ADVERTISEMENT

ಆಚಾರ, ವಿಚಾರ ಸಂಪನ್ನರಾದವರೇ ಗುರು

​ಪ್ರಜಾವಾಣಿ ವಾರ್ತೆ
Published 13 ಮೇ 2017, 10:09 IST
Last Updated 13 ಮೇ 2017, 10:09 IST

ಜಮಖಂಡಿ: ಧಾರ್ಮಿಕ ತಳಹದಿಯ ಮೇಲೆ ಶೂನ್ಯ ಸಿಂಹಾಸನ ನಿಂತಿದೆ. ಶೂನ್ಯ ಸಿಂಹಾಸನ ಅಂದರೆ ಏನೂ ಇಲ್ಲ ಎಂದರ್ಥ. ಹಾಗಾಗಿ ಶೂನ್ಯ ಸಿಂಹಾಸನದ ಅಧಿಕಾರ ಅಂದರೆ ಮೋಹ ಬಂಧನದ ಪಾಶವಲ್ಲ ಎಂದು ಮುರಗೋಡ ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಶ್ರೀಗಳು ಹೇಳಿದರು.

ತಾಲ್ಲೂಕಿನ ಮರೇಗುದ್ದಿ ಗ್ರಾಮದ ಶ್ರೀದಿಗಂಬರೇಶ್ವರ ಸಂಸ್ಥಾನ ಮಠದ ತೋಂಟದಾರ್ಯ ದೇವರು ಶ್ರೀಗಳ ನಿರಂಜನ ಚರ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಶುಕ್ರವಾರ ಬ್ರಹ್ಮೋಪದೇಶ ಹಾಗೂ ಚಿನ್ಮಯಾನುಗ್ರಹ ನೆರವೇರಿಸಿದ ಬಳಿಕ ನಡೆದ ಶೂನ್ಯ ಸಿಂಹಾಸನಾರೋಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಗುರು ಮುಟ್ಟಿದ ಮೇಲೆ ಶಿಷ್ಯನು ಕೂಡ ಗುರು, ಶಿವಯೋಗಿ, ಜಂಗಮ ಆಗುತ್ತಾನೆ. ಗುರು ಎನಿಸಿಕೊಂಡ ಬಳಿಕ ಆಚಾರ, ವಿಚಾರ ಸಂಪನ್ನರಾಗಬೇಕು. ಅಂದಾಗ ಮಾತ್ರ ಪಟ್ಟಾಧಿಕಾರಕ್ಕೆ ಬೆಲೆ ಬರುತ್ತದೆ. ದಿಗಂಬರೇಶ್ವರ ಸಂಸ್ಥಾನ ಮಠ ಧರ್ಮದ ಪವಿತ್ರ ಕ್ಷೇತ್ರವಾಗಲಿ. ಸಾಮಾಜಿಕ, ಶೈಕ್ಷಣಿಕ ಕಾರ್ಯಗಳು ಶ್ರೀಮಠದಿಂದ ನೆರವೇರಲಿ ಎಂದು ಹಾರೈಸಿದರು.

ADVERTISEMENT

ದಿಗಂಬರೇಶ್ವರ ಸಂಸ್ಥಾನ ಮಠದ ತೋಂಟದಾರ್ಯ ದೇವರು ಶ್ರೀಗಳು ಶೂನ್ಯ ಸಿಂಹಾಸನ ಅಲಂಕರಿಸಿ ಪ್ರಭುತೋಂಟದಾರ್ಯ ಮಹಾಸ್ವಾಮಿಗಳು ಎಂದು ಮರುನಾಮಕರಣ ಮಾಡಿಕೊಂಡು ಮಾತನಾಡಿ, ಗುರು ಎನಿಸಿಕೊಂಡವನ ಮಾಂಸಮಯ ಶರೀರ ಮಂತ್ರಮಯ ಆಗಬೇಕು. ಕಾಯಗುಣ ಹೋಗಿ ಲಿಂಗಗುಣ ಬರಬೇಕು ಎಂದರು.

ಬಿದರಿ ಕಲ್ಮಠದ ಶಿವಲಿಂ.ಗ ಶ್ರೀಗಳು ಆಶೀರ್ವಚನ ನೀಡಿದರು.ಮುನವಳ್ಳಿಯ ಸೋಮಶೇಖರ ಮಠದ ಮುರುಘೇಂದ್ರ ಶ್ರೀಗಳು, ಕಮತಗಿಯ ಸಂಸ್ಥಾನ ಮಠದ ಹುಚ್ಚೇಶ್ವರ ಶ್ರೀಗಳು, ಉಪ್ಪಿನಬೆಟಗೇರಿಯ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಶ್ರೀಗಳು, ಅಮಿನಗಡದ ಪ್ರಭುಶಂಕರೇಶ್ವರ ಮಠದ ಶಂಕರರಾಜೇಂದ್ರ ಶ್ರೀಗಳು, ಕುಂದರಗಿಯ ಚರಂತಿಮಠದ ವಿಶ್ವನಾಥ ಶ್ರೀಗಳು, ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶ್ರೀಗಳು, ಕುಂದರಗಿಯ ಅಡವಿಸಿದ್ಧೇಶ್ವರ ಮಠದ ಅಮರಸಿದ್ಧೇಶ್ವರ ಶ್ರೀಗಳು, ಖ್ಯಾಡಗಿಯವಿರಕ್ತ ಮಠದ ಶಿವಬಸವ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ವಿಧಾನ ಪರಿಷತ್ತಿನ ಮಾಜಿ ಸದಸ್ಯ ಜಿ.ಎಸ್‌. ನ್ಯಾಮಗೌಡ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ವಿಧಾನ ಪರಿಷತ್‌ ಸದಸ್ಯ ಹನಮಂತ ನಿರಾಣಿ, ಕಾಡು ಮಾಳಿ, ರಾಜೇಂದ್ರಕುಮಾರ ಗುಡಗುಂಟಿ, ನಂದೆಪ್ಪ ದಡ್ಡಿಮನಿ, ಶಶಿಕಾಂತ ಪಾಟೀಲ, ಸುಶೀಲಕುಮಾರ ಬೆಳಗಲಿ, ಅಡಿವೆಪ್ಪ ರಾಮಗೊಂಡ ಮತ್ತಿತರರು ವೇದಿಕೆಯಲ್ಲಿದ್ದರು.

ಪ್ರಭುತೋಂಟದಾರ್ಯ ಶ್ರೀಗಳ ತುಲಾಭಾರ ಹಾಗೂ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು. ಕುಂಭಹೊತ್ತ ನೂರಾರು ಮಹಿಳೆಯರು ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಭಾಗಿಯಾಗಿದ್ದರು. ವಿವಿಧ ವಾದ್ಯಮೇಳ ಅಡ್ಡಪಲ್ಲಕ್ಕಿ ಮಹೋತ್ಸಕ್ಕೆ ಮೆರಗು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.