ADVERTISEMENT

ಆಸ್ಪತ್ರೆ ಕ್ಯಾಂಟಿನ್ ಇನ್ನೂ ಮರೀಚಿಕೆ!

ಕಟ್ಟಡಗಳು ಪೂರ್ಣಗೊಂಡು ಆರು ತಿಂಗಳು ಕಳೆದರೂ ಉದ್ಘಾಟನೆ ಭಾಗ್ಯವಿಲ್ಲ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 9:07 IST
Last Updated 19 ಮಾರ್ಚ್ 2018, 9:07 IST
ಬಾಗಲಕೋಟೆಯ ನವನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಉದ್ಘಾಟನೆ ಭಾಗ್ಯಕ್ಕಾಗಿ ಕಾದಿರುವ ಆಸ್ಪತ್ರೆ ಕ್ಯಾಂಟಿನ್ ಕಟ್ಟಡ  ಪ್ರಜಾವಾಣಿ ಚಿತ್ರ: ಸಂಗಮೇಶ ಬಡಿಗೇರ
ಬಾಗಲಕೋಟೆಯ ನವನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಉದ್ಘಾಟನೆ ಭಾಗ್ಯಕ್ಕಾಗಿ ಕಾದಿರುವ ಆಸ್ಪತ್ರೆ ಕ್ಯಾಂಟಿನ್ ಕಟ್ಟಡ ಪ್ರಜಾವಾಣಿ ಚಿತ್ರ: ಸಂಗಮೇಶ ಬಡಿಗೇರ   

ಬಾಗಲಕೋಟೆ: ಕ್ಯಾಂಟಿನ್ ಕಟ್ಟಡಗಳು ಪೂರ್ಣಗೊಂಡು ಆರು ತಿಂಗಳು ಕಳೆದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಇದರಿಂದ ನವನಗರದ ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಆರು ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಹಾಗೂ ಅವರ ಸಂಬಂಧಿಕರು ಊಟೋಪಹಾರಕ್ಕೆ ಪರದಾಡಬೇಕಾಗಿದೆ.

ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗುವವರಿಗೆ ರಿಯಾಯಿತಿ ದರದಲ್ಲಿ ಊಟ–ಉಪಾಹಾರ, ಹಾಲು, ಶುದ್ಧಕುಡಿಯುವ ನೀರು, ಹಣ್ಣು–ಹಂಪಲು ಪೂರೈಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾಂಟಿನ್ ಆರಂಭಿಸಲು ಮುಂದಾಗಿತ್ತು.

ಅದರಂತೆ ಕ್ಯಾಂಟಿನ್‌ ಕಟ್ಟಡ ಸಿದ್ಧಗೊಂಡಿದ್ದರೂ ಅವುಗಳಿಗೆ ಚಾಲನೆ ದೊರೆಯದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿನ ವಿಳಂಬ ದಿಂದಾಗಿ ಜಿಲ್ಲೆಯಲ್ಲಿ ಕ್ಯಾಂಟಿನ್‌ ಆರಂಭಿಸಲು ಯಾರೂ ಮುಂದೆ ಬರುತ್ತಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಸರ್ಕಾರದ ಉತ್ತಮ ಯೋಜನೆ ಅಧಿಕಾರಶಾಹಿಯ ವಿಳಂಬ ಧೋರಣೆಯಿಂದ ಉಪಯೋಗಕ್ಕೆ ಬಾರದಂತಾಗಿದೆ ಎಂದು ನವ ನಗರದ ನಿವಾಸಿ ವಿ.ಅಶೋಕ ಆರೋಪಿಸುತ್ತಾರೆ.

