ADVERTISEMENT

ಅಣ್ಣನ ನಾಡಿಗೆ ಮೆರಗು ಕೊಟ್ಟ ಶರಣ ಸಾಹಿತ್ಯ ಭಂಡಾರ

ಶ್ರೀಧರ ಗೌಡರ
Published 27 ನವೆಂಬರ್ 2017, 6:03 IST
Last Updated 27 ನವೆಂಬರ್ 2017, 6:03 IST
ಶರಣ ಸಾಹಿತ್ಯ ಭಂಡಾರ ಮತ್ತು ಸಂಶೋಧನಾ ಕೇಂದ್ರ
ಶರಣ ಸಾಹಿತ್ಯ ಭಂಡಾರ ಮತ್ತು ಸಂಶೋಧನಾ ಕೇಂದ್ರ   

ಕೂಡಲಸಂಗಮ: ಬಸವ ನೆನಹಿನ ಈ ತಾಣ, ಸೃಷ್ಟಿ ಸಿರಿಯ ಪರಿಸರದ ಮಧ್ಯದಲ್ಲಿ ನೆಲೆಸಿದೆ. ಈ ಗ್ರಂಥಾಲಯದಲ್ಲಿ ವಿವಿಧ ಭಾಷೆಯ ಹೊತ್ತಿಗೆಗಳು, ಅತ್ಯಮೂಲ್ಯ ವಿಶ್ವಕೋಶಗಳು, ಜ್ಞಾನದಾಹಿಗಳಿಗಿದು ತೀರ್ಥ, ಸಂಶೋಧಕರಿಗಿದು ಛತ್ರ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಕೂಡಲಸಂಗಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಂಥಾಲಯದ ಕುರಿತು ಹೇಳಿರುವುದು ವಾಸ್ತವ ಸತ್ಯ.

1 ನವೆಂಬರ್ 2001ರಿಂದ ಕಾರ್ಯ ಆರಂಭಿಸಿರುವ ಈ ಗ್ರಂಥಾಲಯ ವಿಶಿಷ್ಟವಾಗಿದೆ. ಜಗತ್ತಿನ ಎಲ್ಲ ಧರ್ಮ ಗ್ರಂಥಗಳು, ನೀತಿ ಶಾಸ್ತ್ರ, ವೀರಶೈವ ಧರ್ಮ, ಲಿಂಗಾಯತ ಧರ್ಮ, ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಅಪಾರ ಜ್ಞಾನ ಭಂಡಾರ ಹೊಂದಿದೆ.

ಸದ್ಯ ಇಲ್ಲಿ ₹ 25 ಲಕ್ಷ ವೆಚ್ಚದಲ್ಲಿ ಖರೀದಿಸಿದ 12 ಸಾವಿರ ಪುಸ್ತಕಗಳು, ದಾನ ರೂಪದಲ್ಲಿ ಕೊಟ್ಟ 3 ಸಾವಿರ ಪುಸ್ತಕ ಇವೆ. ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದ 30 ನಿಯತಕಾಲಿಕೆಗಳು, ದಿನ ಪತ್ರಿಕೆಗಳು ಇಲ್ಲಿ ಲಭ್ಯ.

ADVERTISEMENT

ಈ ಗ್ರಂಥಾಲಯ ವರ್ಷವಿಡೀ ಕಾರ್ಯನಿರ್ವಹಿಸಲಿದೆ. ಭಾನುವಾರ ಮತ್ತು ರಜೆ ದಿನಗಳಲ್ಲಿಯೂ ತೆರೆದಿರುತ್ತದೆ. ಸಾಮಾನ್ಯ ಓದುಗರಿಂದ ವಿದ್ವಾಂಸರು ಹಾಗೂ ಸಂಶೋಧಕರಿಗೆ ಸದಾಕಾಲವೂ ಸೇವೆ ಸಲ್ಲಿಸುತ್ತಲಿದೆ. ಉಚಿತ ಸೇವೆ, ಯಾವುದೇ ಸದಸ್ಯತ್ವ ಶುಲ್ಕ ಇರುವುದಿಲ್ಲ. ಗ್ರಂಥಾಲಯಕ್ಕೆ ಎಲ್ಲ ತರಹದ ಓದುಗರಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ.

ಈ ಕಟ್ಟಡ ಯೂರೋಪಿಯನ್ ಗಾಥಿಕ್ ವಾಸ್ತುಶೈಲಿಯಲ್ಲಿ ನಿರ್ಮಾಣವಾಗಿದೆ. ಕಮಾನುಗಳ ಮಾದರಿಯಲ್ಲಿ ರೂಪುಗೊಂಡ ಈ ಕಟ್ಟಡ 35 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದ್ದು, ₹ 88 ಲಕ್ಷ ವೆಚ್ಚವಾಗಿದೆ. ನಿತ್ಯ ಈ ಗ್ರಂಥಾಲಯಕ್ಕೆ 300 ಓದುಗರು ಬರುತ್ತಾರೆ. ಸಂಶೋಧನಾ ವಿದ್ಯಾರ್ಥಿಗಳು ನಿರಂತರವಾಗಿ ಈ ಕೇಂದ್ರಕ್ಕೆ ಬರುವರು.

ಎಂ.ವಿ.ದಾನಪ್ಪನವರ ಮಾರ್ಗದರ್ಶನದಲ್ಲಿ ಈ ಗ್ರಂಥಾಲಯದ ರಾಜ್ಯ ಮಾತ್ರವಲ್ಲದೇ ದೇಶದ ಮೂಲೆ ಮೂಲೆಗೂ ಪರಿಚಿತವಾಗಿದೆ. ಕರ್ನಾಟಕ ವಿಶ್ವವಿದ್ಯಾಲಯ, ಕಲಬುರ್ಗಿ ವಿಶ್ವವಿದ್ಯಾಲಯದಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯ ನಂತರ ಡಾ.ಎಸ್.ಎಂ.ಜಾಮದಾರರ ಮಾರ್ಗದರ್ಶನದಲ್ಲಿ ದಾನಪ್ಪನವರ ಸೇವಾ ಮನೋಭಾವದಿಂದ ಈ ಶರಣ ಸಾಹಿತ್ಯ ಭಂಡಾರ ಸಂಶೋಧನಾ ಕೇಂದ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

ಜೊತೆಗೆ ಬಸವನ ಬಾಗೇವಾಡಿಯ ಬಸವ ಸ್ಮಾರಕ ಗ್ರಂಥಾಲಯ, ಕಾಗಿನೆಲೆಯ ಕನಕ ಗ್ರಂಥಾಲಯ, ಬಸವ ಕಲ್ಯಾಣದ ಗ್ರಂಥಾಲಯ, ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಗ್ರಂಥಾಲಯ ಆರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.