ADVERTISEMENT

‘ಜಿಎಸ್‌ಟಿ ಜಾರಿ: ಜನರಿಗೆ ಆತಂಕ ಬೇಡ’

ಕಾರ್ಯಾಗಾರದಲ್ಲಿ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 6:30 IST
Last Updated 12 ಜುಲೈ 2017, 6:30 IST

ಬಾಗಲಕೋಟೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಬಗ್ಗೆ ಸಾರ್ವಜನಿಕರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ಜಿಎಸ್‌ಟಿ ಬಗ್ಗೆ ತಿಳಿವಳಿಕೆ ಅಗತ್ಯ ಎಂದು ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.

ಇಲ್ಲಿನ ಡಿಸಿಸಿ ಬ್ಯಾಂಕ್‌ ಸಭಾ ಭವನದಲ್ಲಿ ಜಿಲ್ಲೆಯ ಸಹಕಾರಿ ಬ್ಯಾಂಕ್‌ನ ಸಿಬ್ಬಂದಿಗಳಿಗೆ ಆಯೋಜಿಸಿದ್ದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಗೊಂದಲಗಳಿಗೆ ತಜ್ಞರಿಂದ ಸೂಕ್ತ ಪರಿಹಾರ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಹೊಸ ತೆರಿಗೆ ಪದ್ಧತಿ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಮೂಡಿದೆ. ಇಂತಹ ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಹೆಚ್ಚಿನ ತಿಳಿವಳಿಕೆ ಮೂಡಿಸಲು ಸಾಧ್ಯ ಎಂದರು.

ADVERTISEMENT

ಲೆಕ್ಕ ಪರಿಶೋಧಕ ಡಿ.ಆರ್. ವೆಂಕಟೇಶ್‌ ಮಾತನಾಡಿ, ಸಧ್ಯ ಅಸ್ತಿತ್ವದಲ್ಲಿದ್ದ ಬಹುತೇಕ ತೆರಿಗೆಗಳನ್ನು ವಿಲೀನಗೊಳಿಸಿ ಒಂದು ದೇಶ ಒಂದು ತೆರಿಗೆ ಪರಿಕಲ್ಪನೆಯಡಿ ಹೊಸ ಪದ್ಧತಿ ಜಾರಿಗೊಳಿಸಲಾಗಿದೆ. ಹೊಸ ತೆರಿಗೆ ಪದ್ಧತಿ ಪಾರದರ್ಶಕ ಹಾಗೂ ನೇರವಾಗಿರಲಿದೆ.

ಜಿಎಸ್‌ಟಿ ಹಂತ, ಕಾಯ್ದೆಯ ಸ್ವರೂಪ, ನೋಂದಣಿ ಮಾಡುವ ಬಗ್ಗೆ ಎರಡು ವ್ಯವಹಾರಗಳ ತೆರಿಗೆ ಪಾವತಿ ವಿಧಾನ, ಬ್ಯಾಂಕ್‌ನ ವಿವಿಧ ಸೇವೆಗಳಿಗೆ ಜಿಎಸ್‌ಟಿ ಅನ್ವಯ ಹಾಗೂ ಆದಾಯ ಕರದ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.

ಜಿಲ್ಲೆಯ ಸಹಕಾರಿ ಬ್ಯಾಂಕ್‌ ಸಿಬ್ಬಂದಿ, ವ್ಯಾಪಾರಸ್ಥರು, ಗ್ರಾಹಕರು ಹಾಗೂ ಸಾರ್ವಜನಿಕರು ಕಾರ್ಯಾಗಾರ ದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು. ಲೆಕ್ಕ ಪರಿಶೋಧಕರ ಜೊತೆ ಚರ್ಚಿಸುವ ಮೂಲಕ ತಮ್ಮ ಸಂದೇಹ ದೂರವಾಗಿಸಿ, ಪರಿಹಾರ ಕಂಡುಕೊಂಡರು.

ಬಸವೇಶ್ವರ ಬ್ಯಾಂಕ್‌ನ ಉಪಾಧ್ಯಕ್ಷ ಎಂ.ಜಿ.ವಾಲಿ, ನಿರ್ದೇಶಕರಾದ ಎಂ.ಎಸ್.ಏಳೆಮ್ಮಿ, ಎಸ್.ಸಿ. ನಂದಿಕೋಲಮಠ, ಆರ್.ವೈ. ಪಟ್ಟಣದ, ಎಂ.ಎಸ್.ಜೋಳದ, ವಿ.ವಿ.ಶಿರಗಣ್ಣವರ, ಸುನಿತಾ ಪಿ. ಮುಳಗುಂದ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಬಸವರಾಜ ಬಣಗಾರ, ಸಾಲ ವಸೂಲಿ ಸಲಹೆಗಾರ ಪಿ.ಎನ್. ಹಳ್ಳಿಕೇರಿ ಉಪಸ್ಥಿತರಿದ್ದರು. ರತ್ನಾ ಚೊಳಚಗುಡ್ಡ ಪ್ರಾರ್ಥಿಸಿದರು. ಬ್ಯಾಂಕ್‌ನ ಸಲಹೆಗಾರ ಬಿ.ಎಸ್. ನಾವಲಗಿಯವರು ಸ್ವಾಗತಿಸಿದರು. ಎಸ್.ಬಿ.ಬಾದಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.