ADVERTISEMENT

‘ದೇಶಭಕ್ತಿ ಹೆಸರಲ್ಲಿ ಬಿಜೆಪಿ ರಾಜಕೀಯ’

ಗ್ರಾಮ ಸ್ವರಾಜ್‌ ಜಾಗೃತಿ ಅಭಿಯಾನ: ದಿನೇಶ್ ಗುಂಡೂರಾವ್‌ ಆರೋಪ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 7:29 IST
Last Updated 4 ಮಾರ್ಚ್ 2017, 7:29 IST
ನವನಗರದ ಡಾ. ಬಿ.ಆರ್. ಅಂಬೇಡ್ಕರ್‌ ಭವನದಲ್ಲಿ ಶುಕ್ರವಾರ ನಡೆದ ಗ್ರಾಮ ಸ್ವರಾಜ್‌ ಜಾಗೃತಿ ಅಭಿಯಾನದ ಪ್ರತಿನಿಧಿಗಳ ಕಾರ್ಯಾಗಾರ ಉದ್ಘಾಟಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್‌ ಮಾತನಾಡಿದರು
ನವನಗರದ ಡಾ. ಬಿ.ಆರ್. ಅಂಬೇಡ್ಕರ್‌ ಭವನದಲ್ಲಿ ಶುಕ್ರವಾರ ನಡೆದ ಗ್ರಾಮ ಸ್ವರಾಜ್‌ ಜಾಗೃತಿ ಅಭಿಯಾನದ ಪ್ರತಿನಿಧಿಗಳ ಕಾರ್ಯಾಗಾರ ಉದ್ಘಾಟಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್‌ ಮಾತನಾಡಿದರು   

ಬಾಗಲಕೋಟೆ: ದೇಶಭಕ್ತಿಯನ್ನು ಭಾರತೀಯರು ಬಿಜೆಪಿ ಮುಖಂಡರಿಂದ ಕಲಿಯಬೇಕಿಲ್ಲ. ಆದರೆ ಅದೇ ವಿಷಯ ಮುಂದಿಟ್ಟುಕೊಂಡು ಆ ಪಕ್ಷ  ರಾಜಕೀಯ ಮಾಡುತ್ತಿರುವುದು ದೊಡ್ಡ ದುರಂತ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್‌ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ನವನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಗ್ರಾಮ ಸ್ವರಾಜ್‌ ಜಾಗೃತಿ ಅಭಿಯಾನದ ಪ್ರತಿನಿಧಿಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶ ಭಕ್ತಿ ಬಗ್ಗೆ ಮಾತನಾಡುವ ಬಿಜೆಪಿಯವರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ ದಿನೇಶ್. ‘ದೇಶಭಕ್ತಿ ಮನಸ್ಸಿಲ್ಲಿ ಇರಬೇಕಾದ ವಿಚಾರವೇ ಹೊರತು ಅದು ಪ್ರದರ್ಶನದ ಸರಕು ಅಲ್ಲ ಎಂದು ಹೇಳಿದರು.

ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ದೇಶಕ್ಕೋಸ್ಕರ ವೈಯಕ್ತಿಕ ಬದುಕು ತ್ಯಾಗ ಮಾಡಿದ ಸರ್ದಾರ್‌ ವಲ್ಲಭಬಾಯಿ ಪಟೇಲ್, ಭಗತ್‌ಸಿಂಗ್, ಸುಭಾಷ್ ಚಂದ್ರಬೋಸ್, ಚಂದ್ರಶೇಖರ ಆಜಾದ್, ವೀರ ಸಾವರಕರ್‌ ಮೊದಲಾದವರ ಹೆಸರು ದುರ್ಬಳಕೆ ಮಾಡಿಕೊಂಡು ರಾಜಕೀಯ ಮಾಡಲು ಬಿಜೆಪಿ ಹೊರಟಿರುವುದೇಕೆ  ಎಂದು ಪ್ರಶ್ನಿಸಿದರು.

