ADVERTISEMENT

ಕುಮಾರೇಶ್ವರ, ಜಿಲ್ಲಾಸ್ಪತ್ರೆಯೇ ಸಂಜೀವಿನಿ!

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 5:19 IST
Last Updated 17 ನವೆಂಬರ್ 2017, 5:19 IST

ಬಾಗಲಕೋಟೆ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ತಿದ್ದುಪಡಿ ಮಸೂದೆ (ಕೆ.ಪಿ.ಎಂ.ಇ) ಅನುಷ್ಠಾನ ವಿರೋಧಿಸಿ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದ ಗುರುವಾರವೂ ಜಿಲ್ಲೆಯಾದ್ಯಂತ ವೈದ್ಯಕೀಯ ಸೇವೆ ಅಸ್ತವ್ಯಸ್ತಗೊಂಡು ಸರಿಯಾದ ಚಿಕಿತ್ಸೆ ಸಿಗದೆ ರೋಗಿಗಳು ಹಾಗೂ ಅವರ ಸಂಬಂಧಿಕರು ಪರದಾಡಿದರು.

ಇಲ್ಲಿನ ನವನಗರದಲ್ಲಿರುವ ಜಿಲ್ಲಾ ಆಸ್ಪತ್ರೆ ಹಾಗೂ ಕುಮಾರೇಶ್ವರ ಮೆಡಿಕಲ್‌ ಕಾಲೇಜಿನ ಆಸ್ಪತ್ರೆಯಲ್ಲಿ ಹೊರ ಹಾಗೂ ಒಳರೋಗಿಗಳ ಸಂಖ್ಯೆಯಲ್ಲಿ ಸಾಮಾನ್ಯ ದಿನಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. ವೈದ್ಯರು ರಜೆ ಪಡೆಯದೇ ಬೆಳಿಗ್ಗೆಯಿಂದ ರೋಗಿಗಳ ತಪಾಸಣೆಯಲ್ಲಿ ತೊಡಗಿರುವುದು ಕಂಡು ಬಂದಿತು.

ನವನಗರದಲ್ಲಿರುವ ಜಿಲ್ಲಾ ಆಸ್ಪತ್ರೆಯ ಒಳರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಗುಣಮುಖರಾಗುತ್ತಿದ್ದಂತೆ ಅವರನ್ನು ಡಿಸ್ಚಾರ್ಜ್ ಮಾಡಿ, ಬೇರೆಯವರಿಗೆ ಅನುಕೂಲ ಕಲ್ಪಿಸಿ ಕೊಡಲಾಗುತ್ತಿದೆ. ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಲಾಗಿದೆ. ಔಷಧ ಹಾಗೂ ಇತರೆ ಅಗತ್ಯ ಸೌಕರ್ಯಗಳಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗಿದೆ. ಯಾವುದೇ ಪರಿಸ್ಥಿಯಲ್ಲಿಯೂ ದಿನದ 24 ಗಂಟೆಯೂ ಕೆಲಸ ನಿರ್ವಹಿಸಲು ಆಸ್ಪತ್ರೆಯ ಸಿಬ್ಬಂದಿ ಬದ್ಧರಾಗಿದ್ದಾರೆ ಎಂದು ಡಿಎಚ್ಒ ಅನಂತ ದೇಸಾಯಿ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಸಿಬ್ಬಂದಿ ಕೊರತೆ ಕಂಡುಬಂದಲ್ಲಿ ಇಲ್ಲಿನ ಕುಮಾರೇಶ್ವರ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಸಿಬ್ಬಂದಿಯನ್ನು ಕೂಡಾ ಸೇವೆಗೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಹಜ ಸಾವಿಗೂ ಕೆಲವು ಮಾಧ್ಯಮಗಳು, ಖಾಸಗಿ ವೈದ್ಯರ ಪ್ರತಿಭಟನೆಯಿಂದಾಗಿ ಸಾವು ಸಂಭವಿಸುತ್ತಿವೆ ಎಂದು ಬಿಂಬಿಸುತ್ತಿವೆ. ಸತ್ಯಾಸತ್ಯತೆ ಅರಿತು ಸುದ್ದಿ ಪ್ರಸಾರ ಮಾಡಬೇಕು ಎಂದು ಅವರು ಇದೇ ವೇಳೆ ಮನವಿ ಮಾಡಿದರು.

ಬಾದಾಮಿ: ಹೆಚ್ಚಿದ ಹೊರ ರೋಗಿಗಳು ಖಾಸಗಿ ವೈದ್ಯರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಗುರುವಾರ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ 380 ಕ್ಕೂ ಹೆಚ್ಚು ಮಂದಿ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ. 13 ಮಂದಿಯನ್ನು ಒಳರೋಗಿ ವಿಭಾಗದಲ್ಲಿ ದಾಖಲಿಸಲಾಗಿದೆ. ಮೂರು ಹೆರಿಗೆ ಮಾಡಿಸಲಾಗಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯ ಡಾ. ರೇವಣಸಿದ್ದಪ್ಪ ತಿಳಿಸಿದರು.

