ADVERTISEMENT

ಮುರಿದು ಬಿದ್ದ ಮದುವೆ

ಮದುವೆ ಮಂಟಪಕ್ಕೆ ಬಾರದ ವರ

​ಪ್ರಜಾವಾಣಿ ವಾರ್ತೆ
Published 6 ಮೇ 2015, 20:33 IST
Last Updated 6 ಮೇ 2015, 20:33 IST

ಅಜ್ಜಂಪುರ: ಮದುವೆ ಮಂಟಪಕ್ಕೆ ವರ ಬಾರದ ಹಿನ್ನೆಲೆಯಲ್ಲಿ ಬುಧವಾರ ಮದುವೆಯೊಂದು ಮುರಿದು ಬಿದ್ದಿದೆ.
ಪಟ್ಟಣದ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ನಡೆಯಬೇಕಿದ್ದ ಪಟ್ಟಣದ ಅನುಸೂಯ, ರೇಣುಕಾ ದಂಪತಿಯ ಡಿಪ್ಲೊಮಾ ಪದವೀಧರ ಕೆ.ಆರ್‌.ಯುವರಾಜ್‌ ಮತ್ತು ದಾವಣಗೆರೆ ಜಿಲ್ಲೆಯ ಕೊಂಡದಹಳ್ಳಿ ನಿವಾಸಿ ಗಂಗಮ್ಮ ದಿವಂಗತ ಲಿಂಗರಾಜು ದಂಪತಿಯ ಎಂಜಿನಿಯರಿಂಗ್‌ ಪದವೀಧರೆ ಎ.ಎಲ್‌.ಮಾನಸ ನಡುವಿನ ವಿವಾಹ ಸ್ಥಗಿತಗೊಂಡಿತು.

ಯುವರಾಜ್‌–ಮಾನಸ ವಿವಾಹ ಸಂಬಂಧ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಆರತಕ್ಷತೆ ನಡೆಯಬೇಕಿತ್ತು. ಮಂಗಳವಾದ್ಯ ತಂಡ ಸಿದ್ದವಾಗಿತ್ತು, ರಾತ್ರಿ ಊಟಕ್ಕೆ ಸಿಹಿತಿಂಡಿ, ಊಟವೂ ತಯಾರಾಗಿತ್ತು.

ತಡ ರಾತ್ರಿಯಾದರೂ ವರ ಬಾರದಿದ್ದುದರಿಂದ ವಧುವಿನ ಕಡೆಯವರು ಆತಂಕಗೊಂಡು, ವರ ಹಾಗೂ ವರನ ಸಂಬಂಧಿಕರಿಗೆ ದೂರವಾಣಿ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ. ಬುಧವಾರ ಬೆಳಿಗ್ಗೆ ಮುಹೂರ್ತದ ಸಮಯವಾದರೂ ಮದುವೆ ಮಂಟಪದ ಕಡೆ ವರ ಸುಳಿಯಲಿಲ್ಲ. ಇದರಿಂದ ಮದುವೆಯ ಕಡೆಯ ಭರವಸೆಯನ್ನೂ ಕೈಬಿಟ್ಟು, ವಿವಾಹವನ್ನು ಸ್ಥಗಿತಗೊಳಿಸಲಾಯಿತು.

ವರನ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾದರೆ ದೂರು ನೀಡುವುದಿಲ್ಲ. ಇಲ್ಲವಾದರೆ ದೂರು ನೀಡಲಾಗುವುದು ಎಂದು ವಧುವಿನ ಸಂಬಂಧಿಕರೊಬ್ಬರು ತಿಳಿಸಿದರು.

ವಧು ಅಥವಾ ವಧುವಿನ ಹತ್ತಿರದ ಸಂಬಂಧಿಕರು ತಮಗಾದ ಅನ್ಯಾಯದ ವಿರುದ್ಧ ದೂರು ನೀಡಿದರೆ, ಪ್ರಕರಣ ದಾಖಲಿಸಿಕೊಂಡು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಟ್ಟಣ ಠಾಣಾಧಿಕಾರಿ ಲಿಂಗರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.