ADVERTISEMENT

ಜಾಲಿಗಿಡದೊಳಗೆ ಮುಳುಗಿದ ಕೆಂದೂರ ಕೆರೆ !

ಬಾಗಲಕೋಟೆ ಜಿಲ್ಲೆಯಲ್ಲೇ ದೊಡ್ಡ ಜೀವನಾಡಿ, ಚಾಲುಕ್ಯರ ಕಾಲದಲ್ಲೇ ನಿರ್ಮಾಣ, ಬ್ರಿಟಿಷರಿಂದ ದುರಸ್ತಿ ಕಾರ್ಯ

ಎಸ್.ಎಂ.ಹಿರೇಮಠ
Published 28 ಜನವರಿ 2017, 10:41 IST
Last Updated 28 ಜನವರಿ 2017, 10:41 IST
ಜಾಲಿಗಿಡದೊಳಗೆ ಮುಳುಗಿದ ಕೆಂದೂರ ಕೆರೆ !
ಜಾಲಿಗಿಡದೊಳಗೆ ಮುಳುಗಿದ ಕೆಂದೂರ ಕೆರೆ !   

ಬಾದಾಮಿ:  ಪಟ್ಟಣದಿಂದ 10 ಕಿ.ಮೀ. ದೂರದಲ್ಲಿರುವ ಕೆಂದೂರ ಕೆರೆ ಬಾಗಲಕೋಟೆ ಜಿಲ್ಲೆಯಲ್ಲಿಯೇ ಅತಿ ದೊಡ್ಡ ಕೆರೆ. ನೀರಿನಿಂದ ಮೈದುಂಬಿ ನಿಲ್ಲಬೇಕಿದ್ದ ಕೆರೆ ಈಗ ಜಾಲಿ ಗಿಡದ ನಡುವೆ ಮುಳುಗಿಹೋಗಿದೆ!

ಮಳೆಯ ಅಭಾವ ಮತ್ತು ತುಂಬಿ­ರುವ ಹೂಳಿನಿಂದಾಗಿ ದಶಕದಿಂದ ಕೆರೆಯು ಬತ್ತಿದೆ. ದಶಕದ ಹಿಂದೆ ಪ್ರವಾಸಿಗರು ಬಾದಾಮಿಯಿಂದ ಮಹಾ­ಕೂಟ, ಪಟ್ಟದಕಲ್ಲು ಮತ್ತು ಐಹೊಳೆ ಪ್ರವಾಸಿ ತಾಣಗಳಿಗೆ ಹೋಗುವಾಗ ಭರ್ತಿಯಾದ ಕೆರೆಯಲ್ಲಿ ಮೀನು ವೀಕ್ಷಿಸಿ ಆನಂದದಿಂದ ತೆರಳುತ್ತಿದ್ದರು.  ಸ್ಥಳೀಯ ಮತ್ತು ವಿದೇಶಗಳಿಂದ ಬರುತ್ತಿದ್ದ ವೈವಿ­ಧ್ಯಮಯ ಪಕ್ಷಿಗಳಿಗೂ ಈ ಕೆರೆ ಆಶ್ರಯ­ತಾಣವಾಗಿತ್ತು. ರೈತರ ಜೀವನಾಡಿ­ಯಾಗಿದ್ದ ಕೆರೆ ಭತ್ತಕ್ಕೆ ಸದಾ ನೀರು ಒದಗಿಸುತ್ತಿತ್ತು.

ಒಂದು ಕಡೆ ವಿಶಾಲ ಕೆರೆ ನೀರು ಕಾಣಿಸುತ್ತಿದ್ದರೆ ಮತ್ತೊಂದೆಡೆ  ಭತ್ತದ ಹಸಿರು ನೋಡುಗರನ್ನು ಕೈಬೀಸಿ ಕರೆ­ಯುತ್ತಿತ್ತು.   ಕೆಂದೂರ ತಾಂಡೆ ಯುವ­ಕರು ಮೀನುಸಾಗಣೆ ಮಾಡಿ ಜೀವನ ಕಟ್ಟಿಕೊಟ್ಟಿಕೊಂಡಿದ್ದರು. ಕಳೆದ ದಶಕ­ದಿಂದ ಕೆರೆಯಲ್ಲಿ ನೀರು ಇಲ್ಲದೆ ಮೀನು, ಪಕ್ಷಿ ಮಾಯವಾಗಿವೆ. ಮೀನು ಸಾಕುತ್ತಿದ್ದ  ಯುವಕರು ಗೋವಾ, ಉಡು­ಪಿಗೆ ಗುಳೇ ಹೋಗಿದ್ದಾರೆ. ರೈತರು ಭತ್ತ ಬೆಳೆಯು­ವುದಿಲ್ಲ. ಪರ್ಯಾಯವಾಗಿ ಮಳೆಯಾ­ಶ್ರಿತ ಬೆಳೆಗೆ ಅವಲಂಬಿತರಾಗಿದ್ದಾರೆ.

ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ  ಸ್ಥಳೀಯ ಶಾಸಕ ಬಿ.ಬಿ. ಚಿಮ್ಮನಕಟ್ಟಿ  ಅವರು ಕಾಯಕ ಕೆರೆ ಯೋಜನೆಯಲ್ಲಿ ಕೆರೆಯ ಹೂಳು ತೆಗೆಯಲು ₹ 27 ಲಕ್ಷ ಮಂಜೂರಾಗಿತ್ತು. ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಆಡಳಿತದಲ್ಲಿ ಸ್ಥಳೀಯ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಅವರ ಅವಧಿಯಲ್ಲಿ ಕಾಲುವೆಗಳ ದುರಸ್ತಿಗೆ ₹ 50 ಲಕ್ಷ ಮಂಜೂರಾಗಿತ್ತು. ಆದರೆ ಕಾಮಗಾರಿ ಸರಿಯಾಗಿ ನಡೆಯಲಿಲ್ಲ ಎಂಬುದು ಗ್ರಾಮಸ್ಥರ ದೂರು. 2013–14ರಲ್ಲಿ ಮತ್ತೆ ಸಣ್ಣ ನೀರಾವರಿ ಇಲಾಖೆಗೆ ಕೆರೆಯ ಕಾಮ­ಗಾರಿಗೆ ₹ 1 ಕೋಟಿ ಮಂಜೂ­ರಾಗಿದೆ. ಇದೂವರೆಗೂ ಸಣ್ಣ ನೀರಾವರಿ ಇಲಾಖೆ ಯಾವುದೇ ಕಾಮಗಾರಿ ಕೈಗೊಂಡಿಲ್ಲ.

ನೀರಾವರಿ ಇಲಾಖೆ ಪ್ರಕಾರ ಕೆಂದೂರ ಕೆರೆಯ 121.50 ಹೆಕ್ಟೇರ್‌ ಪ್ರದೇಶದಲ್ಲಿ ನೀರು ನಿಲ್ಲುತ್ತದೆ. 64.75 ಚದುರ ಮೀಟರ್‌ ಜಲಾನಯನ ಪ್ರದೇಶದಲ್ಲಿ 25 ದಶಲಕ್ಷ ಘನ ಅಡಿ ನೀರು ಸಂಗ್ರಹಣಾ ಸಾಮಾರ್ಥ್ಯವಿದೆ. ಈ ನೀರಿನಿಂದ 182 ಹೆಕ್ಟೇರ್‌ ಪ್ರದೇಶದ ರೈತರು ನೀರಾವರಿ ಸೌಲಭ್ಯ ಪಡೆಯಬಹುದು.

ವಿಶಾಲ ಕೆರೆಯ ಅಭಿವೃದ್ಧಿಗೆ ಸರ್ಕಾರದ ಅನುದಾನ ‘ಆನೆ ಹೊಟ್ಟಿಗೆ ಅರೆಕಾಸಿನ ಮಜ್ಜೆಗೆ’ಎಂಬಂತೆ ಅನು­ದಾನ ಬಿಡುಗಡೆಯಾಗುತ್ತಿದೆ.  ಹೂಳು ತೆಗೆಯಲು ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು ಕೆಂದೂರ ಕೆರೆ ಹೋರಾಟ ಸಮಿತಿಯ ಒಪ್ಪತ್ತೇಶ್ವರ ಸ್ವಾಮೀಜಿ, ಕೆಂದೂರು ಗ್ರಾಮದ ರೈತರು ಮತ್ತು ಕೆಂದೂರ ತಾಂಡೆಯ ನಾಗರಿಕರು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ.

‘ನೀರಾವರಿ ಸಚಿವ ಎಂ.ಬಿ. ಪಾಟೀಲ ಅವರು ವಿಜಯಪುರ ಜಿಲ್ಲೆಯ ಕೆರೆ ತುಂಬಿಸಿದಂತೆ ಆಲಮಟ್ಟಿ ಜಲಾಶಯದಿಂದ ಬಾಗಲಕೋಟೆ ಜಿಲ್ಲೆಯ ಎಲ್ಲ ಕೆರೆಗಳನ್ನು  ತುಂಬಿಸಬೇಕು’ ಎಂದು ಒಪ್ಪತ್ತೇಶ್ವರ ಶ್ರೀಗಳು ಹೇಳಿದರು.

ಕೆಂದೂರ ಕೆರೆ  ಚಾಲುಕ್ಯರ ಕಾಲದಲ್ಲಿಯೇ ನಿರ್ಮಾಣವಾಗಿದೆ.  1925ರಲ್ಲಿ ಬ್ರಿಟಿಷರು ಈ ಕೆರೆ ದುರಸ್ತಿ ಮಾಡಿಸಿದ ಬಗ್ಗೆ ಇಲ್ಲಿನ ಸೇತುವೆ ಸಮೀಪದ ಕಲ್ಲಿನಲ್ಲಿ ಮಾಹಿತಿ ಇದೆ.

‘ಕೆಂದೂರ ಕೆರೆಯ ಅಭಿವೃದ್ಧಿ ಬಗ್ಗೆ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು ಮತ್ತು ಕೆರೆ ಸಂರಕ್ಷಣಾ ಅಭಿವೃದ್ಧಿ ಪ್ರಾಧಿಕಾರ, ಉಸ್ತುವಾರಿ ಸಚಿವರ ಗಮನಕ್ಕೆ ತರಬೇಕು’ ಎಂದು ಕೆಂದೂರ ಗ್ರಾಮ ಪಂಚಾಯ್ತಿ ಸದಸ್ಯ ಹೇಮಂತ ದೊಡಮನಿ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.