ADVERTISEMENT

ಜಿಲ್ಲೆಗೆ 3 ಹೊಸ ಅಗ್ನಿಶಾಮಕ ಕೇಂದ್ರ

ಬಾದಾಮಿ, ಗುಳೇದಗುಡ್ಡ, ರಬಕವಿ–ಬನಹಟ್ಟಿಗೆ ತುರ್ತು ಸೇವೆ ವಾಹನ ಮಂಜೂರು

​ಪ್ರಜಾವಾಣಿ ವಾರ್ತೆ
Published 30 ಮೇ 2016, 9:19 IST
Last Updated 30 ಮೇ 2016, 9:19 IST

ಬಾಗಲಕೋಟೆ: ಬಾದಾಮಿ, ಗುಳೇದ ಗುಡ್ಡ ಹಾಗೂ ರಬಕವಿ–ಬನಹಟ್ಟಿ ಸೇರಿದಂತೆ ಜಿಲ್ಲೆಗೆ ಮೂರು ಅಗ್ನಿಶಾಮಕ ಕೇಂದ್ರಗಳು ಮಂಜೂರಾಗಿವೆ. ಜೊತೆಗೆ ಮುಧೋಳದಲ್ಲಿ ಹೊಸ ಅಗ್ನಿಶಾಮಕ ಕಚೇರಿ ನಿರ್ಮಾಣಕ್ಕೆ ಸರ್ಕಾರ ಅನು ದಾನ ನೀಡಿದೆ.

ಹೊಸದಾಗಿ ಮಂಜೂರಾದ ಅಗ್ನಿ ಶಾಮಕ ಕೇಂದ್ರಗಳಲ್ಲಿ ಹಾಗೂ ಮುಧೋಳದಲ್ಲಿ ಅಗ್ನಿಶಾಮಕ ಕಚೇರಿ ಕಟ್ಟಡ ನಿರ್ಮಾಣಕ್ಕೆ ₹ 24 ಕೋಟಿ ಹಣ ವನ್ನು ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮಕ್ಕೆ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ. ಪ್ರತಿ ಕೇಂದ್ರಕ್ಕೆ ತಲಾ ಮೂರು ಅಗ್ನಿಶಮನ ವಾಹನ, 27 ಮಂದಿ ಫೈರ್‌ಮನ್, ಎಂಟು ಮಂದಿ ಚಾಲಕರು ಹಾಗೂ ತಲಾ ಇಬ್ಬರು ಅಧಿಕಾರಿಗಳನ್ನು ನೇಮಿಸಲಾಗಿದೆ.

‘ಬಾದಾಮಿಯ ಎಪಿಎಂಸಿ ಆವರಣ ದಲ್ಲಿ ಇನ್ನೊಂದು ವಾರದಲ್ಲಿ ತಾತ್ಕಾಲಿಕ ಕಚೇರಿ ಆರಂಭವಾಗಲಿದೆ. ಗುಳೇದ ಗುಡ್ಡ ಹಾಗೂ ರಬಕವಿ–ಬನಹಟ್ಟಿಯ ಅಗ್ನಿಶಾಮಕ ಕೇಂದ್ರಗಳು ಜೂನ್‌ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡಲಿವೆ’ ಎಂದು ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಎಚ್.ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ತಲಾ ಎರಡು ಎಕರೆ ಜಮೀನು: ನೂತನ ಅಗ್ನಿಶಾಮಕ ಕೇಂದ್ರಗಳ ನಿರ್ಮಾಣಕ್ಕೆ ಬಾದಾಮಿಯ ಎಪಿಎಂಸಿ ಬಳಿ, ಗುಳೇದ ಗುಡ್ಡದ ಪರ್ವತಿ ಗ್ರಾಮ ಹಾಗೂ ರಬಕವಿ–ಬನಹಟ್ಟಿಯ ಪುರಸಭೆ ಪಕ್ಕದಲ್ಲಿ ತಲಾ ಎರಡು ಎಕರೆ ಜಮೀನು ನೀಡಲಾಗಿದೆ. ಜೊತೆಗೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ತಲಾ 24 ಮನೆಗಳು ನಿರ್ಮಾಣವಾಗಲಿವೆ. ಅದಕ್ಕೆ ಪ್ರತ್ಯೇಕ ವಾಗಿ ಭೂಮಿ ಮಂಜೂರಾಗಿದೆ.

