ADVERTISEMENT

ಕಳುವಾದ ಸ್ವತ್ತು ವಾರಸುದಾರರ ವಶಕ್ಕೆ

ಸಾರ್ವಜನಿಕರೊಂದಿಗೆ ಪೊಲೀಸ್ ಇಲಾಖೆ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2016, 6:31 IST
Last Updated 16 ನವೆಂಬರ್ 2016, 6:31 IST

ಬಾಗಲಕೋಟೆ: ಇಲ್ಲಿನ ನವನಗರದ ಕವಾಯತು ಮೈದಾನದಲ್ಲಿ ಮಂಗಳವಾರ ಸಾರ್ವಜನಿಕರೊಂದಿಗೆ ಮುಖಾಮುಖಿ ಕಾರ್ಯಕ್ರಮ ನಡೆಸಿದ ಜಿಲ್ಲಾ ಪೊಲೀಸರು ಕಳ್ಳತನ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಸ್ವತ್ತುಗಳನ್ನು ಅವುಗಳ ವಾರಸುದಾರರಿಗೆ ಒಪ್ಪಿಸಿದರು.

ವಿಶೇಷವೆಂದರೆ ಕಳ್ಳರ ಕೈಚಳಕದಿಂದ ಕಳೆದುಕೊಂಡಿದ್ದ ಸ್ವತ್ತಿನಲ್ಲಿ ಶೇ 41ರಷ್ಟು ಮಾತ್ರ ಮಾಲೀಕರ ಕೈ ಸೇರಿತು. ‘ಕದ್ದ ನಂತರ ಅದನ್ನು ಕಳ್ಳರು ಹಂಚಿಕೊಂಡಿರುವುದು. ಖರ್ಚು ಮಾಡಿರುವುದು ಹಾಗೂ ಕೃತ್ಯದಲ್ಲಿ ಭಾಗಿಯಾದ ಎಲ್ಲರೂ ಸಿಕ್ಕದೇ ತಲೆಮರೆಸಿಕೊಂಡಿರುವ ಪರಿಣಾಮ ಸ್ವತ್ತು ಹಂಚಿಕೆಯಾಗಿ ಇಷ್ಟು ಮಾತ್ರ ಸಿಕ್ಕಿದೆ ಎಂಬುದನ್ನು ವಾರಸುದಾರರ ಗಮನಕ್ಕೆ ಪೊಲೀಸರು ತಂದರು. ನ್ಯಾಯಾಲಯದ ಅನುಮತಿ ಪಡೆದು ವಶಪಡಿಸಿಕೊಂಡಿದ್ದ ಸ್ವತ್ತನ್ನು ವಿಲೇವಾರಿ ಮಾಡಲಾಯಿತು.

ಕೆಲವರಿಗೆ ಕಳೆದುಹೋಗಿದ್ದ ಚಿನ್ನಾಭರಣ, ನಗದು ಸಂಪೂರ್ಣ ಮರಳಿ ಸಿಕ್ಕಿದ ಸಂಭ್ರಮ ಇದ್ದರೆ ಇನ್ನೂ ಕೆಲವರಲ್ಲಿ ಅಲ್ಪಸ್ವಲ್ಪ ಸಿಕ್ಕಿದ್ದು, ಉಳಿದ್ದದ್ದು ಸಿಗುವುದೋ ಇಲ್ಲವೋ ಎಂಬ ಆತಂಕ ಮನೆ ಮಾಡಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್‌.ನಾಗರಾಜ, ಹೆಚ್ಚುವರಿ ಎಸ್‌ಪಿ ಲಕ್ಷ್ಮೀಪ್ರಸಾದ್ ವಾರಸುದಾರರಿಗೆ ಸ್ವತ್ತು ವಿತರಿಸಿದರು.

ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ವಾಹನ, ಚಿನ್ನಾಭರಣ, ನಗದು ಸೇರಿದಂತೆ ₨2.53 ಕೋಟಿ ಮೊತ್ತದ ಸ್ವತ್ತುಗಳು ಕಳ್ಳತನವಾಗಿದ್ದು, ಅದರಲ್ಲಿ 1.03 ಕೋಟಿ ಮೊತ್ತದ ಸ್ವತ್ತುಗಳನ್ನು ಕಳ್ಳರ ಬಂಧನದ ನಂತರ ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ಇಲಾಖೆಯಿಂದ ನೀಡಲಾಯಿತು.

ದೇವರ ವಿಗ್ರಹ ಜಪ್ತಿ:ಬನಹಟ್ಟಿಯ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಕದ್ದೊಯ್ಯಲಾಗಿದ್ದ ಅಯ್ಯಪ್ಪಸ್ವಾಮಿ ಹಾಗೂ ಆಂಜನೇಯನ ಪಂಚಲೋಹದ ವಿಗ್ರಹಗಳು, ಹಿತ್ತಾಳೆಯ ಜೋಡಿ ಆನೆ ಕಳ್ಳರಿಂದ ಜಪ್ತು ಮಾಡಲಾದ ವಸ್ತುಗಳಲ್ಲಿ ಗಮನ ಸೆಳೆದವು.

