ADVERTISEMENT

ಅನುಮತಿ ರದ್ದತಿಗೆ ಕಾಶಪ್ಪನವರ ಒತ್ತಾಯ

ನಿಯಮಾವಳಿ ಉಲ್ಲಂಘಿಸಿ ಗಣಿಗಾರಿಕೆ ನಡೆಸಿರುವ ಆರೋಪ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 5:42 IST
Last Updated 17 ಮಾರ್ಚ್ 2018, 5:42 IST
ಇಳಕಲ್‌ ಸಮೀಪದ ಹನಮನಾಳ ಎಸ್‌ಟಿ ಗ್ರಾಮಕ್ಕೆ ಹೊಂದಿಕೊಂಡಿರುವ ಗ್ರಾನೈಟ್‌ ಶಿಲೆಯ ಕ್ವಾರಿಗೆ ಭೇಟಿ ನೀಡಿದ ಶಾಸಕ ವಿಜಯಾನಂದ ಕಾಶಪ್ಪನವರ ಗಣಿಗಾರಿಕೆಗೆ ನೀಡಿದ ಅನುಮತಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿದರು.
ಇಳಕಲ್‌ ಸಮೀಪದ ಹನಮನಾಳ ಎಸ್‌ಟಿ ಗ್ರಾಮಕ್ಕೆ ಹೊಂದಿಕೊಂಡಿರುವ ಗ್ರಾನೈಟ್‌ ಶಿಲೆಯ ಕ್ವಾರಿಗೆ ಭೇಟಿ ನೀಡಿದ ಶಾಸಕ ವಿಜಯಾನಂದ ಕಾಶಪ್ಪನವರ ಗಣಿಗಾರಿಕೆಗೆ ನೀಡಿದ ಅನುಮತಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿದರು.   

ಇಳಕಲ್ : ‘ಸಮೀಪದ ಹನಮನಾಳ ಎಸ್‌ಟಿ ಗ್ರಾಮದ ಬಳಿ ಗ್ರಾನೈಟ್ ಶಿಲೆಯ ಗಣಿಗಾರಿಕೆ ಮಾಡಲು ಗೊಮ್ಮಟೇಶ್ವರ ಹಾಗೂ ವೈ.ಎಸ್. ಹೂಲಗೇರಿ ಕಂಪೆನಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ನಿಯಮಬಾಹಿರವಾಗಿ ಅನುಮತಿ ನೀಡಿದ್ದಾರೆ’ ಎಂದು ಆರೋಪಿಸಿದ ಶಾಸಕ ವಿಜಯಾನಂದ ಕಾಶಪ್ಪನವರ, ಕೂಡಲೇ ಗಣಿಗಾರಿಕೆಗೆ ನೀಡಿದ ಅನುಮತಿ ರದ್ದುಪಡಿಸಬೇಕು’ ಎಂದು ಒತ್ತಾಯಿಸಿದರು.

ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಶುಕ್ರವಾರ ಗಣಿಗಾರಿಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಗಣಿಗಾರಿಕೆ ಅನುಮತಿ ನೀಡುವಾಗ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಬೇಕಿತ್ತು. ಆದರೆ ಗ್ರಾಮದಿಂದ ಕೇವಲ 50 ಮೀಟರ್, ಹೆದ್ದಾರಿಯಿಂದ ಕೇವಲ 100 ಮೀಟರ್ ಅಂತರದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಅಧಿಕಾರಿಗಳು ನಿಯಮಾವಳಿಗಳನ್ನು ಗಾಳಿಗೆ ತೂರಿ, ಹಣ ಪಡೆದು ಅನುಮತಿ ನೀಡಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಡ್ರಿಲ್ಲಿಂಗ್ ಹಾಗೂ ಬ್ಲಾಸ್ಟಿಂಗ್ ಸಂದರ್ಭದಲ್ಲಿ ಭೂಮಿ ಲಘುವಾಗಿ ಕಂಪಿಸುತ್ತದೆ. ಗ್ರಾಮ ಸಮೀಪದಲ್ಲಿಯೇ ಇರುವ ಕಾರಣ ಅನೇಕ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಇಡೀ ಗ್ರಾಮ ಅಪಾಯಕ್ಕೆ ಸಿಲುಕಿದೆ. ಇಲ್ಲಿ ಗಣಿಗಾರಿಕೆ ಮಾಡುವುದು ಸುರಕ್ಷಿತವಲ್ಲ ಎನ್ನುವ ಕಾರಣಕ್ಕೆ 10 ವರ್ಷಗಳಿಂದ ಗಣಿಗಾರಿಕೆ ಸ್ಥಗಿತಗೊಂಡಿತ್ತು. ಆದರೆ ನಾಲ್ಕು ತಿಂಗಳ ಹಿಂದೆ ಏಕಾಏಕಿ ಮತ್ತೆ ಆರಂಭವಾಗಿದೆ. ನಿನ್ನೆಯಷ್ಟೇ ಗ್ರಾಮಸ್ತರು ನನಗೆ ದೂರು ನೀಡಿದ್ದರು. ಅಧಿಕಾರಿಗಳು ಗಣಿಗಾರಿಕೆಗೆ ನೀಡಿದ ಅನುಮತಿಯನ್ನು ರದ್ದುಪಡಿಸಬೇಕು ಹಾಗೂ ಇಲ್ಲಿ ತಗೆಯಲಾಗಿರುವ ದಿಮ್ಮೆ (ಬ್ಲಾಕ್)ಗಳನ್ನು ವಶಕ್ಕೆ ಪಡೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯ್ತಿ ಸದಸ್ಯ ಚಂದ್ರು ವೈ. ಗೌಡರ ಹಾಗೂ ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ರಾಘವೇಂದ್ರ ಪಾಟೀಲ, ತಹಶೀಲ್ದಾರ್ ಸುಭಾಷ್ ಸಂಪಗಾವಿ, ಕಂದಾಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.