಲ್ಲ ಎಂದು ಪಶು ಸಂಗೋಪನಾ ಇಲಾಖೆ ಮೂಲಗಳು ತಿಳಿಸಿವೆ.
 
ಶಿರಾ, ಮಧುಗಿರಿ, ತಿಪಟೂರು, ಕುಣಿಗಲ್‌, ತುಮಕೂರು ನಗರ, ಕೊರಟಗೆರೆ ತಾಲ್ಲೂಕಿನ ಫಲಾನುಭವಿಗಳ ಪಟ್ಟಿ ಅಂತಿಮವಾಗಿದ್ದು, ಈಗಾಗಲೇ ಹಲವರಿಗೆ ಸೌಲಭ್ಯ ಕೂಡ ವಿತರಿಸಲಾಗಿದೆ.
 
ಪಶು ಭಾಗ್ಯ ಯೋಜನೆಯಡಿ ಜಿಲ್ಲೆಗೆ 72 ಕುರಿ ಘಟಕ, 23 ಹಂದಿ, 40 ಕೋಳಿ ಘಟಕಗಳೂ ಸೇರಿವೆ. ಉಳಿದ 633 ಫಲಾನುಭವಿಗಳಿಗೆ ಹಸು ಖರೀದಿಸಲು ಸಾಲ ಸೌಲಭ್ಯ ಒದಗಿಸಲಾಗುವುದು. ಪ್ರತಿ ತಾಲ್ಲೂಕಿಗೆ ಅಂದಾಜು 63 ಹಸು ಖರೀದಿಗೆ ಸಾಲ ಸೌಲಭ್ಯ ಸಿಗಲಿದೆ. 
 
ಬ್ಯಾಂಕ್‌ಗಳ ಅತೃಪ್ತಿ: ಸರ್ಕಾರದ ವಿವಿಧ ಯೋಜನೆಗಳಿಗೆ ಹಣಕಾಸು ನೆರವು ನೀಡುವ ಬ್ಯಾಂಕ್‌ಗಳು ಸಾಲ ಯೋಜನೆಗೆ ಹಣ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿವೆ. ಪಶುಭಾಗ್ಯ ಸೇರಿ ಇನ್ನಿತರ ಯೋಜನೆಗಳಲ್ಲಿ ಫಲಾನುಭವಿಗಳ  ಆಯ್ಕೆ ಪಟ್ಟಿ ಸಲ್ಲಿಕೆ ವಿಳಂಬದಿಂದ ಇಲಾಖೆ ಅಧಿಕಾರಿಗಳ ಮೇಲೆ ಸಿಟ್ಟು ತೋರುತ್ತಾರೆ.

ಒಮ್ಮೊಮ್ಮೆ ಸಾಲ ಮಂಜೂರಾತಿಗೆ ಇಲ್ಲ ಸಲ್ಲದ ಕಾರಣ ಹೇಳಿ ವಿಳಂಬ ಮಾಡುತ್ತಾರೆ. ಬಹುತೇಕ ಬ್ಯಾಂಕ್‌ಗಳು ಈಗಾಗಲೇ ಸರ್ಕಾರದ ಇಲಾಖೆ ಅಧಿಕಾರಿಗಳನ್ನು ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ಈಗ ಆಯ್ಕೆ ಪಟ್ಟಿ ಸಲ್ಲಿಕೆ ಮನ್ನಷ್ಟು ವಿಳಂಬವಾದರೆ ಯೋಜನೆ ಅನುಷ್ಠಾನಕ್ಕೆ ಹಿನ್ನಡೆಯಾ ಗಲಿದೆ ಎಂದು ಪಶು ಸಂಗೋಪನಾ ಇಲಾಖೆ ಮೂಲಗಳು ತಿಳಿಸಿವೆ.

ಪಶು ಭಾಗ್ಯ ಯೋಜನೆ ಸೌಲಭ್ಯ ಏನು?
ಸಣ್ಣ ಹಾಗೂ ಅತಿ ಸಣ್ಣ ರೈತರು ಹಸು, ಕುರಿ, ಆಡು, ಹಂದಿ, ಕೋಳಿ ಘಟಕಗಳನ್ನು ಸ್ಥಾಪಿಸಲು ಪಶು ಸಂಗೋಪನಾ ಇಲಾಖೆ ಬ್ಯಾಂಕ್‌ಗಳಿಂದ ₹1.20 ಲಕ್ಷದವರೆಗೆ ಸಾಲ ಸೌಲಭ್ಯ ಒದಗಿಸುತ್ತದೆ. ಈ ಸಾಲದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ಶೇ 50 ಹಾಗೂ ಸಾಮಾನ್ಯ ವರ್ಗದವರಿಗೆ ಶೇ 25 ರಷ್ಟು ಸಹಾಯಧನ ದೊರೆಯಲಿದೆ.


ಅದೇ ರೀತಿ ಬೆಳೆ ಸಾಲದ ಮಾದರಿಯಲ್ಲಿ ಸಹಕಾರಿ ಬ್ಯಾಂಕ್‌ಗಳಿಂದ ಶೂನ್ಯ ಬಡ್ಡಿ ದರದಲ್ಲಿ ₹ 50 ಸಾವಿರದವರೆಗೆ ಪಶು ಆಹಾರ, ಇತರೆ ನಿರ್ವಹಣೆ ವೆಚ್ಚಕ್ಕಾಗಿ ಅಲ್ಪಾವಧಿ ಸಾಲವೂ ಸಿಗಲಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ 5 ರಾಸುಗಳವರೆಗೆ ವಿಮಾ ಕಂತು ಪಾವತಿಸಲು ಸಹಾಯಧನವನ್ನೂ ಒದಗಿಸುವ ಸಲುವಾಗಿ ಪಶು ಭಾಗ್ಯ ಯೋಜನೆ ಜಾರಿಗೆ ತರಲಾಗಿದೆ.

1500 ನೀರಿನ ತೊಟ್ಟಿ ನಿರ್ಮಾಣ
‘ಕುರಿ ಮತ್ತು ಆಡುಗಳಿಗಾಗಿ 1500 ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸಬೇಕು ಎಂದು ಪಶು ಸಂಗೋಪನಾ ಇಲಾಖೆಯು ಆಯುಕ್ತರಿಗೆ ಪ್ರಸ್ತಾವ ಸಲ್ಲಿಸಿದೆ’ ಎಂದು ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿ ಕುರಿ ಸಾಕಾಣಿಕೆ ಹೆಚ್ಚಿರುವ ಪ್ರದೇಶದಲ್ಲಿ ನೀರಿನ ತೊಟ್ಟಿ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಜಾನುವಾರುಗಳಿಗೆ ಈಗಾಗಲೇ ಜಿಲ್ಲಾಡಳಿತ 900 ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸಿದೆ. ಆದರೆ, ಕುರಿ, ಆಡುಗಳಿಗೆ ಆ ಸೌಲಭ್ಯವಿಲ್ಲ. ಕುರಿ ಹಾಗೂ ಆಡುಗಳಿಗೂ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಬೇಕು ಎಂಬ ಒತ್ತಾಯ ಕೇಳಿಬಂದ ಕಾರಣ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

‘ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೀರಿನ ತೊಟ್ಟಿ ನಿರ್ಮಿಸಲು ಅವಕಾಶವಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈ ಸಂಬಂಧ ಕ್ರಮ ಕೈಗೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT