ADVERTISEMENT

ಹೊಸನಗರ: ನಾಗರಹಾವು ನುಂಗಿದ ಕಾಳಿಂಗ ಸರ್ಪ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 6:37 IST
Last Updated 15 ಫೆಬ್ರುವರಿ 2017, 6:37 IST

ಹೊಸನಗರ:  ನಾಗರಹಾವನ್ನು ಬೆನ್ನಟ್ಟಿದ ಕಾಳಿಂಗ ಸರ್ಪವೊಂದು  ಅದನ್ನು ಹಿಡಿದು ನುಂಗಿದ ಘಟನೆ ತಾಲ್ಲೂಕಿನ ಮುಂಡಳ್ಳಿ ಗ್ರಾಮಸ್ಥರ ಎದುರೇ ನಡೆದಿರುವುದು ತಡವಾಗಿ ವರದಿಯಾಗಿದೆ.

ತಾಲ್ಲೂಕಿನ ನಗರ ಸಮೀಪದ ಮುಂಡಳ್ಳಿ ಗ್ರಾಮದಲ್ಲಿ ಭಾನುವಾರ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪಕ್ಕೆ ಬೆದರಿ ನಾಗರಹಾವು ಹುತ್ತ ಸೇರಿಕೊಂಡಿತ್ತು. ಕಾಳಿಂಗ ಹುತ್ತದೊಳಕ್ಕೆ ಹೊಕ್ಕು ನಾಗರಹಾವನ್ನು ಹೊರಗೆಳೆದು ನುಂಗಿಹಾಕಿದೆ.

ಸುತ್ತಮುತ್ತಲೂ ನೂರಾರು ಜನ ಸೇರಿದ್ದರೂ ಯಾವುದನ್ನೂ ಲೆಕ್ಕಿಸದ ಕಾಳಿಂಗ ಕೇವಲ 10 ನಿಮಿಷಗಳಲ್ಲಿ ನಾಗರಹಾವನ್ನು ಗುಳುಂ ಮಾಡಿತು. ಹಾವೆಂದರೇ ಭಯ ಬೀಳುವ ಮಂದಿ ಈ ಅಪರೂಪದ ದೃಶ್ಯವನ್ನು ಭಯಮಿಶ್ರಿತರಾಗಿಯೇ ನೋಡಿದರು.

ADVERTISEMENT

ಮುಂಡಳ್ಳಿ ಗ್ರಾಮ ಮನೆಗಳ ಪಕ್ಕ ಕಾಳಿಂಗ, ನಾಗರಹಾವನ್ನು ಬೆನ್ನಟ್ಟು ತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಆಗುಂಬೆ ಮಳೆಕಾಡು ತಜ್ಞ ಅಜಯ್ ಗಿರಿ ಅವರಿಗೆ ಸುದ್ದಿ ಮುಟ್ಟಿಸಿದರು. ಆದರೆ ಅವರು ಸ್ಥಳಕ್ಕೆ ಬರುವ ಹೊತ್ತಿಗೆ ಕಾಳಿಂಗ ಅರ್ಧದಷ್ಟು ಹಾವನ್ನು ನುಂಗಿಯಾಗಿತ್ತು. ಆ ಸಂದರ್ಭದಲ್ಲಿ ಯಾವುದೇ ಕಾರ್ಯಾಚರಣೆಗೆ ಅಜಯ್ ಗಿರಿ ಮುಂದಾಗಲಿಲ್ಲ. ಕಾಳಿಂಗ ಸರ್ಪ,  ಹಾವನ್ನು ಆಹುತಿ ತೆಗೆದುಕೊಂಡ ಮೇಲೆ ನಿಧಾನವಾಗಿ ಕಾರ್ಯಾಚರಣೆ ನಡೆಸಿದರು. ನಂತರ ಅದನ್ನು ಹಿಡಿದು ಸಮೀಪದ ಕಾಡಿಗೆ ಬಿಟ್ಟರು.

ನಾಗದೋಷದ ಭಯ ಬೇಡ:  ನಾಗರ ಹಾವನ್ನು ಕಾಳಿಂಗ ಸರ್ಪ ನುಂಗಿದ ದೃಶ್ಯ ನೋಡಿದ ಹಾಗೂ ಸುದ್ದಿ ಮುಟ್ಟಿಸಿದ ಗ್ರಾಮಸ್ಥರಿಗೆ ‘ನಾಗ ದೋಷ’ ಬರುತ್ತದೆ ಎಂಬ ಚಿಂತೆ ಕಾಡತೊಡಗಿತು.

ಈ ವೇಳೆ, ಅಜಯ್ ಗಿರಿ ಗ್ರಾಮಸ್ಥರಿಗೆ, ಹಾವಿನ ಆಹಾರ ಸರಪಳಿ ಕುರಿತು ಉಪನ್ಯಾಸ ನೀಡಿದರು. ಇನ್ನೊಂದು ಹಾವುಗಳನ್ನೇ ತಿಂದು ಜೀವಿಸುವ ಕಾಳಿಂಗ ಸರ್ಪದ ಪಾಲಿಗೆ ‘ನಾಗರ ಹಾವು’ ಕೂಡ ಒಂದು ಬಗೆಯ ಆಹಾರ ಅಷ್ಟೆ. ನಾಗದೋಷದ ಬಗ್ಗೆ ಭಯ ಬೇಡ ಎಂದು ವಿಶ್ವಾಸ ತುಂಬಿದರು. ಅಳಿವಿನ ಅಂಚಿನಲ್ಲಿರುವ ಮಳೆ ಕಾಡಿನ ಕಾಳಿಂಗ ಸರ್ಪವನ್ನು ಸಂರಕ್ಷಿಸುವ  ಜಾಗೃತಿ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.