15 ವರ್ಷಗಳಿಂದ ನನೆಗುದಿಗೆ: ಬಾದಾಮಿ ಪಾರಂಪರಿಕ ನಗರವಾಗಿರು ವುದರಿಂದ ಅಲ್ಲಿಗೆ 15 ವರ್ಷಗಳ ಹಿಂದೆ ಯೇ ಅಗ್ನಿಶಾಮಕ ಕೇಂದ್ರ ಮಂಜೂ ರಾಗಿತ್ತು. ಆದರೆ ಕಾರಣಾಂತರ ಗಳಿಂದ ಅದು ಕಾರ್ಯಾರಂಭ ಮಾಡಿರಲಿಲ್ಲ. ಇಲ್ಲಿಯವರೆಗೂ ತಾಲ್ಲೂಕಿನಲ್ಲಿ ಅಗ್ನಿ ಅವ ಘಡ ನಡೆದಾಗ ಹಾಗೂ ಇತರೆ ತುರ್ತು ಸಂದರ್ಭಗಳಲ್ಲಿ ಪಕ್ಕದ ಗದಗ ಜಿಲ್ಲೆ ರೋಣದಿಂದ  ವಾಹನ ಬರುತ್ತಿದ್ದವು.

‘ಅಗ್ನಿ ಅವಘಡದಲ್ಲಿ ಆಸ್ತಿಪಾಸ್ತಿ, ಬೆಳೆ ಹಾನಿಯಾದರೆ ಪರಿಹಾರ ಪಡೆಯಲು ಬಾದಾಮಿ ತಾಲ್ಲೂಕಿನ ಜನತೆ ಗದಗ ಜಿಲ್ಲಾ ಅಗ್ನಿಶಾಮಕ ಅಧಿಕಾರಿಯಿಂದ ಪ್ರಮಾಣ ಪತ್ರ ಪಡೆಯಬೇಕಿತ್ತು. ಇದು ವಿಳಂಬಕ್ಕೆ ಕಾರಣವಾಗುತ್ತಿತ್ತು. ಇದ ಲ್ಲದೇ ಬೇರೆ ಜಿಲ್ಲೆಯಾದ್ದರಿಂದ ಪರಿಹಾರ ಪಡೆಯಲು ತಾಂತ್ರಿಕವಾಗಿ ತೊಂದರೆ ಯಾಗುತ್ತಿತ್ತು. ಇದಕ್ಕೆ ಅಲ್ಲಿನ ರೈತ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತ ಪಡಿಸಿ, ಬಾದಾಮಿಯಲ್ಲಿಯೇ   ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಹಲವು ಬಾರಿ ಪ್ರತಿಭಟನೆ ನಡೆಸಿದ್ದವು.

ಮುಧೋಳ–ಹೊಸ ಕಟ್ಟಡ: ಹಳೆಯ ಕಟ್ಟಡ ಶಿಥಿಲಗೊಂಡಿರುವುದು ಹಾಗೂ ಆಧುನಿಕ ಸವಲತ್ತುಗಳನ್ನು ಕಲ್ಪಿಸಬೇಕಿ ರುವ ಕಾರಣ ಮುಧೋಳದಲ್ಲಿ ₹ 6 ಕೋಟಿ ವೆಚ್ಚದಲ್ಲಿ ಅಗ್ನಿಶಾಮಕ ಕೇಂದ್ರಕ್ಕೆ ನೂತನ ಕಟ್ಟಡ ನಿರ್ಮಿಸಲಾಗುತ್ತಿದೆ. ‘ನಿರಾಣಿ ಸಕ್ಕರೆ ಕಾರ್ಖಾನೆಯ ಪಕ್ಕ ದಲ್ಲಿಯೇ ಎರಡು ಎಕರೆ ಜಾಗದಲ್ಲಿ ಹೊಸ ಕೇಂದ್ರ ತಲೆ ಎತ್ತಲಿದೆ. ಜಿಲ್ಲಾಡ ಳಿತ ಸ್ಥಳೀಯ ಶಾಸಕರ ಬೆಂಬಲದಿಂದಾಗಿ ಜಿಲ್ಲೆಗೆ ಹೊಸ ಅಗ್ನಿಶಾಮಕ ಕೇಂದ್ರಗಳು ಮಂಜೂರಾಗಿವೆ. ಡಿ.ಸಿ. ತುರ್ತಾಗಿ ಜಮೀನು ನೀಡಿದ್ದು ಇನ್ನಷ್ಟು ನೆರವಾ ಯಿತು’ ಎಂದು ರಾಜು ತಿಳಿಸಿದರು.