70 ವರ್ಷಗಳ ಆಡಳಿತಾವಧಿಯಲ್ಲಿ ಕಾಂಗ್ರೆಸ್‌ ಏನು ಮಾಡಿದೆ ಎಂದು ಬಿಜೆಪಿಯವರು ಪ್ರಶ್ನೆ ಮಾಡುತ್ತಿದ್ದಾರೆ. ಪಕ್ಷದ ಅಧಿಕಾರದ ಅವಧಿಯಲ್ಲಿ  ಸಾಕಷ್ಟು ಸಾಧನೆಯಾಗಿದೆ. ಅವುಗಳ ಪಟ್ಟಿ ನೀಡಲು ಸಾಧ್ಯವಿಲ್ಲ.  ನಾಲ್ಕು ವರ್ಷ ಆಡಳಿತ ನಡೆಸಿ ದೇಶದಲ್ಲಿ ಎಲ್ಲ ಕೆಲಸ ನಾವೇ ಮಾಡಿದ್ದೇವೆ ಎಂದು ಬಿಂಬಿಸಲು ಆ ಪಕ್ಷ ಹೊರಟಿದೆ ಎಂದರು.

ರಾಜ್ಯದಲ್ಲಿ ನಾಲ್ಕು ವರ್ಷದಿಂದ ಆಡಳಿತ ನಡೆಸುತ್ತಿರುವ ನಮ್ಮ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಚುನಾವಣಾ ಪ್ರಣಾಳಿಕೆಯಲ್ಲಿ 170 ಭರವಸೆ ನೀಡಲಾಗಿತ್ತು, ಅವುಗಳಲ್ಲಿ 130 ಪೂರೈಸಿದ್ದೇವೆ. ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಅವರ ನಂಬಿಕೆ ಏನಿದ್ದರೂ ಆರ್‌ಎಸ್‌ಎಸ್‌ ಮೇಲೆ. ಆ ಬಗ್ಗೆ ಮಾತನಾಡಿದರೆ ದೇಶ ವಿರೋಧಿ ಪಟ್ಟ ಕಟ್ಟುತ್ತಾರೆ ಎಂದು ದೂರಿದರು.

ಶಾಸಕರಾದ ಜೆ.ಟಿ. ಪಾಟೀಲ, ಸಿದ್ದು ನ್ಯಾಮಗೌಡ, ಎಸ್.ಜಿ. ನಂಜಯ್ಯನಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಂಗ್ರೆಸ್ ಸಮಿತಿ ಜಿಲ್ಲಾ ಘಟಕ ಅಧ್ಯಕ್ಷ ಎಂ.ಬಿ. ಸೌದಾಗರ, ಮಾಜಿ ಶಾಸಕ ಡಿ.ಆರ್. ಪಾಟೀಲ, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಬಿಟಿಡಿಎ ಅಧ್ಯಕ್ಷ ಎ.ಡಿ. ಮೊಕಾಶಿ, ಡಾ.ಎಂ.ಜಿ.ಕಿತ್ತಲಿ, ಸುಶೀಲಕುಮಾರ ಬೆಳಗಲಿ ಹಾಜರಿದ್ದರು

‘ಈಗಲೇ ಜೈಲಿಗೆ ಕಳುಹಿಸಲಿ’
ನಾನು ಮುಖ್ಯಮಂತ್ರಿ ಆದರೆ 24 ಗಂಟೆಯಲ್ಲಿ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳಿಸುತ್ತೇನೆ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಅವರು ಅಲ್ಲಿಯವರೆಗೂ ಕಾಯುವ ಅಗತ್ಯವಿಲ್ಲ. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಅಧಿಕಾರದಲ್ಲಿದೆ. ತಪ್ಪು ಮಾಡಿದ್ದರೆ ತನಿಖೆ ನಡೆಸಿ ಈಗಲೇ ಜೈಲಿಗೆ ಕಳುಹಿಸಲಿ’ ಎಂದು ಸವಾಲು ಹಾಕಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT