ADVERTISEMENT

ಭಾವೈಕ್ಯದ ತಿಕೋಟಾ ಹಾಜಿ ಮಸ್ತಾನ್ ಉರುಸ್

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2017, 5:37 IST
Last Updated 12 ಸೆಪ್ಟೆಂಬರ್ 2017, 5:37 IST
ತಿಕೋಟಾದಲ್ಲಿರುವ ಹಾಜಿ ಮಸ್ತಾನ್‌ ದರ್ಗಾ
ತಿಕೋಟಾದಲ್ಲಿರುವ ಹಾಜಿ ಮಸ್ತಾನ್‌ ದರ್ಗಾ   

ವಿಜಯಪುರ ಜಿಲ್ಲೆ ಎಂದೊಡನೆ ಥಟ್ಟನೆ ನೆನಪಿಗೆ ಬರುವುದು ಬರಗಾಲ ಮತ್ತು ಸುಡು ಸುಡು ಬಿಸಿಲು. ವಿಜಯಪುರದಿಂದ ಪಶ್ಚಿಮಕ್ಕೆ 20 ಕಿ.ಮೀ. ಬಂದರೆ ವಿದೇಶಕ್ಕೆ ರಫ್ತಾಗುವ ಬೀಜರಹಿತ ದ್ರಾಕ್ಷಿ, ದಾಳಿಂಬೆ, ಬಾಳೆ, ಬಾರೆ ಹಣ್ಣುಗಳ ಖ್ಯಾತಿಯ ತಿಕೋಟಾ ಸಿಗುತ್ತದೆ. ಇಲ್ಲಿ ನಡೆಯುವ ಹಾಜಿ ಮಸ್ತಾನ್ ಉರುಸ್‌ ಭಾವೈಕ್ಯದ ಪ್ರತೀಕವಾಗಿದೆ.

ಭಾರತದಲ್ಲೇ ಪ್ರಪ್ರಥಮ ಸರ್ಕಸ್ ಕಂಪೆನಿ ಪ್ರಾರಂಭಿಸಿದ ವಿಷ್ಣುಪಂತ ಛತ್ರೆ ಹಾಗೂ ಕಾಶೀನಾಥ ಛತ್ರೆ, ಚೌಡಕಿ ಪದದ ಗೌರವ್ವ ಮಾದರ ಮುಂತಾ ದವರು ತಿಕೋಟಾದ ಹೆಮ್ಮೆಯ ಮಕ್ಕಳು. ‘ಕಪ್ಪು ಕಲ್ಲಿನ ತಾಜಮಹಲ್’ ಎಂದು ಕರೆಯಿಸಿಕೊಳ್ಳುವ ಇಬ್ರಾಹಿಂ ರೋಜಾದ ಶಿಲ್ಪಿ ಸಂದಲ್ ಮಲೀಕ್‌ನ ಸಮಾಧಿ ಹೊಂದಿದ ಈ ಗ್ರಾಮ ಹಲವು ವೈಶಿಷ್ಟ್ಯಗಳಿಂದ ಕೂಡಿದೆ.

ಮಹಾರಾಷ್ಟ್ರದ ಕುರುಂದವಾಡ ಸಂಸ್ಥಾನದಲ್ಲಿ ತಿಕೋಟಾ ತಾಲ್ಲೂಕು ಕೇಂದ್ರವಾಗಿತ್ತು. ಈಗ ಹೋಬಳಿ ಕೇಂದ್ರ ವಾಗಿದೆ. ಬರುವ ಜನವರಿ 1ರಿಂದ ತಾಲ್ಲೂಕು ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಹೀಗೆ ಹಲವು ವಿಶೇಷಗಳ ಈ ಊರಿನಲ್ಲಿ ಪ್ರತಿವರ್ಷ ಜರುಗುವ ಹಾಜಿ ಮಸ್ತಾನ್ ಉರುಸ್‌ ಹಿಂದೂ-ಮುಸ್ಲಿಮರ ಭಾವೈಕ್ಯದ ಪ್ರತೀಕವಾಗಿದೆ. ಈ ವರ್ಷ ಸೆ.12ರಿಂದ ಮೂರು ದಿನ ಉರುಸ್‌ ಜರುಗಲಿದೆ.

ADVERTISEMENT

ಜಾತ್ರೆ ನಿಮಿತ್ತ 20 ದಿನಗಳವರೆಗೆ ಎಲ್ಲ ಜಾತಿಯವರು ರೋಜಾ (ಹಗಲು ಉಪವಾಸ) ವ್ರತ ಮಾಡುತ್ತಾರೆ. ಉರುಸ್ (ಪುಣ್ಯತಿಥಿ) ನ ಮೊದಲ ದಿನ ಸಂದಲ್ (ಗಂಧ) ಹೊರಡುವುದು ಬ್ರಾಹ್ಮಣರಾದ ರಾಮರಾವ್ ದೇಸಾಯಿ ಅವರ ಮನೆಯಿಂದ. ಮರುದಿನ ನೈವೇದ್ಯದ ಜೊತೆ ಗಲೀಫ್ (ವಸ್ತ್ರ) ಬರುವುದು ಲಿಂಗಾಯತರಾದ ಡಾ. ಮಲ್ಲನಗೌಡ ಪಾಟೀಲರ ಮನೆಯಿಂದ.

ಮೂರು ದಿನಗಳ ಕಾಲ ಕುಸ್ತಿ, ಬಯಲಾಟ, ನಾಟಕ  ಕಾರ್ಯಕ್ರಮಗಳು ಇರುತ್ತವೆ. ಬಹು ಸಂಖ್ಯೆಯಲ್ಲಿ ಹಿಂದೂ–ಮುಸ್ಲಿಮರು ಪಾಲ್ಗೊಂಡು ಸಂಭ್ರಮದಿಂದ ಜಾತ್ರೆಗೆ ಮೆರುಗು ತರುತ್ತಾರೆ. ಇಲ್ಲಿ ಜಾತಿ, ಮತ, ಪಂಥ, ಪಂಗಡಗಳ ಸೋಂಕಿಲ್ಲ. ಮೇಲು-ಕೀಳೆಂಬ ಭೇದ-ಭಾವವಿಲ್ಲ. ಭಕ್ತಿ-ಶ್ರದ್ಧೆಯಿಂದ ಒಂದಾಗಿ ಆರಾಧಿಸುತ್ತಾರೆ.

ಹಾಜಿ ಮಸ್ತಾನ್ ಸ್ವಧರ್ಮದ ಬಗ್ಗೆ ಪ್ರೀತಿ ಮತ್ತು ಪರಧರ್ಮಗಳ ಬಗ್ಗೆ ಗೌರವವಿದ್ದ ಇಸ್ಲಾಂ ಧರ್ಮದ ಸೂಫಿ ಸಂತನಾಗಿದ್ದ. ಸಾಧನೆಯ ಬಲದಿಂದ ಸಿದ್ಧ ಪುರುಷನಾಗಿದ್ದ. ‘ಲೋಕವೇ ನನ್ನ ಮನೆ ಮನು ಕುಲವೇ ನನ್ನ ಕುಟುಂಬ’ ಎಂಬ ವಿಶಾಲ ತತ್ವದಿಂದ ಎಲ್ಲರ ಕಲ್ಯಾಣ ವನ್ನೇ ಬಯಸಿದ ಸಂತ ಶ್ರೇಷ್ಠನಾಗಿದ್ದ.

ಇಸ್ಲಾಂ ಧರ್ಮದ ಪಂಚಸೂತ್ರಗಳಲ್ಲಿ ಕೊನೆಯದಾದ ಹಜ್ ಯಾತ್ರೆ ಇಂದಿನ ವೈಜ್ಞಾನಿಕ ಯುಗದಲ್ಲಿ ಸುಲಭವೆನಿಸಿರ ಬಹುದು. ಆದರೆ ಹಿಂದಿನ ಕಾಲದಲ್ಲಿ ಸಾಮಾನ್ಯರಿಗೆ ಅಸಾಧ್ಯವಾದ ಕೆಲಸ. ಅದು ಹಾಜಿ ಮಸ್ತಾನ್ ಅವರಂಥ ಆಧ್ಯಾತ್ಮಿಕ ಸಾಧಕರಿಗೆ ಮಾತ್ರ ಸಾಧ್ಯ ವಾಗುತ್ತಿತ್ತು. ತಮ್ಮ ಯೋಗ ಸಾಧನೆ ಯಿಂದ ಹಜ್ ಯಾತ್ರೆ ಮಾಡಿ ಬಂದ ಕೀರ್ತಿ ಇವರಿಗಿದೆ ಎಂಬುದು ಪ್ರತೀತಿ.

ಬಡಕಲ್ಲ ಸಾಹೇಬರ ಸಮಾಧಿ ಪಕ್ಕದಲ್ಲಿದೆ. ದಿಗಂಬರರಾಗಿದ್ದ ಇವರ ನಿಜನಾಮ ಸಂಗೀನ್ ಶಾ ವಲಿ. ಇವರ ಶಿಷ್ಯ ನೂರಜಿ ಸಾಬ್ ಬಡಕಲ್ಲನಿಂದಾಗಿ ‘ಬಡಕಲ್ಲ ಸಾಹೇಬ’ ಆಗಿದೆ. ಏಳು ನದಿಗಳ ನೀರನ್ನು ಒಂದೇ ದಿನದಲ್ಲಿ ತಂದು ಇಲ್ಲಿ ಚಾವಣಿ ಕಟ್ಟಬೇಕೆಂಬ ಐತಿಹ್ಯವಿದೆ. ಅದಿನ್ನೂ ಕೈಗೂಡಿಲ್ಲ.

ಹಾಜಿಮಸ್ತಾನ್ ದರ್ಗಾ ಕಟ್ಟಿಸಿ ದವರು ಹಿಂದೂಗಳಾದ ಪೀರಶೆಟ್ಟಿ ಮನೆತನದವರು. ಜಾತ್ರೆಯಿಂದ ಪ್ರಥಮ ಗಂಧ (ಸಂದಲ) ಏರಿಸುವ ಗೌರವದ ಸ್ಥಾನ ಅವರಿಗಿದೆ. ಮೊದಲು ಬಡಕಲ್ಲ ಸಾಹೇಬರ ದರ್ಗಾಕ್ಕೆ ಹೋಗಿ ನಂತರ ಹಾಜಿ ಮಸ್ತಾನ ದರ್ಗಾಕ್ಕೆ ಹೋಗು ವುದು ಪರಂಪರೆಯಾಗಿ ಮುಂದು ವರಿದಿದೆ. ಇಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ ಯಾತ್ರಿ ನಿವಾಸಕ್ಕೆ ಚಾಲನೆ ನೀಡಿದ್ದು ಕಾಮಗಾರಿ ಪ್ರಗತಿ ಯಲ್ಲಿದೆ. ಜಾತ್ರೆಗೆ ಬರುವ ಲಕ್ಷಾಂತರ ಜನರಿಗಾಗಿ ದರ್ಗಾದ ಹಿಂಬದಿ ಇರುವ ಕೆರೆಗೆ ಕೃಷ್ಣಾ ನದಿಯಿಂದ ನೀರು ತುಂಬಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.