ADVERTISEMENT

ಊರಿಗೆ ತೆರಳುವಿರಾ, ಠಾಣೆಗೆ ಮಾಹಿತಿ ನೀಡಿ!

ಬೀಗ ಹಾಕಿದ ಮನೆಗಳ ಸುರಕ್ಷತೆಗೆ ವಿನೂತನ ಗಸ್ತು ವ್ಯವಸ್ಥೆ: ಎಸ್ಪಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 7:02 IST
Last Updated 24 ಮಾರ್ಚ್ 2017, 7:02 IST

ಬಾಗಲಕೋಟೆ: ಬೇಸಿಗೆ ರಜೆಗೆ ಮನೆ ಬೀಗ ಹಾಕಿಕೊಂಡು ಊರಿಗೆ ಹೋಗುವಿರಾ..ಹಾಗಿದ್ದರೆ ಸಮೀಪದ ಪೊಲೀಸ್‌ ಠಾಣೆ ಇಲ್ಲವೇ ನಿಯಂತ್ರಣ ಕೇಂದ್ರಕ್ಕೆ ಕರೆ ಮಾಡಿ ಮನೆಯ ವಿಳಾಸ ಕೊಡಿ. ನೀವು ಮರಳುವವರೆಗೂ ನಿಮ್ಮ ಮನೆ ಸುರಕ್ಷತೆಯನ್ನು ಪೊಲೀಸರೇ ನೋಡಿಕೊಳ್ಳಲಿದ್ದಾರೆ.

ಹೀಗೊಂದು ವಿನೂತನ ಗಸ್ತು (ಬೀಟ್) ವ್ಯವಸ್ಥೆಯನ್ನು ಜಾರಿಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾಂಪ್ರದಾಯಿ ಗಸ್ತು ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಲಾಗುತ್ತಿದೆ. ಬೀಗ ಹಾಕಿದ ಮನೆಗಳ ಮಾಹಿತಿ ಪಡೆದು ಗಸ್ತು ವೇಳೆ ಆ ಮನೆಗಳ ಮೇಲೆ ನಿಗಾ ವಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಮಾಹಿತಿ ಪುಸ್ತಕ ವಿತರಣೆ: ಗಸ್ತು ವ್ಯವಸ್ಥೆಗೆ ಪೂರಕವಾಗಿ ಸ್ಥಳೀಯ ಠಾಣಾಧಿಕಾರಿ, ಪೊಲೀಸ್‌ ನಿಯಂತ್ರಣ ಕೇಂದ್ರ ಹಾಗೂ ಬೀಟ್ ಸಿಬ್ಬಂದಿಯ ಸಂಪರ್ಕ ಸಂಖ್ಯೆಗಳನ್ನು ಒಳಗೊಂಡ ಮಾಹಿತಿ ಪುಸ್ತಕವನ್ನು ಮನೆ ಮನೆಗೂ ವಿತರಿಸಲಾಗುತ್ತಿದೆ. ಈ ಪುಸ್ತಕದಲ್ಲಿ ಕಾನೂನು ಪಾಲನೆ, ಸುರಕ್ಷಿತ ವಾತಾವರಣ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ, ಪೊಲೀಸರಿಂದ ಸಿಗುವ ನೆರವಿನ ಬಗ್ಗೆಯೂ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಗಸ್ತು ವ್ಯವಸ್ಥೆಯನ್ನು ಕೇವಲ ನಗರ ಪ್ರದೇಶಗಳಿಗೆ ಮಾತ್ರ ಸೀಮಿತಗೊಳಿಸುವುದಿಲ್ಲ. ಗ್ರಾಮೀಣ ಪ್ರದೇಶಗಳತ್ತಲೂ ಚಿತ್ತ ಹರಿಸಲಾಗುವುದು. ತಿಂಗಳಿಗೆ ಎರಡು ಬಾರಿ ಗ್ರಾಮಸ್ಥರೊಂದಿಗೆ ಕಡ್ಡಾಯವಾಗಿ ಗಸ್ತು ಸಿಬ್ಬಂದಿ ಸಭೆ ನಡೆಸಬೇಕಿದೆ. ಆ ಸಭೆಯಲ್ಲಿ ಸ್ಥಳೀಯ ಠಾಣೆ ಸಬ್‌ಇನ್‌ಸ್ಪೆಕ್ಟರ್‌ ಹಾಗೂ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಭಾಗಿಯಾಗಿ ಗ್ರಾಮಸ್ಥರ ಅಹವಾಲು ಆಲಿಸಬೇಕಿದೆ.

