ADVERTISEMENT

ಕೆರೆ ತುಂಬಿಸಲು ಕ್ರಮ: ಸಚಿವ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 4:56 IST
Last Updated 11 ನವೆಂಬರ್ 2017, 4:56 IST
ಬಾಗಲಕೋಟೆಯ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿದರು.
ಬಾಗಲಕೋಟೆಯ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿದರು.   

ಬಾಗಲಕೋಟೆ: ‘ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮಲಪ್ರಭಾ ಹಾಗೂ ಘಟಪ್ರಭಾ ನದಿಗಳಿಗೆ ಕಟ್ಟಲಾದ ಬಲ ಮತ್ತು ಎಡದಂಡೆ ಕಾಲುವೆಗಳ ವ್ಯಾಪ್ತಿಗೆ ಬರುವ ಎಲ್ಲ ಕೆರೆಗಳನ್ನು ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ’ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಘಟಪ್ರಭಾ ಎಡದಂತೆ ಹಾಗೂ ಬಲದಂಡೆ ನಾಲೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಕೆರೆಗಳನ್ನು ತುಂಬಿಸಲು ಎಷ್ಟು ಟಿಎಂಸಿ ನೀರು ಬೇಕಾಗುತ್ತದೆ ಎಂಬ ಸಂಪೂರ್ಣ ಮಾಹಿತಿ ನೀಡುವಂತೆ’ ಸೂಚಿಸಿದರು.

ಘಟಪ್ರಭಾ ಯೋಜನೆಯಡಿ ಹಿಡಕಲ್ ಡ್ಯಾಮ್‌ನಲ್ಲಿ 51 ಟಿಎಂಸಿ ನೀರು ಸಂಗ್ರಹದ ಸಾಮಥ್ಯವಿದ್ದು, ಈಗ 46.34 ಟಿಎಂಸಿ ನೀರು ಸಂಗ್ರಹವಾಗಿದೆ. ಲೈವ್ ಸ್ಟೋರೇಜ್ 44.32 ಟಿಎಂಸಿ ಇದೆ. ಪ್ರತಿಯೊಂದು ಕಾಲುವೆಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆಯ ಸಂಪೂರ್ಣ ಮಾಹಿತಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಬಾದಾಮಿ ಎಂ.ಎಲ್.ಬಿ.ಸಿಯಲ್ಲಿ ಸದ್ಯ 18 ಟಿಎಂಸಿ ನೀರು ಸಂಗ್ರಹವಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ 2 ಟಿಎಂಸಿ ನೀರು ಹೆಚ್ಚಿಗೆ ಸಂಗ್ರಹವಾಗಿದೆ. ಒಟ್ಟು 20 ಗ್ರಾಮಗಳಿಗೆ ನೀರು ಹರಿಸುವ ಸಾಮರ್ಥವಿದ್ದು, ಪ್ರತಿಯೊಂದು ಕಮಾಂಡ್ ಏರಿಯಾಗಳಲ್ಲಿ ನೀರು ಹಂಚಿಕೆ ಮಾಡುವ ಕೆಲಸವಾಗಬೇಕು ಎಂದರು.

ಆನದಿನ್ನಿ ಬ್ಯಾರೇಜ್ ತುಂಬಲು ಎಷ್ಟು ಟಿಎಂಸಿ ನೀರು ಬೇಕಾಗುತ್ತದೆ ಎಂಬ ಮಾಹಿತಿ ಕಲೆಹಾಕಿ ಅಷ್ಟು ನೀರು ಬಿಡುವ ವ್ಯವಸ್ಥೆಯಾಗಬೇಕು. ನೀವು ಸಲ್ಲಿಸಿದ ವರದಿ ಆಧಾರದ ಮೇಲೆ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಈ ಕುರಿತು ಚರ್ಚಿಸಲಾಗುವುದು ಎಂದರು. ತಾಂತ್ರಿಕ ಸಲಹೆಗಳನ್ನು ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಶಾಸಕ ಎಚ್.ವೈ.ಮೇಟಿ, ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.