ADVERTISEMENT

ಸರ್ಕಾರ ಈ ಮೊದಲು ನಿಗದಿ ಗೊಳಿಸಿದ್ದ ಮುಹೂರ್ತದಂತೆ ಕಳೆದ ಅಕ್ಟೋಬರ್‌ನಲ್ಲಿಯೇ ಕ್ಯಾಂಟಿನ್‌

ಉದ್ಘಾಟನೆಗೊಂಡು ಸಾರ್ವಜನಿಕರ ಸೇವೆಗೆ ಲಭ್ಯವಾಗ ಬೇಕಿತ್ತು. ಅದಕ್ಕಾಗಿಯೇ ತರಾತುರಿ ಯಲ್ಲಿ ಸಿದ್ಧ ಸಾಮಗ್ರಿಗಳನ್ನು ತರಿಸಿ 'ನವನಗರದ ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಮಖಂಡಿ, ಬಾದಾಮಿ, ಮುಧೋಳ, ಹುನಗುಂದ, ಬೀಳಗಿ ತಾಲ್ಲೂಕು ಆಸ್ಪತ್ರೆಗಳ ಆವರಣದಲ್ಲಿ ಕ್ಯಾಂಟಿನ್‌ ಕಟ್ಟಡ ನಿರ್ಮಿಸಲಾಗಿದೆ. ಆಯಾ ಆಸ್ಪತ್ರೆಗಳ ಆಡಳಿತವೇ ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಿದೆ. ಆದರೆ ಇದುವರೆಗೂ ಸಂಪರ್ಕ ಕಲ್ಪಿಸಿಲ್ಲ' ಎಂದು ಸಾರ್ವಜನಿಕರ ದೂರುತ್ತಾರೆ.

‘ಶುದ್ಧ ಕುಡಿಯುವ ನೀರು ಪೂರೈಕೆ, ಹಾಲಿನ ಬೂತ್‌, ಹಾಪ್‌ಕಾಮ್ಸ್‌ನಿಂದ ಹಣ್ಣು ಮಾರಾಟ ಮಳಿಗೆ ಹಾಗೂ ಶೌಚಾಲಯ ವ್ಯವಸ್ಥೆ ಎಲ್ಲದಕ್ಕೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ ಕ್ಯಾಂಟಿನ್‌ನಲ್ಲಿ ರಿಯಾಯತಿ ದರದಲ್ಲಿ ಊಟ–ಉಪಹಾರ ಕಲ್ಪಿಸಲು ಟೆಂಡರ್ ಕರೆಯಲಾಗಿದೆ. ನಮ್ಮ ದರಕ್ಕೆ ಟೆಂಡರ್ ಮುಗಿಯುತ್ತಿಲ್ಲ. ಹಾಗಾಗಿ ಮತ್ತೊಮ್ಮೆ ಟೆಂಡರ್ ಕರೆಯಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕ್ಯಾಂಟಿನ್‌ ನಿರ್ವಹಣೆಯನ್ನು ಒಂದು ವರ್ಷದ ಅವಧಿಗೆ ಹೊರಗುತ್ತಿಗೆ ನೀಡಲಾಗುತ್ತಿದೆ. ಟೆಂಡರ್‌ ನೀಡುವಾಗ ಸ್ತ್ರೀಶಕ್ತಿ ಸ್ವ–ಸಹಾಯ ಗುಂಪುಗಳು, ಅಂಗವಿಕಲರು ಹಾಗೂ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು’ ಎಂದು ದೇಸಾಯಿ ಹೇಳಿದರು.

ನವನಗರದ ಜಿಲ್ಲಾಸ್ಪತ್ರೆ ಆವರಣದ ಕ್ಯಾಂಟಿನ್‌ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾ ಸರ್ಜನ್ ಡಾ. ಅನಂತರಡ್ಡಿ ರಡ್ಡೇರ್ ಅವರನ್ನು ಸಂಪರ್ಕಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

‘ಆಸ್ಪತ್ರೆ ಕ್ಯಾಂಟಿನ್‌ನಲ್ಲಿ ಕಡಿಮೆ ದರದಲ್ಲಿ ಊಟ–ಉಪಹಾರ ಒದಗಿಸುವುದರಿಂದ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಶೀಘ್ರ ಕ್ಯಾಂಟಿನ್‌ ಆರಂಭಿಸಲು ಆರೋಗ್ಯ ಇಲಾಖೆ ಮುಂದಾಗಲಿ’ ಎಂದು ಸ್ಥಳೀಯರಾದ ಶಶಿಧರ ತೆಗ್ಗೆ ಆಗ್ರಹಿಸುತ್ತಾರೆ.
**
ಟೆಂಡರ್ ಪ್ರಕ್ರಿಯೆ 10 ದಿನದೊಳಗೆ ಪೂರ್ಣಗೊಳಿಸ ಲಾಗುವುದು. ಇಂದಿರಾ ಕ್ಯಾಂಟಿನ್ ನಡೆಸುವವರನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗುವುದು.
–ಡಾ.ಅನಂತ ದೇಸಾಯಿ, ಜಿಲ್ಲಾ ಆರೋಗ್ಯಾಧಿಕಾರಿ
**

ಮಹಾಂತೇಶ್ ಮಸಾಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.