ಮಟ್ಕಾ, ಜೂಜಾಟ, ಅಕ್ರಮ ಮದ್ಯ ಮಾರಾಟ ಸೇರಿದಂತೆ ಅಕ್ರಮ ಚಟುವಟಿಕೆಗಳ ಮೇಲೂ ಈ ಗಸ್ತು ಸಿಬ್ಬಂದಿ ನಿಗಾ ವಹಿಸಲಿದ್ದಾರೆ. ಕಮ್ಯುನಲ್ ಗೂಂಡಾಗಳ ಚಟುವಟಿಕೆ ಬಗ್ಗೆಯೂ ಮಾಹಿತಿ ಸಂಗ್ರಹಿಸಲಿದ್ದಾರೆ. ಜೊತೆಗೆ ಬೇರೆ ಸಮಸ್ಯೆಗಳಿದ್ದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಿದ್ದಾರೆ ಎಂದರು.

ನೂತನ ಗಸ್ತು ವ್ಯವಸ್ಥೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಮಾಹಿತಿ ಕಾರ್ಡ್‌ಗಳ ವಿತರಣೆಯ ಜೊತೆಗೆ ಪ್ರತೀ ಮನೆಯ ಬಾಗಿಲು ಇಲ್ಲವೇ ಗೇಟ್‌ಗೆ ಸ್ಟಿಕ್ಕರ್‌ಗಳನ್ನು ಅಂಟಿಸಿ ಮನೆಯವರ ಗಮನ ಸೆಳೆಯಲಾಗುವುದು ಎಂದು ಹೇಳಿದರು.

ಮಹಿಳಾ ಠಾಣೆ 26ರಿಂದ ಕಾರ್ಯಾರಂಭ
ಜಿಲ್ಲೆಗೆ ಪ್ರತ್ಯೇಕ ಮಹಿಳಾ ಠಾಣೆ ಮಂಜೂರು ಆಗಿದೆ. ಮಾರ್ಚ್ 26ರಿಂದ ಕಾರ್ಯಾರಂಭ ಮಾಡಲಿದೆ. ಇಲ್ಲಿನ ನವನಗರದಲ್ಲಿ ನೂತನ ಠಾಣೆ ನೆಲೆಗೊಳ್ಳಲಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್ ತಿಳಿಸಿದರು.

20 ಮಹಿಳಾ ಸಿಬ್ಬಂದಿ, ಸಬ್‌ಇನ್‌ಸ್ಪೆಕ್ಟರ್, ಇನ್‌ಸ್ಪೆಕ್ಟರ್‌ ಈ ಠಾಣೆಯಲ್ಲಿ ಕಾರ್ಯ ನಿರ್ವಹಿಸಲಿದ್ದು, ಜಿಲ್ಲೆಯ ಯಾವುದೇ ಭಾಗದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದಲ್ಲಿ ಆಯಾ ಠಾಣೆ ವ್ಯಾಪ್ತಿಯಲ್ಲಿ  ಮೊದಲು ಆ ಬಗ್ಗೆ ಮಾಹಿತಿ ಸಂಗ್ರಹಿಸಿ ನಂತರ ಅದನ್ನು ಮಹಿಳಾ ಠಾಣೆಗೆ ವರ್ಗಾಯಿಸಲಾಗುವುದು ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.