ADVERTISEMENT

‘ಬಸವಣ್ಣ ಹೆಸರಿನಲ್ಲಿ ವ್ಯಾಪಾರೀಕರಣ ಸಲ್ಲದು’

ಉಪನ್ಯಾಸಕಿ ರುದ್ರಮ್ಮ ಅಮರೇಶ ಹಾಸಿನಾಳ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 10:48 IST
Last Updated 26 ಅಕ್ಟೋಬರ್ 2017, 10:48 IST

ಲಿಂಗಸುಗೂರು: ‘ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿರುವ 12ನೇ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯದ ವಾಸ್ತವ ಅಧ್ಯಯನ ಮಾಡದೆ, ವಿಶ್ವಗುರು ಬಸವಣ್ಣ ಹೆಸರು ಬಳಸಿಕೊಂಡ ಬಹುತೇಕರು ವ್ಯಾಪಾರೀಕರಣ ಮಾಡುತ್ತಿರುವುದನ್ನು ತಡೆಯಬೇಕು’ ಎಂದು ಉಪನ್ಯಾಸಕಿ ರುದ್ರಮ್ಮ ಅಮರೇಶ ಹಾಸಿನಾಳ ಸಲಹೆ ನೀಡಿದರು.

ಮಂಗಳವಾರ ಲಿಂಗೈಕ್ಯ ವಿಜಯಮಹಾಂತ ಶಿವಯೋಗಿಗಳ 106ನೇ ಪುಣ್ಯಸ್ಮರಣೆ,ಶ ರಣ ಸಂಸ್ಕೃತಿ ಮಹೋತ್ಸವ ಮತ್ತು ವಿಶ್ವ ಬಸವ ಧರ್ಮ ಸಮಾವೇಶದ ಮಹಿಳಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಬಸವಣ್ಣನವರ ಆಚಾರ ವಿಚಾರ ಮೈಗೂಡಿಸಿಕೊಂಡು ಸಮಾಜ ತಿದ್ದಬೇಕಾದ ಕೆಲ ಸ್ವಾಮೀಜಿಗಳು ಐಷಾರಾಮಿ ಬದುಕಿಗೆ ಶರಣಾಗಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘12ನೇ ಶತಮಾನದ ಸಾಮಾಜಿಕ ಕ್ರಾಂತಿಯಲ್ಲಿ ಶರಣೆಯರು ಮಹತ್ವದ ಪಾತ್ರ ವಹಿಸಿದ್ದಾರೆ. ಆ ಶರಣೆಯರ ಸಾಲಿನಲ್ಲಿ ಅಕ್ಕಮಹಾದೇವಿ ಕೂಡ ಒಬ್ಬರು. ಅಕ್ಕಮಹಾದೇವಿ ರಚಿತ ವಚನಗಳ ಮೇಲೆ ಮತ್ತಷ್ಟು ಸಂಶೋಧನೆ ನಡೆಸುವ ಅಗತ್ಯವಿದೆ. ಇತ್ತೀಚಿನ ವರ್ಷಗಳಲ್ಲಿ ವಚನಗಳನ್ನು ಕೆಲ ಪಂಡಿತರು ತಮ್ಮ ಮನಸ್ಸಿಗೆ ತಕ್ಕಂತೆ ವಿಶ್ಲೇಷಣೆ ಮಾಡುತ್ತ ವಾಸ್ತವ ಮರೆಮಾಚುತ್ತಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಸಂತೆಕೆಲ್ಲೂರಿನ ಗುರುಬಸವ ಸ್ವಾಮೀಜಿ, ತಿಕೋಟಾದ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ, ಪಾಂಡುಮಟ್ಟಿ ಗುರುಬಸವ ಶಿವಯೋಗಿ ಮಾತನಾಡಿ, ‘ಬಸವ ಧರ್ಮದ ಆಚರಣೆಯಲ್ಲಿ ಮಾತ್ರ ಮಹಿಳೆಯರಿಗೆ ಸಮಾನತೆ ಇರುವುದು ಕಂಡು ಬರುತ್ತದೆ. ಪುರುಷರಷ್ಟೇ ಮಹಿಳೆಯರು ಸಮರ್ಥರಾಗಿದ್ದು ಎಲ್ಲ ರಂಗದಲ್ಲಿ ಇನ್ನೂ ಹೆಚ್ಚಿನ ಅವಕಾಶಗಳು ದೊರಕಿಸಿಕೊಡಬೇಕು’ ಎಂದು ಸಲಹೆ ನೀಡಿದರು.

ಇಳಕಲ್ಲಿನ ಮಹಾಂತಪ್ಪ ಅಪ್ಪ ಸಾನ್ನಿಧ್ಯ ವಹಿಸಿದ್ದರು. ಇಳಕಲ್ಲಿನ ಗುರುಮಹಾಂತ ಸ್ವಾಮೀಜಿ, ಶಿರೂರಿನ ಡಾ. ಬಸವಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.