ADVERTISEMENT

ಸಿಡಿ ಉತ್ಸವ, ದೊಡ್ಡಮ್ಮ ರಥೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 5:28 IST
Last Updated 15 ಏಪ್ರಿಲ್ 2017, 5:28 IST
ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಶುಕ್ರವಾರ ನಡೆದ ಸಿಡಿಯಮ್ಮ ಜಾತ್ರೆಯಲ್ಲಿ ಸಿಡಿ ಉತ್ಸವ ವೀಕ್ಷಿಸಲು ಸೇರಿದ್ದ ಜನಸ್ತೋಮ (ಎಡಚಿತ್ರ). ಪಿರಿಯಾಪಟ್ಟಣ ತಾಲ್ಲೂಕಿನ ರಾವಂದೂರಿನಲ್ಲಿ ಶುಕ್ರವಾರ ದೊಡ್ಡಮ್ಮತಾಯಿ ಜಾತ್ರೆ ಹಾಗೂ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು
ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಶುಕ್ರವಾರ ನಡೆದ ಸಿಡಿಯಮ್ಮ ಜಾತ್ರೆಯಲ್ಲಿ ಸಿಡಿ ಉತ್ಸವ ವೀಕ್ಷಿಸಲು ಸೇರಿದ್ದ ಜನಸ್ತೋಮ (ಎಡಚಿತ್ರ). ಪಿರಿಯಾಪಟ್ಟಣ ತಾಲ್ಲೂಕಿನ ರಾವಂದೂರಿನಲ್ಲಿ ಶುಕ್ರವಾರ ದೊಡ್ಡಮ್ಮತಾಯಿ ಜಾತ್ರೆ ಹಾಗೂ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು   

ಪಿರಿಯಾಪಟ್ಟಣ: ತಾಲ್ಲೂಕಿನ ರಾವಂದೂರಿನಲ್ಲಿ ಶುಕ್ರವಾರ ಗ್ರಾಮದೇವತೆಯಾದ ದೊಡ್ಡಮ್ಮತಾಯಿ ರಥೋತ್ಸವ ಹಾಗೂ ಜಾತ್ರೆ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ಸಮೀಪದ ಎಸ್.ಕೊಪ್ಪಲಿನ ತೋಟವೊಂದಕ್ಕೆ ದೊಡ್ಡಮ್ಮತಾಯಿ ಮೂರ್ತಿ ಕೊಂಡೊಯ್ದು ಧಾರ್ಮಿಕ ವಿಧಿ– ವಿಧಾನಗಳಿಂದ ಸಿಂಗರಿಸಲಾಯಿತು. ಪ್ರತಿಬಾರಿ ಹೊಸದಾಗಿ ತೆಗೆಯಲಾದ ಬಾವಿ ನೀರಿನಿಂದ ದೇವಿ ವಿಗ್ರಹದ ಮಡಿ ಮಾಡಿಲಾಗುವುದು. ಈ ಬಾರಿಯೂ ಹೊಸದಾಗಿ ಬಾವಿ ತೆಗೆದು, ಅದರಲ್ಲಿ ಬಂದ ನೀರಿನಿಂದ ಮಡಿ ಮಾಡಲಾಯಿತು.

ನಂತರ ಹೂವು, ಹೊಂಬಾಳೆ ಯಿಂದ ಸಿಂಗರಿಸಿ ಹೋಮ ನೆರವೇರಿಸ ಲಾಯಿತು. ನಂತರ ಮರದಿಂದ ನಿರ್ಮಿಸಿದ್ದ ಕುದುರೆಗಳ ಮೇಲೆ ಕೂರಿಸಿ ಜಾತ್ರೆ ಆವರಣಕ್ಕೆ ಕರೆತರಲಾಯಿತು.ಭಕ್ತರಿಗೆ ದೇವಾಲಯದ ಸಮಿತಿ ಅನ್ನ ದಾಸೋಹ ಏರ್ಪಡಿಸಿತ್ತು. ಕೆಪಿಸಿಸಿ ಸದಸ್ಯ ಡಿ.ಟಿ.ಸ್ವಾಮಿ, ಬಿಜೆಪಿ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಆರ್.ಟಿ. ಸತೀಶ್, ಆರ್.ಎಸ್.ಮಹೇಶ್, ಗ್ರಾ.ಪಂ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ಸುರೇಶ್, ಆರ್.ವಿ.ಶಿವಮೂರ್ತಿ, ಯಜಮಾನರು, ಗ್ರಾಮಸ್ಥರು ಹಾಜರಿದ್ದರು.

10 ಗ್ರಾಮ ಭಾಗಿ

ADVERTISEMENT

ಹುಣಸೂರು: ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಿಡಿ ಉತ್ಸವ ನಡೆಯಿತು. 10 ಗ್ರಾಮಗಳ ಮುಖಂಡರ ನೇತೃತ್ವದಲ್ಲಿ ಜಾತ್ರೆ ನೆರವೇರಿತು.ಲಕ್ಷ್ಮಣತೀರ್ಥ ನದಿಯಲ್ಲಿ ದೇವರಿಗೆ ಪೂಜೆ ಸಲ್ಲಿಸಿ, ಮೆರವಣಿಗೆಯಲ್ಲಿ ವೆಂಕಟರಮಣ ದೇವಸ್ಥಾನದವರೆಗೆ ದೇವರಮೂರ್ತಿ ಹೊತ್ತು ತಂದು ಪೂಜೆ ಅರ್ಪಿಸಲಾಯಿತು. ನಂತರ 10 ಗ್ರಾಮಗಳಲ್ಲಿನ ಎಲ್ಲ ಸಮುದಾಯದ ವರಿಂದ ಸಂಗ್ರಹಿಸಿದ್ದ ಪಡಿತರದಿಂದ ಸಿದ್ಧಪಡಿಸಿದ್ದ ಎಡೆ ಅರ್ಪಿಸಲಾಯಿತು.

ಪುರೋಹಿತ ಮನೆಯವರು ಸಿಡಿ ತೇರಿಗೆ ಎಡೆ ಅರ್ಪಿಸಿದರು. ಬಳಿಕ ವಿವಿಧ ದೇವರುಗಳು ಸಿಡಿ ತೇರು ಏರಿ ಒಂದೊಂದು ಸುತ್ತು ತಿರುಗಿಸಲಾಯಿತು.ಸಿಡಿ ತೇರು ತಿರುಗುತ್ತಿದ್ದಂತೆ ಹರಕೆ ಹೊತ್ತ ಭಕ್ತರು ಕೋಳಿ, ಬಾಳೆಹಣ್ಣು, ಜವನ ಎಸೆದರು. ಅಲ್ಲದೆ, ಸಿಡಿಯ ಮ್ಮಳಿಗೆ ಕೋಳಿ ಮತ್ತು ಕುರಿ ಬಲಿ ಕೊಟ್ಟರು. ಸುತ್ತಲಿನ 10 ಗ್ರಾಮದವರು ಹಾಗೂ ಹೊರ ಊರುಗಳಿಂದ ನೆಂಟರು ಬಂದಿದ್ದರು. ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.ಸಂಸದ ಪ್ರತಾಪಸಿಂಹ, ಶಾಸಕ ಮಂಜುನಾಥ್‌, ತಾ.ಪಂ ಅಧ್ಯಕ್ಷೆ ಪದ್ಮಮ್ಮ, ಗ್ರಾ.ಪಂ ಅಧ್ಯಕ್ಷೆ ಗಾಯತ್ರಿ, ಜಿ.ಪಂ ಸದಸ್ಯೆರಾದ ಸಾವಿತ್ರಮ್ಮ, ಡಾ.ಪುಷ್ಪಾ ಅಮರನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.