ADVERTISEMENT

ಗ್ರಾಮದೇವಿಯರ ಜಾತ್ರೆಗೆ ಅದ್ಧೂರಿ ತೆರೆ

​ಪ್ರಜಾವಾಣಿ ವಾರ್ತೆ
Published 23 ಮೇ 2017, 9:03 IST
Last Updated 23 ಮೇ 2017, 9:03 IST

ಕೆರೂರ: ಸಾಕ್ಷಾತ್ ಮನೆ ಮಗಳಂತೆ ಮನೆಗೆ ಕರೆದೊಯ್ದು ಶ್ರದ್ಧೆ, ಭಕ್ತಿಯೊಂ ದಿಗೆ ಸೀರೆ, ರವಿಕೆ ಜೊತೆಗೆ ಅರಿಷಿಣ, ಅಡಕೆ, ಬಳೆ ಮುಂತಾದ ಮುತ್ತೈದೆ ಉಡುಗೊರೆಯ ಉಡಿ ತುಂಬಿ ಭಕ್ತಿ ಪ್ರದರ್ಶಿಸಿದರು.

ಎಲ್ಲ ಜಾತಿ, ಜನಾಂಗದವರನ್ನು ಒಗ್ಗೂಡಿಸಿ ವೈಭವದ ಹಬ್ಬಕ್ಕೆ ಪ್ರೇರೇಪಿ ಸುವ ಜೊತೆಗೆ ನವ ಹೋಮಗಳನ್ನು (ಮಳೆ, ಬೆಳೆಯ ಸುಭಿಕ್ಷೆಗೆ) ಧಾರಾಕಾರ ಸುರಿದ ಮಳೆ ಇದೇ ರೀತಿ ಎಲ್ಲ ಕಾಲಕ್ಕೂ ನಮ್ಮನ್ನು ಕಾಪಾಡಲಿ ಎಂದು ಬೇಡಿಕೊಂಡರು.

ಹಳಪೇಟೆ, ಹೊಸಪೇಟೆ ಹಾಗೂ ಕಿಲ್ಲಾಪೇಟೆಗಳಲ್ಲಿ ಮಹಿಳಾ ಭಕ್ತರು ರಸ್ತೆಗಳಿಗೆ ನೀರು ಹಾಕಿ ಮಡಿ ಮಾಡಿ, ಚಿತ್ತಾರದ ರಂಗೋಲಿ ಬಿಡಿಸಿ ದೇವತೆಯರಿಗೆ ಸ್ವಾಗತ ಕೋರಿದರು. ಬಡಿಗೇರ ಓಣಿಯ ದೇಗುಲದಿಂದ ದೇವಿಯರ ಪ್ರಮುಖ ಬಾಬುದಾರ ಹಳಪೇಟೆ ಓಣಿಯ ಪೊಲೀಸ್ ಪಾಟೀಲರು ಹಾಗೂ ಶಂಕರಗೌಡ ಪಾಟೀಲರ ನಿವಾಸಗಳಲ್ಲಿ ದೇವತೆಯರಿಗೆ ಮೊದಲು ಸೀರೆ, ರವಿಕೆ ಮತ್ತು ಮುತ್ತೈ ದೆ ಪರಿಕರಗಳಿಂದ ಉಡಿ ತುಂಬಲಾಯಿತು.

ADVERTISEMENT

ನಂತರ ಹಳಪೇಟೆ, ಪತ್ತಾರಕಟ್ಟೆ ಓಣಿ, ವಿಠ್ಠಲಗೌಡ್ರ ಮನೆ, ಹೊಸಪೇಟೆ ಬನಶಂಕರಿ ಗುಡಿಯಿಂದ ಕಿಲ್ಲಾಪೇಟೆ ಮೇಟಿ ಅವರ ಮನೆವರೆಗೆ ಒಟ್ಟು 52 ಬಾಬುದಾರರ ನಿವಾಸಗಳಲ್ಲಿ ಉಡಿ ತುಂಬುವ ಆಚರಣೆ ನಡೆಯಿತು.

ದೇವಿಯರ ಭಕ್ತಿಯ ಮೆರವಣಿಗೆ ಹಿಂಬದಿ ಶ್ರದ್ಧೆಯಿಂದ ಆರತಿ ಹಿಡಿದು ಬಂದ ಎಲ್ಲ ಸಮಾಜದ 500ಕ್ಕೂ ಹೆಚ್ಚು ಸ್ತ್ರೀಯರು ಬಿಸಿಲಿಗೆ ಕಾಯ್ದ ರಸ್ತೆಗಳಲ್ಲಿ ಸಹ ಬರಿಗಾಲಲ್ಲೇ ಸಂಚರಿಸಿ ಭಕ್ತಿಯ ಪರವಶತೆಯಲ್ಲಿ ಮಿಂದೆದ್ದರು. ಅವರೆಲ್ಲರಿಗೆ ತಂಪು ನೀರು, ಪಾನೀಯ, ಮಜ್ಜಿಗೆ ಕೊಟ್ಟು ಉಪಚರಿಸಿದರು.

ಮೆರವಣಿಗೆಯಲ್ಲಿ ವಿಶ್ವಕರ್ಮ ಬಾಂಧವರು, ಉತ್ಸವ ಸಮಿತಿ ಸದಸ್ಯರು ಮತ್ತು ವಿಜಯಪುರ ಜಿಲ್ಲೆ ಕೋರವಾರದ ಜೈಹನುಮಾನ ಹಲಗೆ ಮೇಳ ವಿಶಿಷ್ಟ ವಾದನದ ತಾಳಕ್ಕೆ ತಕ್ಕಂತೆ ಯುವ ಪಡೆ ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು. ಜಾತಿಭೇದವಿಲ್ಲದೆ ಎಲ್ಲ ಧರ್ಮ, ಜಾತಿ ಜನರು ಪಾಲ್ಗೊಂಡು ಉತ್ಸವ ಆಚರಿಸಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.