ನಾಲ್ಕು ತಾಸಿನಲ್ಲಿ 12 ಲಕ್ಷ ಜಪ್ತಿ: ಬಾದಾಮಿ ತಾಲ್ಲೂಕು ಹಂಸನೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ (ಪಿಕೆಪಿಎಸ್) ಅದರ ಸಿಬ್ಬಂದಿ ಕುಟುಕನಕೇರಿ ನಿವಾಸಿ ವಿಜಯಾ ಲಕ್ಕಸಕೊಪ್ಪ ಎಂಬಾತ ₨12 ಲಕ್ಷ ಕಳವು ಮಾಡಿದ್ದು, ದೂರು ದಾಖಲಾದ ನಾಲ್ಕು ತಾಸಿನಲ್ಲಿಯೇ ಆಗಿನ ಗುಳೇದಗುಡ್ಡ ಪಿಎಸ್‌ಐ ಎಂ.ವೈ.ನರಸಪ್ಪನವರ ಹಾಗೂ ಸಿಬ್ಬಂದಿ ಆರೋಪಿಯನ್ನು ಹಿಡಿದು ಸಂಪೂರ್ಣ ಹಣ ಜಪ್ತಿ ಮಾಡಿದ್ದರು. ಸಮಾರಂಭದಲ್ಲಿ ವಾರಸುದಾರರಿಗೆ ಆ ಹಣವನ್ನು ಮರಳಿಸಲಾಯಿತು ಎಂದು ನರಸಪ್ಪನವರ ತಿಳಿಸಿದರು.

ತಿಂಗಳಲ್ಲಿಯೇ ಹಿಡಿದಿದ್ದಾರೆ: ದಸರಾ ಹಬ್ಬದ ಹಿಂದಿನ ದಿನ ಮನೆಯ ಬೀಗ ಮುರಿದು ಕಳ್ಳರು ಚಿನ್ನಾಭರಣ ಹಾಗೂ ₹ 80 ಸಾವಿರ ಕಳ್ಳತನ ಮಾಡಿದ್ದರು. ಬಾದಾಮಿ ಪೊಲೀಸರು 15 ದಿನಗಳಲ್ಲಿಯೇ ಶಿರಸಿಯಲ್ಲಿ ಕಳ್ಳರನ್ನು ಬಂಧಿಸಿದ್ದಾರೆ. ಚಿನ್ನಾಭರಣವೂ ಪೂರ್ತಿಯಾಗಿ ಸಿಕ್ಕಿಲ್ಲ. ₹ 80 ಸಾವಿರ ನಗದಿನ ಪೈಕಿ 10 ಸಾವಿರ ಮಾತ್ರ ದೊರೆತಿದೆ ಎಂದು ಶಿಕ್ಷಕ ತೋಟಪ್ಪ ಸುಂಕದ ಹೇಳಿದರು.

‘ನಮ್ಮ ಮನೆಯಲ್ಲಿ 1.5 ತೊಲೆ ಬಂಗಾರ, ಎಂಟು ತೊಲೆ ಬೆಳ್ಳಿ,ಐದು ರೇಷ್ಮೆ ಸೀರೆ, ಡಿವಿಡಿ ಪ್ಲೇಯರ್ ಹಾಗೂ ₹ 30 ಸಾವಿರ ನಗದು ಕಳ್ಳತನ ಆಗಿತ್ತು ಅದರಲ್ಲಿ ಚಿನ್ನ,ಬೆಳ್ಳಿ ಹಾಗೂ ಡಿವಿಡಿ ಪ್ಲೇಯರ್ ದೊರೆತಿದೆ. ಸೀರೆ ಮತ್ತು ನಗದು ಸಿಕ್ಕಿಲ್ಲ’ ಎಂದು ಬಾದಾಮಿಯ ಗಾರ್ಡನ್ ಕಾಲೊನಿ ನಿವಾಸಿ ಆರ್.ಎಂ.ಭಗವತಿ ತಿಳಿಸಿದರು.

ಮರಳಿಸಿದ ವಸ್ತು:  ಸರ, ಬಳೆ, ನಕ್ಲೆಸ್‌, ಬ್ರಾಸ್‌ಲೆಟ್‌, ಉಂಗುರ ಸೇರಿದಂತೆ ವಿವಿಧ ವಿನ್ಯಾಸದ ಚಿನ್ನದ ಆಭರಣ, ಪಂಚಲೋಹ, ಹಿತ್ತಾಳೆಯ ವಿಗ್ರಹ, ಬೆಳ್ಳಿಯ ಕಡಗ, ದೀಪಗಳು, ಆರತಿ ತಟ್ಟೆ, ನಗದು, ಟ್ರ್ಯಾಕ್ಟರ್, ಕಾರು, ಬೈಕ್‌ಗಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.