ADVERTISEMENT

‘ಗಾಯತ್ರಿ ಮಂತ್ರದಿಂದ ಜ್ಞಾನ ವೃದ್ಧಿ’

ವಿಶ್ವಕರ್ಮ ಸಮಾಜದಿಂದ ವೇದಮಾತೆ ಗಾಯತ್ರಿದೇವಿ ದೇಗುಲದಲ್ಲಿ ಮೂರ್ತಿ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 8:39 IST
Last Updated 6 ಫೆಬ್ರುವರಿ 2017, 8:39 IST

ತೇರದಾಳ(ಬನಹಟ್ಟಿ): ಆದಿ ಋಷಿ ಮುನಿಗಳು ಹೇಳಿದಂತೆ ಗಾಯತ್ರಿ ಮಂತ್ರವೇ ಮಹಾಮಂತ್ರ ಎಂದು ಚನ್ನಮ್ಮ ಕಿತ್ತೂರಿನ ವಿಶ್ವಕರ್ಮ ಏಕದಂಡಗಿಮಠದ ಆರ್.ಪ್ರಮೋದ ಸ್ವಾಮೀಜಿ ಹೇಳಿದರು.

ಸ್ಥಳೀಯ  ವಿಶ್ವಕರ್ಮ ಸಮಾಜದವರಿಂದ ವೇದಮಾತೆ ಗಾಯತ್ರಿದೇವಿ ದೇಗುಲದಲ್ಲಿ ನಡೆದ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಮಾತನಾಡಿದರು.
ಎಲ್ಲ ಧರ್ಮಗಳಲ್ಲೂ ಮಾನವೀಯ ಮೌಲ್ಯಗಳಿವೆ. ಅವುಗಳನ್ನು ತಿಳಿದುಕೊಂಡು ಬದುಕಿ, ಸಮಾಜದ ಶ್ರೇಯಸ್ಸಿಗೆ ಶ್ರಮಿಸಬೇಕು. ವಿಶ್ವಶಾಂತಿ ಬಯಸಿ, ಜಗತ್ತಿನ  ಕಲ್ಯಾಣಕ್ಕಾಗಿ ಧಾರ್ಮಿಕ ಕಾರ್ಯ ಕಲಾಪ  ಸತತವಾಗಿ ಸಾಗಬೇಕು ಎಂದರು. ಶೇಖರಾಚಾರ್ಯ  ಧಾರ್ಮಿಕ ಸಭೆಯ ನೇತೃತ್ವ ವಹಿಸಿದ್ದರು.

ಸಮಾಜದ ಅಧ್ಯಕ್ಷ ಮಲ್ಲಪ್ಪ ಪತ್ತಾರ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ವಿಭಾಗ ಮಟ್ಟದ ಕಾರ್ಯದರ್ಶಿ, ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಭೀಮರಾವ್ ಬಡಿಗೇರ ಹಾಗೂ ಉಪತಹಶೀಲ್ದಾರ್ ಎಚ್.ಎನ್. ಬಡಿಗೇರ ಮಾತನಾಡಿದರು.

ಗೋಪಾಲ ಆಚಾರ್ಯರರಿಂದ  ದೇವಿ ಮೂರ್ತಿಗೆ ಪೂಜೆ, ಮಹಾಭಿಷೇಕ, ಆರುತಿ, ಅಲಂಕಾರ ಪೂಜೆ, ತುಪ್ಪದಾರುತಿ, ಮಂಗಳಾರುತಿ ಸೇರಿದಂತೆ, ಘಂಟೆ-ಜಾಂಗಟೆಗಳೊಂದಿಗೆ ಪೂಜಾ ಕೈಂಕರ್ಯಗಳು ನೆರವೇರಿದವು. ನಂತರ ವಿಶ್ವಶಾಂತಿ ಮತ್ತು ವಿಶ್ವ ಕಲ್ಯಾಣಾರ್ಥಕವಾಗಿ ಗಾಯತ್ರಿ ಮಹಾ ಹೋಮ ನೆರವೇರಿತು.   ಸಮಾಜದ ಏಳು ಜನ ವಟುಗಳಿಗೆ ಉಪನಯನ ನೆರವೇರಿತು.

ಮಧ್ಯಾನ್ಹ ಮುತೈದೆಯರ ತುಂಬು ಕುಂಭ ಹಾಗೂ ಆರುತಿಯೊಂದಿಗೆ ಪಂಚಮುಖಿ ಗಾಯತ್ರಿದೇವಿ ಪಲ್ಲಕ್ಕಿ ಉತ್ಸವವು ಅದ್ದೂರಿಯಾಗಿ ನಡೆಯಿತು.  ತದ ನಂತರ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಭೋಜನ ದಾನಿಗಳಾದ ಡಾ.ಶ್ವೇತಾ ಹೊನವಾಡ, ಅಕ್ಕವ್ವ ಕಲೆಗಾರ, ಡಾ.ಮುರಲೀಧರ ಬಡಿಗೇರ ಮತ್ತು ಪ್ರವೀಣ ಬಾಳಿಗೇರಿ, ಡಾ.ವಿದ್ಯಾಶ್ರೀ ಪತ್ತಾರ, ಗೋಪಾಲಾಚಾರ್ಯ ದಂಪತಿ, ಕಾಳಪ್ಪ ಪತ್ತಾರ ಮತ್ತು ಎಸ್ಎಸ್ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ವರ್ಷಾ ಸುತಾರ, ಪಲ್ಲವಿ ಸುತಾರ ಪ್ರಶಸ್ತಿಗೆ ನೀಡಿ ಗೌರವಿಸಲಾಯಿತು.  ಶ್ರೇಯಾ ಪೋತದಾರ ಪ್ರಾರ್ಥಿಸಿದರು. ಐ.ಆರ್. ಬಡಿಗೇರ ಸ್ವಾಗತಿಸಿದರು, ಬಿ.ಟಿ.ಪತ್ತಾರ ಪ್ರಾಸ್ತಾವಿಕ ಮಾತನಾಡಿದರು. ಆರ್.ಟಿ. ಪೋತದಾರ ನಿರೂಪಿಸಿದರು. ಎಸ್.ವಿ.ಗೋಠೆಕರ ವಂದಿಸಿದರು. ನಂತರ ಮಹಾಪ್ರಸಾದ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT