ADVERTISEMENT

ಘಟಪ್ರಭೆ ನೀರಿನಿಂದ ಕಳಸಕೊಪ್ಪ ಕೆರೆ ಭರ್ತಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2017, 6:28 IST
Last Updated 1 ಸೆಪ್ಟೆಂಬರ್ 2017, 6:28 IST
ಕಲಾದಗಿ ಸಮೀಪದ ಕಳಸಕೊಪ್ಪ ಕೆರೆ ಘಟಪ್ರಭೆ ನೀರಿನಿಂದ ಭರ್ತಿಯಾಗಿದ್ದು, ಕೋಡಿ ಬಿದ್ದಿದೆ
ಕಲಾದಗಿ ಸಮೀಪದ ಕಳಸಕೊಪ್ಪ ಕೆರೆ ಘಟಪ್ರಭೆ ನೀರಿನಿಂದ ಭರ್ತಿಯಾಗಿದ್ದು, ಕೋಡಿ ಬಿದ್ದಿದೆ   

ಕಲಾದಗಿ: ಸುತ್ತಲಿನ ಹತ್ತಾರು ಹಳ್ಳಿಗಳ ರೈತರ ಜೀವನಾಡಿಯಾಗಿರುವ ಐತಿಹಾಸಿಕ ಕಳಸಕೊಪ್ಪ ಕೆರೆಯನ್ನು ತುಂಬಿಸುವ ಕನಸು ನನಸಾಗಿದೆ. ಇದರಿಂದ ಈ ಭಾಗದ ರೈತರ ಸಂಭ್ರಮ ಇಮ್ಮಡಿಯಾಗಿದೆ.

ಕಳೆದ 20 ವರ್ಷಗಳಲ್ಲಿ ಒಮ್ಮೆ ಮಾತ್ರ ಭಾರಿ ಮಳೆಗೆ ಕೆರೆ ತುಂಬಿ ಹರಿದಿದೆ. ಈಗ ಕಾಲುವೆ ಮೂಲಕ ಘಟಪ್ರಭಾ ನೀರು ತುಂಬಿಸಿ ಕೆರೆ ತುಂಬಿಸಲಾಗಿದೆ. ಇಲ್ಲಿಯವರೆಗೆ ಮಳೆ ಬಂದರೆ ಮಾತ್ರ ಕೆರೆಗೆ ನೀರು ಎಂಬ ಪರಿಸ್ಥಿತಿ ಇತ್ತು. ಈಗ ಕಾಲುವೆಯಲ್ಲಿ ನೀರು ಹರಿದರೆ ಕೆರೆಗೆ ನೀರು ತುಂಬುತ್ತದೆ ಎಂದು ಸ್ಥಳೀಯ ರೈತರು ಹರ್ಷ ವ್ಯಕ್ತಪಡಿಸುತ್ತಾರೆ.

‘ಕಳೆದ ಜುಲೈ -25ರಂದು ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಕಳಸಕೊಪ್ಪ ಸೇರಿದಂತೆ  ಬಾದಾಮಿ ತಾಲ್ಲೂಕಿನ ಎಂಟು ಕೆರೆಗಳನ್ನು ತುಂಬುವ ಕಾರ್ಯಕ್ಕೆ ಮರು ಚಾಲನೆ ನೀಡಿದ್ದರು. ಅದರ ಪರಿಣಾಮ ಐತಿಹಾಸಿಕ ಕಳಸಕೊಪ್ಪ ಕೆರೆ ತುಂಬಿ ಹರಿಯಲು ಆರಂಭಿಸಿದೆ. ಕೆರೆ ಕೋಡಿ ಬಿದ್ದು ಹರಿದು ಬರುತ್ತಿರುವ ನೀರು ಹಳ್ಳಕ್ಕೆ ಬರುತ್ತಿದೆ. ಕೆರೆ ತುಂಬಿರುವುದರಿಂದ ಅಂತರ್ಜಲಮಟ್ಟ ಹೆಚ್ಚಳಗೊಂಡು ರೈತರ ಪಂಪ್‌ಸೆಟ್‌ಗಳಿಗೆ ನೀರು ಬರಲಿದೆ’ ಎಂದು ಸ್ಥಳೀಯರು ಹರ್ಷ ವ್ಯಕ್ತಪಡಿಸುತ್ತಾರೆ.

ADVERTISEMENT

ಕಳಸಕೊಪ್ಪ ಕೆರೆಗೆ ಬುಧವಾರ ಬೆಳಿಗ್ಗೆ ಭೇಟಿ ನೀಡಿದ ಬೀಳಗಿ ಶಾಸಕ ಜೆ.ಟಿ. ಪಾಟೀಲ ಕೆರೆ ವೀಕ್ಷಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಈ ಭಾಗದಲ್ಲಿ ಮೂರು ಸಾವಿರ ಎಕರೆ ಬರಡು ಭೂಮಿಯನ್ನು ನೀರಾವರಿ ಮಾಡುವ ಉದ್ದೇಶದಿಂದಲೇ  ಕೆರೆಗೆ ನೀರು ತುಂಬಿಸಲಾಗಿದೆ. ಸತತ 35 ದಿನಗಳ ಕಾಲ ನೀರು ಹರಿದು ಬಂದ ಕಾರಣ ಕೆರೆ ಭರ್ತಿಯಾಗಿದೆ. ಇದು ಸಂತಸಕರ ವಿಚಾರ ಎಂದರು.

ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಕೆರೆಗೆ ಬಾಗಿನ ಸಲ್ಲಿಸಿ ಹೊಲಕಾಲುವೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಯೋಚನೆ ಇದೆ ಎಂದು ತಿಳಿಸಿದರು.

ಈಗಾಗಲೇ ಕೆರೂರ ಕೆರೆ ಕೂಡ ಶೇ 90ರಷ್ಟು ತುಂಬಿದೆ. ಕೈನಕಟ್ಟಿ ಕೆರೆ ನೀರು ತುಂಬುವ ಕಾರ್ಯ ಮಂದಗತಿಯಲ್ಲಿ ಸಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ನೀರು ತುಂಬಿಸಲು ಅಧಿಕಾರಿಗಳಿಗೆ ಆದೇಶಿಸ ಲಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಂ.ಬಿ. ಸೌದಾಗರ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಸಲಿಂ ಶೇಖ್, ವೆಂಕಣ್ಣ ಬಿರಾದಾರ ಪಾಟೀಲ, ಡಿ.ಡಿ.ದುರ್ವೆ, ಪಾಂಡು ಪೊಲೀಸ್, ಮಲ್ಲಪ್ಪ ಜಮಖಂಡಿ. ಫಕೀರಪ್ಪ ಬಿಸಾಳಿ, ಬಸವರಾಜ ಸಂಶಿ ಹಾಗೂ ಸ್ಥಳೀಯ ರೈತ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.