ವೈದ್ಯರಿಗೆ ಊಟೋಪಹಾರ
ರಬಕವಿ ಬನಹಟ್ಟಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ಹೊರ ರೋಗಿಗಳ ಸಂಖ್ಯೆ 500ರ ಗಡಿ ಸಮೀಪಿಸಿತ್ತು. ವೈದ್ಯಕೀಯ ಸಿಬ್ಬಂದಿ ಬೆಳಗ್ಗೆಯಿಂದಲೇ ಸಾಕಷ್ಟು ಪರಿಶ್ರಮ ಪಟ್ಟರು. ಆಸ್ಪತ್ರೆಯಲ್ಲಿ ಸರತಿಯಲ್ಲಿ ನಿಂತು ರೋಗಿಗಳು ತಪಾಸಣೆ ಮಾಡಿಸಿಕೊಂಡರು. ಮುಧೋಳ ತಾಲ್ಲೂಕಿನ ಮಹಾಲಿಂಗಪುರ ಸುತ್ತ ಮುತ್ತಲಿನ ಗ್ರಾಮಗಳ ರೋಗಿಗಳು ಚಿಕಿತ್ಸೆಗೆ ಬಂದ ಕಾರಣ ಆಸ್ಪತ್ರೆಯ ಎಲ್ಲಾ ಹಾಸಿಗೆಗಳು ಭರ್ತಿಯಾಗಿವೆ. ಸಮುದಾಯ ಕೇಂದ್ರ ಜನರಿಂದ ತುಂಬಿದೆ.

ವೈದ್ಯರು ಹಾಗೂ ಸಿಬ್ಬಂದಿ ಉಟೋಪಹಾರ ಮತ್ತು ಚಹಾವನ್ನು ಆಸ್ಪತ್ರೆಯಲ್ಲಿಯೇ ಸೇವಿಸುತ್ತಿದ್ದಾರೆ. ಔಷಧಗಳ ಕೊರತೆಯೂ ಉಂಟಾಗಿಲ್ಲ ಎಂದು ಸ್ಥಳೀಯ ವೈದ್ಯಾಧಿಕಾರಿ ಡಾ.ಎನ್‌.ಎಮ್‌.ನದಾಫ್‌ ಪತ್ರಿಕೆಗೆ ತಿಳಿಸಿದರು.

ಕುಮಾರೇಶ್ವರ ಆಸ್ಪತ್ರೆ ಆಡಳಿತದ ಸ್ಪಂದನೆ
ಖಾಸಗಿ ವೈದ್ಯರ ಪ್ರತಿಭಟನೆ ಆರಂಭವಾಗುತ್ತಿದ್ದಂತೆಯೇ ಇಲ್ಲಿನ ಕುಮಾರೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆ ಈ ಭಾಗದಲ್ಲಿ ಸಂಜೀವಿನಿಯಂತೆ ಕೆಲಸ ಮಾಡುತ್ತಿದೆ. ಆಸ್ಪತ್ರೆಯ ಆಡಳಿತ ಅಲ್ಲಿನ 300 ವೈದ್ಯರಿಗೆ ರಜೆ ತೆಗೆದುಕೊಳ್ಳದಂತೆ ಮನವಿ ಮಾಡಿದೆ. ಅದಕ್ಕೆ ಸ್ಪಂದಿಸಿರುವ ವೈದ್ಯರು ರಾತ್ರಿ 12 ಗಂಟೆವರೆಗೂ ಕೆಲಸ ಮಾಡುತ್ತಿದ್ದಾರೆ.

ಜಿಲ್ಲೆಯ ವಿವಿಧೆಡೆಯಿಂದ ಹಾಗೂ ಗದಗ ಜಿಲ್ಲೆಯಿಂದಲೂ ರೋಗಿಗಳು ಕುಮಾರೇಶ್ವರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ನವನಗರದ ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ಕಳುಹಿಸಲಾಗುತ್ತಿದೆ.

ಆಸ್ಪತ್ರೆಯ ಒಳರೋಗಿಗಳ ವಿಭಾಗ, ಮಕ್ಕಳ ಘಟಕದ ಹಾಗೂ ಪ್ರಸೂತಿ ವಿಭಾಗಗಳಲ್ಲಿ ಬಹುತೇಕ ಹಾಸಿಗೆಗಳು ಭರ್ತಿಯಾಗಿದ್ದವು. ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುತ್ತಿರುವುದಕ್ಕೆ ರೋಗಿಗಳು ಹಾಗೂ ಅವರ ಸಂಬಂಧಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

* * 

ಕುಮಾರೇಶ್ವರ ಆಸ್ಪತ್ರೆಯಲ್ಲಿ 300 ವೈದ್ಯರ ರಜೆ ರದ್ದು ಮಾಡಲಾಗಿದೆ. ವೈದ್ಯರು ಎರಡೆರಡು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳು ನೆರವಿಗೆ ನಿಂತಿದ್ದಾರೆ
ವೀರಣ್ಣ ಚರಂತಿಮಠ
ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.