ADVERTISEMENT

ಸದಾಶಿವ ಆಯೋಗ ವರದಿಗೆ ವಿರೋಧ

*ಕೇಂದ್ರಕ್ಕೆ ಶಿಫಾರಸು ಮಾಡಿದರೆ ಹೋರಾಟ: ಎಚ್ಚರಿಕೆ *ವೇತನ ತಾರತಮ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 10:13 IST
Last Updated 10 ಜನವರಿ 2017, 10:13 IST
ಮೈಸೂರು: ಪರಿಶಿಷ್ಟ ಪಂಗಡದಲ್ಲಿ ಒಳಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸದಾಶಿವ ಆಯೋಗ ನೀಡಿದ ವರದಿಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿ ಶಿವಯೋಗಿ ಸಿದ್ಧರಾಮೇಶ್ವರ ಭೋವಿ ಹಿರತಕ್ಷಣಾ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಯ ಎದುರು ಕಲ್ಲು ಒಡೆಯುವ ಮೂಲಕ ಸೋಮವಾರ ವಿನೂತನವಾಗಿ ಪ್ರತಿಭಟನೆ ನಡೆಸಿದರು.
 
ಸದಾಶಿವ ಆಯೋಗದ ವರದಿ ವೈಜ್ಞಾನಿಕವಾಗಿಲ್ಲ. ಇದರ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ತರಾತುರಿಯಲ್ಲಿ ನಿರ್ಧಾರ ಕೈಗೊಂಡು ಕೇಂದ್ರಕ್ಕೆ ಶಿಫಾರಸು ಮಾಡಬಾರದು. ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿ ಗಣತಿಯ ವರದಿ ಬರುವವರೆಗೂ ಕಾಯಬೇಕು. ಒಂದು ವೇಳೆ ಸರ್ಕಾರ ಪೂರಕವಾಗಿ ಸ್ಪಂದಿಸದೆ ಇದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುತ್ತದೆ. ಲಂಬಾಣಿ, ಕೊರಮ, ಕೊರಚ ಹಾಗೂ ಬಲಗೈ ಸಮುದಾಯಗಳೆಲ್ಲ ಒಟ್ಟಿಗೆ ಸೇರಿ ಸಮಾವೇಶ ಮಾಡುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ರಾಜ್ಯದಲ್ಲಿ ಭೋವಿ ಸಮುದಾಯದ ಜನಸಂಖ್ಯೆ 50 ಲಕ್ಷಕ್ಕಿಂತಲೂ ಅಧಿಕವಾಗಿದೆ. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಜನಾಂಗ ತೀರಾ ಹಿಂದುಳಿದಿದೆ. ಶತಮಾನಗಳಿಂದ ಸಮುದಾಯ ಶೋಷಣೆಗೆ ಒಳಗಾಗಿದ್ದು, ಮೀಸಲಾತಿಯಿಂದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ. ಒಳಮೀಸಲಾತಿಯ ನೆಪದಲ್ಲಿ ಭೋವಿಗಳಿಗೆ ಸಿಕ್ಕ ಸೌಲಭ್ಯವನ್ನು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ. ಇದರಿಂದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಆಶಯ ಮಣ್ಣು ಪಾಲಾಗಲಿದೆ ಎಂದು ಆರೋಪಿಸಿದರು.
 
ಸಂಘದ ಅಧ್ಯಕ್ಷ ಜಿ.ನಾಗರಾಜು, ಉಪಾಧ್ಯಕ್ಷ ಜಿ.ವಿ.ಸೀತಾರಾಮು, ಕಾರ್ಯದರ್ಶಿ ಪಿ.ಮಲ್ಲಯ್ಯ ಇದ್ದರು.
 
ವೇತನ ತಾರತಮ್ಯ: ಆರೋಪ: ಪೌರ ಕಾರ್ಮಿಕರ ಬೇಡಿಕೆ ಈಡೇರಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯತೆ ತೋರುತ್ತಿದ್ದಾರೆ ಎಂದು ಆರೋಪಿಸಿ ಆದಿ ದ್ರಾವಿಡ (ಪೌರಕಾರ್ಮಿಕ) ಯುವಕರ ಅಭಿವೃದ್ಧಿ ಮಹಾಸಂಘದ ವತಿಯಿಂದ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಯಿತು.
 
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರಿಗೆ ಕನಿಷ್ಠ ವೇತನ ನೀಡುತ್ತಿಲ್ಲ. 30ರಿಂದ 40 ವರ್ಷ ಕೆಲಸ ಮಾಡಿದರೂ ಪಿಂಚಣಿ ಸೌಲಭ್ಯವಿಲ್ಲ. 
 
ಕೆಲಸದ ಸಂದರ್ಭದಲ್ಲಿ ಮೃತಪಟ್ಟರೆ 16 ತಿಂಗಳ ವೇತನ ನೀಡಬೇಕು ಎಂಬ ನಿಯಮವನ್ನು ಈವರೆಗೂ ಪಾಲನೆ ಮಾಡಿಲ್ಲ.  ಈ ಹಣ ನೀಡದೆ ಅಧಿಕಾರಿಗಳು ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
 
ಪೌರ ಕಾರ್ಮಿಕರ ವಾಸಕ್ಕೆ ಸೂಕ್ತ ಮನೆ ಇಲ್ಲ. ಕನಿಷ್ಠ ಸೌಲಭ್ಯವೂ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಈ ಹುದ್ದೆಗಳಿಗೆ ಅನುಮೋದನೆ ಪಡೆಯದೆ ಕಾಲಹರಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು. 
 
ಕಾರ್ಮಿಕ ಇಲಾಖೆಯ ಅದೇಶವನ್ನು ಉಲ್ಲಂಘಿಸಿ ವೇತನ ತಾರತಮ್ಯ ಮಾಡಲಾಗುತ್ತಿದೆ ಎಂದು ಪ್ರತಿಭಟನಾ ಕಾರರು ದೂರಿದರು.
ಸಂಘದ ಗೌರವ ಅಧ್ಯಕ್ಷ ಸಿ.ಎಂ.ರಾಮಯ್ಯ, ಅಧ್ಯಕ್ಷ ಆರ್‌.ಶಿವಣ್ಣ, ಸಲಹೆಗಾರ ಸಣ್ಣಬೋರ, ನಂಜನಗೂಡು ನಗರಸಭೆ ಸದಸ್ಯ ಡಿ.ಆರ್‌.ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.