ADVERTISEMENT

‘ಸಾಲಕ್ಕೆ ಸಾವು ಪರಿಹಾರವಲ್ಲ’

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 8:23 IST
Last Updated 27 ಅಕ್ಟೋಬರ್ 2017, 8:23 IST

ಹನುಮಸಾಗರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು, ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿವೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಜೀರಸಾಬ ಮೂಲಿಮನಿ ಆರೋಪಿಸಿದರು.

ಇಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಈಚೆಗೆ ಹಮ್ಮಿಕೊಳ್ಳಲಾಗಿದ್ದ ‘ರೈತರ ಸಾಲ ಮನ್ನಾಕ್ಕೆ ಅರ್ಜಿ ಸಲ್ಲಿಸುವ ಅಭಿಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಸಾಲಕ್ಕೆ ಸಾವು ಪರಿಹಾರವಲ್ಲ. ರೈತರು ಎದೆಗುಂದುವ ಅಗತ್ಯ ಇಲ್ಲ’ ಎಂದು ಹೇಳಿದರು.

‘ರೈತರ ಜಮೀನಿಗೆ ನೀರು, ಬೆಳೆಗಳಿಗೆ ನ್ಯಾಯಯುತವಾದ ಬೆಲೆ, ಸರ್ಕಾರಿ ನೌಕರರಿಗೆ ಸಮಾನವಾಗಿ ರೈತರ ವಾರ್ಷಿಕ ಆದಾಯ ಹೆಚ್ಚಳ ಆಗುವವರೆಗೆ ರೈತರ ಸಂಪೂರ್ಣ ಸಾಲವನ್ನು ಸರ್ಕಾರವೇ ಭರಿಸಬೇಕು’ ಎಂದು ಅವರು ಆಗ್ರಹಿಸಿದರು.

ADVERTISEMENT

ಅ.27 ರಂದು ಕೊಪ್ಪಳದ ಬಾಲಕಿಯರ ಸರ್ಕಾರಿ ಕಾಲೇಜು ಮೈದಾನದಲ್ಲಿ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಚಿತ್ರದುರ್ಗದ ಮಲ್ಲೂರಹಳ್ಳಿಯ ಕಲಾತಂಡದವರು ಬೀದಿ ನಾಟಕ ಪ್ರದರ್ಶಿಸುವ ಮೂಲಕ ಆತ್ಮಹತ್ಯೆ ಮಾಡಿಕೊಳ್ಳದಂತೆ ಜಾಗೃತಿ ಮೂಡಿಸಿದರು.
ರೈತ ಸಂಘ ಹನುಮಸಾಗರ ಘಟಕದ ಅಧ್ಯಕ್ಷ ರಾಜೇಸಾಬ ಆಲೂರ, ವೀರಪ್ಪ ಜೀಗೇರಿ, ದುಂಡಪ್ಪ ಬಿಜಾಪೂರ, ಯಮನೂರಪ್ಪ ಮಡಿವಾಳರ, ಕಲಾವಿದರಾದ ಡಿ.ರಾಜಣ್ಣ, ಎಂ.ಚಂದ್ರಯ್ಯ, ಎಚ್.ಮಲ್ಲೇಶಪ್ಪ, ಗುರುಮೂರ್ತಿ, ಆರ್.ಬಸಪ್ಪ, ಸಿ.ಮಂಜುಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.