ಜಿಲ್ಲೆಯಲ್ಲಿ ಹಾಲಿ ಐದು ಅಗ್ನಿಶಾಮಕ ಕೇಂದ್ರಗಳು (ಬಾಗಲಕೋಟೆ, ಬೀಳಗಿ, ಜಮಖಂಡಿ, ಮುಧೋಳ, ಇಳಕಲ್) ಇದ್ದು, ಮೂರು ಹೊಸ ಕೇಂದ್ರ ಗಳೊಂ ದಿಗೆ 8 ಅಗ್ನಿಶಾಮಕ ಕೇಂದ್ರಗಳು ಕಾರ್ಯಾಚರಣೆ ನಡೆಸಲಿವೆ.

₹ 1 ಕೋಟಿ ವೆಚ್ಚದ ಯಂತ್ರ...
ಅಗ್ನಿ ಅವಘಡ, ಕಟ್ಟಡ ಕುಸಿತ ಹಾಗೂ ಪ್ರವಾಹ ಪರಿಸ್ಥಿತಿಯ ವೇಳೆ ಕಾರ್ಯಾಚರಣೆಗೆ ಅನುಕೂಲವಾ ಗುವ ನಿಟ್ಟಿನಲ್ಲಿ ₹ 1 ಕೋಟಿ ವೆಚ್ಚದ ಅತ್ಯಾಧುನಿಕ ರಕ್ಷಣಾ ವಾಹನ (ಎಆರ್‌ವಿ) ಬಾಗಲಕೋಟೆ ಜಿಲ್ಲೆಗೆ ಮಂಜೂರಾಗಿದೆ.

‘ಈ ಭಾಗ ಮುಳುಗಡೆ ಪ್ರದೇಶವಾಗಿರುವುದರಿಂದ ಸರ್ಕಾರ ಹೆಚ್ಚಿನ ಸವಲತ್ತು ನೀಡುತ್ತಿದೆ. ಹೈಡ್ರಾಲಿಕ್ ಪೆಡಲ್‌ಗಳನ್ನು ಹೊಂದಿರುವ ಎಆರ್‌ವಿ ಭಾರೀ ಅನಾಹುತಗಳ ವೇಳೆಯೂ ತಾನಾಗಿಯೇ ದಾರಿ ಮಾಡಿಕೊಂಡು ಹೋಗಿ ತೊಂದರೆಗೆ ಸಿಲುಕಿದವರನ್ನು ರಕ್ಷಿಸಲು ನೆರವಾಗಲಿದೆ. ಲಿಫ್ಟ್ ಸೌಕರ್ಯ ಇದ್ದು, ದೊಡ್ಡ ದೊಡ್ಡ ಕಟ್ಟಡಗಳ ಮೇಲೆ ಸುಲಭವಾಗಿ ಏರಬಹುದಾಗಿದೆ. ಇದರೊಳಗೆ ಬೋಟ್ ಕೂಡ ಇದೆ. ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸಬಹುದಾಗಿದೆ. ಕಾರ್ಯಾಚರಣೆ ವೇಳೆ ಒಂದು ಗಂಟೆ ಕಾಲ ಬೆಂಕಿಯಲ್ಲಿ ನಿಂತರೂ ತೊಂದರೆ ಆಗದ ವಿಶೇಷ ಸೂಟ್ (ಬಟ್ಟೆ) ಇದರಲ್ಲಿ ಇರಲಿದೆ’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಜು ಮಾಹಿತಿ ನೀಡಿದರು.

ಮುಖ್ಯಾಂಶಗಳು:
* ಮುಧೋಳದಲ್ಲಿ ಹೊಸ ಕಚೇರಿ ನಿರ್ಮಾಣ
* ತಲಾ ₹ 6 ಕೋಟಿಯಂತೆ ₹ 24 ಕೋಟಿ ವೆಚ್ಚ
* ಪೊಲೀಸ್ ಗೃಹ ನಿರ್ಮಾಣ ನಿಗಮಕ್ಕೆ ಹೊಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT