ADVERTISEMENT

ಡಿಎಚ್‌ಒ ಹುದ್ದೆ ಪೈಪೋಟಿಗೆ ತೆರೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2017, 6:25 IST
Last Updated 1 ಮಾರ್ಚ್ 2017, 6:25 IST

ಬಾಗಲಕೋಟೆ: ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ (ಡಿಎಚ್‌ಒ) ಡಾ.ರಾಜಕುಮಾರ ಯರಗಲ್ ಹಾಗೂ ಹಿಂದಿನ ಅಧಿಕಾರಿ ಡಾ.ಜಗದೀಶ ನುಚ್ಚಿನ ಅವರನ್ನು ಜಿಲ್ಲೆಯಿಂದ ಬೇರೆಡೆಗೆ ವರ್ಗಾಯಿಸುವಂತೆ ಆರೋಗ್ಯ ಇಲಾಖೆಗೆ  ನಿರ್ದೇಶಿಸಿರುವ ರಾಜ್ಯ ಸರ್ಕಾರ, ಕೂಡಲೇ ಆ ಸ್ಥಾನಕ್ಕೆ ಬೇರೊಬ್ಬ ಅಧಿಕಾರಿ ನೇಮಿಸುವಂತೆ ಸೋಮವಾರ ಆದೇಶಿಸಿದೆ.

ಆರು ತಿಂಗಳ ಕಣ್ಣಾಮುಚ್ಚಾಲೆ: ಈ ಹಿಂದೆ ಬೆಳಗಾವಿ ಜಿಲ್ಲಾ ಆಸ್ಪತ್ರೆ ಸರ್ವೇಕ್ಷಣಾ ಅಧಿಕಾರಿಯಾಗಿದ್ದ ಡಾ.ಜಗದೀಶ ನುಚ್ಚಿನ ಬಡ್ತಿ ಹೊಂದಿ ಕಳೆದ ಜುಲೈ 27ರಂದು ಬಾಗಲಕೋಟೆ ಡಿಎಚ್ಒ ಆಗಿ ನೇಮಕಗೊಂಡಿದ್ದರು. ಇಲ್ಲಿಯೇ ಡಿಎಚ್‌ಒ ಆಗಿದ್ದ ಡಾ.ಯರಗಲ್‌ ವಿಜಯಪುರ ಜಿಲ್ಲಾ ಆಸ್ಪತ್ರೆಯ ಉಪ ಮುಖ್ಯ ವೈದ್ಯಕೀಯ ಅಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು.

ಆದರೆ ನುಚ್ಚಿನ ಅವರ ನೇಮಕಕ್ಕೆ ಕಳೆದ ಆಗಸ್ಟ್ 23ರಂದು ಕೆಎಟಿಯಿಂದ ತಡೆಯಾಜ್ಞೆ ತಂದಿದ್ದ ಡಾ. ಯರಗಲ್ ತಾವೇ ಡಿಎಚ್‌ಒ ಆಗಿ ಮುಂದುವರೆದಿದ್ದರು.

ನಂತರ ಡಾ.ಜಗದೀಶ ನುಚ್ಚಿನ ಸಲ್ಲಿಸಿದ್ದ ಮೇಲ್ಮ ನವಿ ವಿಚಾರಣೆ ನಡೆಸಿದ್ದ ಕೆಎಟಿ ತಡೆಯಾಜ್ಞೆ ತೆರವುಗೊಳಿಸಿದ್ದ ಕಾರಣ ಅಕ್ಟೋಬರ್ 1ರಂದು ಅವರು ಮತ್ತೆ ಡಿಎಚ್ಒ ಆಗಿ ಅಧಿಕಾರ ಸ್ವೀಕರಿಸಿದ್ದರು. ಕೆಎಟಿ ಆದೇಶದ ವಿರುದ್ಧ ಹೈಕೋರ್ಟ್‌ ಮೊರೆ ಹೋಗಿದ್ದ ಡಾ. ಯರಗಲ್‌ ಅಕ್ಟೋಬರ್ 4ರಂದು ಅದಕ್ಕೆ ತಡೆಯಾಜ್ಞೆ ತಂದಿದ್ದರು. ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಪ್ರಕರಣವನ್ನು ಕೆಎಟಿಯಲ್ಲಿಯೇ ಪರಿಹರಿಸಿಕೊಳ್ಳುವಂತೆ ನಿರ್ದೇಶನ ನೀಡಿತ್ತು. ಸತತ ಎರಡೂವರೆ ತಿಂಗಳು ವಿಚಾರಣೆ ನಂತರ ಕೆಎಟಿ ಡಾ.ಜಗದೀಶ ಅವರ ನೇಮಕ ಎತ್ತಿ ಹಿಡಿದಿತ್ತು.

ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯ (ಕೆಎಟಿ) ಆದೇಶದ ಅನ್ವಯ ಕಳೆದ ಅಕ್ಟೋಬರ್ 3ರಂದು ಡಾ.ಜಗದೀಶ ನುಚ್ಚಿನ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದನ್ನು ಪ್ರಶ್ನಿಸಿ ಡಾ.ರಾಜಕುಮಾರ ಯರಗಲ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಆಗ ಮಧ್ಯಂತರ ಆದೇಶ ಹೊರಡಿಸಿದ್ದ ನ್ಯಾಯಾಲಯ ಕೆಎಟಿ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಇದೀಗ ಅಂತಿಮ ಆದೇಶ ಹೊರಡಿಸಿರುವ ನ್ಯಾಯಾಲಯ ಡಾ.ಯರಗಲ್ ಅವರ ಮೇಲ್ಮನವಿ ಅರ್ಜಿ ವಜಾಗೊಳಿಸಿದೆ ಎಂದು ತಿಳಿದುಬಂದಿದೆ.

ಮುಂದಿನ ಹುದ್ದೆ ಸೂಚಿಸುವವರೆಗೂ ಆರೋಗ್ಯ ಇಲಾಖೆ ಆಯುಕ್ತರ ಬಳಿ ವರದಿ ಮಾಡಿಕೊಳ್ಳುವಂತೆ ಇಬ್ಬರೂ ಅಧಿಕಾರಿಗಳಿಗೆ ಆರೋಗ್ಯ ಇಲಾಖೆ ಸೂಚಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಡಾ.ರಾಜಕುಮಾರ ಯರಗಲ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT