ADVERTISEMENT

‘ಪಕ್ಷಕ್ಕಿಂತ ಕ್ಷೇತ್ರದ ಅಭಿವೃದ್ಧಿ ಮುಖ್ಯ’

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 6:54 IST
Last Updated 6 ಫೆಬ್ರುವರಿ 2018, 6:54 IST

ಬಿಡದಿ (ರಾಮನಗರ): ಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಸೇರಿದ್ದೇನೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು. ಇಲ್ಲಿನ ಅವರೆಗೆರೆ ಗ್ರಾಮದಲ್ಲಿ ಸೋಮವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಜನರ ಪ್ರಗತಿ ಹಾಗೂ ನಾಡಿನ ಅಭಿವೃದ್ಧಿ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಹೀಗಾಗಿ ಮಾಗಡಿ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಸಲುವಾಗಿ ಕಾಂಗ್ರೆಸ್ ಸೇರಿದ್ದೇನೆ’ ಎಂದು ತಿಳಿಸಿದರು.

"ಜೆಡಿಎಸ್‌ನಲ್ಲಿ ಇದ್ದಷ್ಟು ದಿನಗಳ ಕಾಲವೂ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಕೆಲಸ ಮಾಡಿದೆ. ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೆ ಕೆಲಸ ಕಾರ್ಯ ಮಾಡಿಸುವುದು ಎಷ್ಟು ಕಷ್ಟ ಎಂಬುದರ ಅರಿವು ಇದೆ. ನನಗೆ ಪಕ್ಷಕ್ಕಿಂತ ಕ್ಷೇತ್ರದ ಅಭಿವೃದ್ಧಿ ಮುಖ್ಯ. ಕಾಂಗ್ರೆಸ್ ಪಕ್ಷದ ಧ್ಯೇಯವೂ ಅಭಿವೃದ್ಧಿಯೇ ಆಗಿದೆ. ಈ ಕಾರಣದಿಂದಾಗಿ ಕಾಂಗ್ರೆಸ್ ಸೇರುವ ನಿರ್ಧಾರ ಕೈಗೊಂಡ ಬಳಿಕ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ' ಎಂದರು.

ADVERTISEMENT

‘ಮಾಗಡಿ ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಆರೋಗ್ಯ, ವಿದ್ಯುತ್ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಿ ಅಭಿವೃದ್ಧಿಪಡಿಸಬೇಕು ಎಂಬುದೇ ನನ್ನ ಗುರಿ. ಇದು ಕಾಂಗ್ರೆಸ್ ಸೇರ್ಪಡೆಯಿಂದ ಸಾಕಾರಗೊಳ್ಳಲಿದ್ದು, ಕ್ಷೇತ್ರದ ಜನರ ಆಶೀರ್ವಾದವೂ ಅಗತ್ಯವಿದೆ’ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬಿಡದಿ ಹೋಬಳಿ ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆತ್ತಂಗೆರೆ ಗ್ರಾಮದಲ್ಲಿ ಬಿಎಂಐಸಿಪಿಐ ಯೋಜನೆಯಡಿ ₹70 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ, ಮುತ್ತರಾಯನಪುರ ಗ್ರಾಮದಲ್ಲಿ ₹12 ಲಕ್ಷ, ಮುತ್ತರಾಯನಪಾಳ್ಯದಲ್ಲಿ ₹8ಲಕ್ಷ, ಕೆ.ಕರೇನಹಳ್ಳಿ ಗ್ರಾಮದಲ್ಲಿ ₹40 ಲಕ್ಷ ವೆಚ್ಚದ ಕಾಂಕ್ರೀಟ್‌ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಭೂಮಿ ಪೂಜೆ ಮಾಡಲಾಯಿತು.

ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಜ್ಜಾಲ ಗ್ರಾಮದಲ್ಲಿ ₹1ಕೋಟಿ ರೂಪಾಯಿ ವೆಚ್ಚದ ಹೆಜ್ಜಾಲ-ದೊಡ್ಡೇರಿ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಬಿಡದಿ ಪುರಸಭೆ ವ್ಯಾಪ್ತಿಯ ಅವರಗೆರೆ ಗ್ರಾಮದಲ್ಲಿ ₹80 ಲಕ್ಷ ವೆಚ್ಚದ ಬಿಡದಿ- ಬನ್ನಿಕುಪ್ಪೆ-, ಕೊಳ್ಳಗನಹಳ್ಳಿ ಮಾರ್ಗದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.

ತಾಲ್ಲೂಕು ಪಂಚಾಯಿತಿ ಸದಸ್ಯ ಗಾಣಕಲ್‌ ನಟರಾಜ್‌, ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ, ಪುರಸಭೆ ಸದಸ್ಯ ಪುಟ್ಟಮಾದಯ್ಯ, ಎಪಿಎಂಸಿ ನಿರ್ದೇಶಕ ವಾಜರಹಳ್ಳಿ ರಮೇಶ್, ಗ್ರಾಮ ಪಂಚಾಯಿತಿ ಸದಸ್ಯ ಚಿಕ್ಕೇಗೌಡ, ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಯು. ನರಸಿಂಹಯ್ಯ, ಮುಖಂಡರಾದ ಎ.ಎಸ್. ರಾಜಣ್ಣ, ಹೊಸೂರು ರಾಜಣ್ಣ, ಸುರೇಶ್‌ಗೌಡ, ಅಬ್ಬನಕುಪ್ಪೆ ರಮೇಶ್, ಎಂಜಿನಿಯರ್ ಮಂಜೇಶ್‌ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.