ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ಮಿಷನ್ 100 ಸಿದ್ಧ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 8:12 IST
Last Updated 21 ಜನವರಿ 2017, 8:12 IST
ಎಸ್ಸೆಸ್ಸೆಲ್ಸಿ ಪರೀಕ್ಷೆ: ಮಿಷನ್ 100 ಸಿದ್ಧ
ಎಸ್ಸೆಸ್ಸೆಲ್ಸಿ ಪರೀಕ್ಷೆ: ಮಿಷನ್ 100 ಸಿದ್ಧ   

ಬಾಗಲಕೋಟೆ: ‘ಈ ಬಾರಿ ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆಯ ಮಕ್ಕಳ ಉತ್ತಮ ಸಾಧನೆಗೆ ‘ಮಿಷನ್ 100’ ಎಂಬ ವಿಶೇಷ ಯೋಜನೆ ರೂಪಿಸಲಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ ಕಿಶೋರ ಸುರೋಳಕರ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ವರ್ಷ ಎಸ್‌ಎಸ್‌ಎಲ್‌ಸಿ ಕಲಿಯುತ್ತಿರುವವರ ಪೈಕಿ ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯಗಳಲ್ಲಿ ಹಿಂದುಳಿದಿರುವ ಶೇ 15ರಷ್ಟು ಮಕ್ಕಳನ್ನು ಗುರುತಿಸಲಾಗಿದೆ. ಅವರು ಆ ವಿಷಯಗಳಲ್ಲಿ ಅನುತ್ತೀರ್ಣರಾಗ­ಬಹುದು ಎನಿಸಿದ್ದು, ಅಂತಹ ಮಕ್ಕಳ ಪಟ್ಟಿಯನ್ನು ಆಯಾ ಶಾಲೆಯ ಮುಖ್ಯ ಶಿಕ್ಷಕರಿಂದ ತರಿಸಿಕೊಳ್ಳಲಾಗಿದೆ.

ಮೂರು ವಿಷಯಗಳಲ್ಲಿ ಉತ್ತಮವಾಗಿ ಬೋಧನೆ ಮಾಡುವ ಹಾಗೂ ಸರಳವಾಗಿ ಅರ್ಥವಾಗುವಂತೆ ಮಕ್ಕಳಿಗೆ ಹೇಳಿಕೊಡುವ 263 ಶಿಕ್ಷಕರನ್ನು ಗುರುತಿಸಲಾಗಿದ್ದು, ಅವರಿಂದ ಈ ಮಕ್ಕಳಿಗೆ ವಿಶೇಷ ಪಾಠ ಬೋಧನೆ ಮಾಡಿಸಲಾಗುತ್ತಿದೆ. ಎಂಟು ದಿನಗಳ ಕಾಲ ಅವರಿಗೆ ವಿಶೇಷ ಬೋಧನೆ ಮಾಡಿಸಲಾಗುತ್ತದೆ. ಈ ವೇಳೆ ತಲಾ 20ರಿಂದ 30 ಮಕ್ಕಳ ಜವಾಬ್ದಾರಿಯನ್ನು ಆಯಾ ಶಿಕ್ಷಕರಿಗೆ ನೀಡಲಾಗುತ್ತದೆ ಎಂದು ವಿಕಾಸ್ ತಿಳಿಸಿದರು
.
ವಿಶೇಷ ಬೋಧನೆಯ ನಂತರ ಮೊದಲ ಹಂತದಲ್ಲಿ ಪೂರ್ವಭಾವಿ ಪರೀಕ್ಷೆ ನಡೆಸಲಾಗುತ್ತದೆ. ಮೊದಲು 8 ದಿನಗಳಲ್ಲಿ ಪಡೆದ ವಿಶೇಷ ಬೋಧನೆಯ ಪರಿಣಾಮ ಈ ಹಂತದಲ್ಲಿ ಗೊತ್ತಾಗುತ್ತದೆ. ಅದರ ಆಧಾರದ ಮೇಲೆ ಮತ್ತೆ ಮಕ್ಕಳಿಗೆ ವಿಶೇಷ ಬೋಧನೆ ಮಾಡಿ ನಂತರ ಎರಡು ಹಾಗೂ ಮೂರನೇ ಹಂತದಲ್ಲಿಯೂ ಪರೀಕ್ಷೆ ನಡೆಸಲಾತ್ತದೆ.

ಮೊದಲ ಹಂತದ 8 ದಿನಗಳ ವಿಶೇಷ ಬೋಧನೆ ಇದೇ 23ರಿಂದ 30ರವರೆಗೆ ನಡೆಯಲಿದೆ ಎಂದು ಹೇಳಿದರು. ಹಿಂದುಳಿದ ವಿದ್ಯಾರ್ಥಿಗಳು ಸುಲಭವಾಗಿ ತೇರ್ಗಡೆ ಹೊಂದಲು 48 ಅಂಕಗಳ ವರ್ಕ್‌ಬುಕ್ ಸಿದ್ಧಪಡಿಸಲಾಗಿದೆ. ಜೊತೆಗೆ ವಿಜ್ಞಾನ, ಇಂಗ್ಲಿಷ್ ಹಾಗೂ ಗಣಿತ ವಿಷಯಗಳ ವರ್ಕ್‌ಬುಕ್‌ಗಳನ್ನು ರಚಿಸಲಾಗಿದೆ. ಇದಕ್ಕೆ ನಾನೇ ವೈಯಕ್ತಿಕವಾಗಿ ಅಸ್ಥೆ ವಹಿಸಿರುವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.