ADVERTISEMENT

ನೀರು ಹಂಚಿಕೆಯಲ್ಲಿ ತಾರತಮ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 7:26 IST
Last Updated 22 ಏಪ್ರಿಲ್ 2017, 7:26 IST
ಮಹಾಲಿಂಗಪುರ: ‘ಮುಧೋಳ ತಾಲ್ಲೂಕು ವ್ಯಾಪ್ತಿಯ ರೈತರಿಗೆ ಹಾಗೂ ಜಾನುವಾರಿಗೆ ಕುಡಿಯುವ ನೀರಿನ ಕೊರತೆಯಾಗಿದೆ. ಬೆಳಗಾವಿ ಜಿಲ್ಲೆಗೆ ಮಾತ್ರ ನೀರು ಹರಿಸಿದ ಅಧಿಕಾರಿಗಳ ಹಾಗೂ ಉಸ್ತುವಾರಿ ಸಚಿವೆ ಉಮಾಶ್ರೀ ಅವರ ಕ್ರಮ ಖಂಡಿಸಿ ಶನಿವಾರ ಏ.22ರಂದು ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ’ ಎಂದು ಮಾಜಿ ಶಾಸಕ ಸಿದ್ದು ಸವದಿ ಹೇಳಿದರು.
 
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಘಟಪ್ರಭೆಯ ನದಿ ಪಾತ್ರದಲ್ಲಿ ಬರುವ ಎರಡೂ ಜಿಲ್ಲೆಗಳಿಗೆ ನದಿ ಹಾಗೂ ಕಾಲುವೆ ಮೂಲಕ ನೀರು ಹರಿಸಿ ಮುಧೋಳ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ವ್ಯವಸ್ಥೆ ಮಾಡಿದ್ದರೆ ಅಂತರ್ಜಲದ ಮಟ್ಟ ಹೆಚ್ಚುತ್ತಿತ್ತು.
 
ಬತ್ತಿ ಹೋಗುತ್ತಿರುವ ಕೊಳವೆ ಬಾವಿಗಳು ಕೂಡ ಉಳಿದುಕೊಳ್ಳುತ್ತಿದ್ದವು. ಈಗ ಕೇವಲ ನದಿಯಲ್ಲಿ ಮಾತ್ರ ನೀರು ಹರಿಸಿ ಬೆಳಗಾವಿ ಜಿಲ್ಲೆಯ ರೈತರಿಗೆ ಮಾತ್ರ ಉಪಯೋಗಿಸಲು ಸುತ್ತೋಲೆ ಹೊರಡಿಸಿದ ಸರ್ಕಾರದ ಕ್ರಮ ಖಂಡನೀಯ’ ಎಂದು ಅಭಿಪ್ರಾಯಪಟ್ಟರು.
 
ಮುಧೋಳ ನಿಪ್ಪಾಣಿ ಹಾಗೂ ಜಾಂಬೋಟಿ ರಬಕವಿ ಹೆದ್ದಾರಿಗಳನ್ನು ಬಂದ್ ಮಾಡಿ ರಾಸ್ತಾ ರೋಕೋ ನಡೆಸ ಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ತೇರದಾಳ ಮತಕ್ಷೇತ್ರದ ಗ್ರಾಮೀಣ ಮಂಡಳ ಅಧ್ಯಕ್ಷ ಬಸನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಸುರೇಶ ಅಕ್ಕಿವಾಡ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಪುರಸಭೆ ಸದಸ್ಯ ಶಿವಲಿಂಗಪ್ಪ ಘಂಟಿ, ಸಂತೋಷ ಹುದ್ದಾರ, ಶ್ರೀಮಂತ ಹಳ್ಳಿ, ಈರಣ್ಣ ದಿನ್ನಿಮನಿ, ಹನಮಂತರಾವ ಜಮಾದಾರ ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.