ADVERTISEMENT

ಪರವಾನಗಿ ರದ್ದುಗೊಳಿಸಲು ಸೂಚನೆ

ಕನ್ನಡ ನಾಮಫಲಕ ಅಳವಡಿಸದ ಅಂಗಡಿಗಳ ಮೇಲೆ 15 ದಿನಗಳ ಒಳಗಾಗಿ ಕ್ರಮ: ಪ್ರಾಧಿಕಾರ

​ಪ್ರಜಾವಾಣಿ ವಾರ್ತೆ
Published 25 ಮೇ 2017, 9:59 IST
Last Updated 25 ಮೇ 2017, 9:59 IST
ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಧಿಕಾರಿಗಳ ಸಭೆ ನಡೆಸಿದರು
ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಧಿಕಾರಿಗಳ ಸಭೆ ನಡೆಸಿದರು   

ಬಾಗಲಕೋಟೆ: ಜಿಲ್ಲೆಯಲ್ಲಿ ನಗರಸಭೆ, ಪಟ್ಟಣ ಪಂಚಾಯ್ತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಅಂಗಡಿ–ಮುಂಗಟ್ಟುಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಕೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ  ಮಾತನಾಡಿದ ಅವರು, ‘ಅಂಗಡಿಗಳ ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸ ಬೇಕು. ಅದನ್ನು ಪಾಲಿಸದ ವರ ಪರವಾನಗಿ ರದ್ದುಗೊಳಿಸಬೇಕು. ಈ ಬಗ್ಗೆ ಕ್ರಮ ಕೈಗೊಂಡು 15 ದಿನಗಳೊಳಗಾಗಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಂತರ್ಜಾಲ ಪುಟಕ್ಕೆ ಸಂಬಂಧಿಸಿ ದಂತೆ ಪ್ರಧಾನ ಪುಟವನ್ನು ಕನ್ನಡದ ಲ್ಲಿಯೇ ರೂಪಿಸಲಾಗಿದೆ. ಅಂಗಡಿ ಮುಂಗಟ್ಟು, ಹೋಟೆಲ್, ರೆಸಾರ್ಟ್‌ಗಳಲ್ಲಿ ಕನ್ನಡವನ್ನು ಕಡ್ಡಾಯ ವಾಗಿ ಬಳಸಬೇಕಿದೆ. ಕನ್ನಡ ಕಣ್ಣಿಗೆ ಕಾಣ ಬೇಕು. ಕಿವಿಗೆ ಕೇಳಬೇಕು. ಹಾಗಾದಾಗ ಮಾತ್ರ ಕನ್ನಡ ಉಳಿಯಲು ಸಾಧ್ಯ ಎಂದು ಹೇಳಿದ ಅವರು‘ ಕನ್ನಡ ಭಾಷೆಯನ್ನು ಆಡಳಿತದ ಎಲ್ಲಾ ಹಂತದಲ್ಲಿ ಸಂಪೂರ್ಣ ವಾಗಿ ಅನುಷ್ಠಾನಗೊಳಿಸಲಾಗುತ್ತಿದೆ.

ಕಳೆದ  ಡಿಸೆಂಬರ್‌ ತಿಂಗಳಲ್ಲಿ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಆಡಳಿತದಲ್ಲಿ ಕನ್ನಡ ಅನುಷ್ಠಾನ ಕುರಿತು ನೀಡಿದ್ದ ಸೂಚನೆಗಳನ್ನು ಜಿಲ್ಲಾಡಳಿತ ಪಾಲನೆ ಮಾಡಿದೆ’ ಎಂದು ಸಂತಸ ವ್ಯಕ್ತಪಡಿಸಿದರು. ಕನ್ನಡ ಭಾಷೆ ಮತ್ತು ಕನ್ನಡಿಗರ ಹಿತಾಸಕ್ತಿಯನ್ನು ಕಾನೂನಿನ ಅನ್ವಯ ರಕ್ಷಿಸುವ ಜೊತೆಗೆ ಕನ್ನಡ ಅನುಷ್ಠಾನಕ್ಕೆ ಬದ್ಧವಾಗಿರುವುದಾಗಿ’ ಇದೇ ವೇಳೆ ಸ್ಪಷ್ಟಪಡಿಸಿದರು.

ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ 11 ಅಂಶಗಳನ್ನೊಳಗೊಂಡ ಮಾಹಿತಿ ನೀಡುವಂತೆ ಕೋರಿ ಕಳೆದ ಫೆಬ್ರವರಿ ಯಲ್ಲಿಯೇ ಪತ್ರ ಬರೆಯಲಾಗಿದೆ. ಇಲ್ಲಿಯವರೆಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿೇರ್ದೇಶಕರು ಯಾವುದೇ ಮಾಹಿತಿ ನೀಡಿಲ್ಲ. ಜೊತೆಗೆ ಮಾಸಿಕ ಕನ್ನಡ ಅನುಷ್ಠಾನ ಪ್ರಗತಿಯ ಮಾಹಿತಿ ಕೂಡ ಬಂದಿರುವುದಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಜರುಗಿಸಿಲ್ಲ.

ಇದು ಸಹಾಯಕ ನಿರ್ದೇಶಕರು ಕರ್ತವ್ಯ ಲೋಪ ಆಗುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.  ಕಡ್ಡಾಯವಾಗಿ ಮಾಸಿಕ ವರದಿ ಪಡೆದು ಪ್ರಾಧಿಕಾರಕ್ಕೆ ಪ್ರತಿ ತಿಂಗಳ 5ನೇ ತಾರೀಖಿನ ಒಳಗಾಗಿ ಸಲ್ಲಿಸುವಂತೆ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು. ಸಲ್ಲಿಸುವ ವರದಿ ವಸ್ತುನಿಷ್ಠವಾಗಿರಬೇಕು.

ಇಲ್ಲವಾದಲ್ಲಿ ತಪ್ಪು ಮಾಹಿತಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಕೆಡಿಪಿ ನಡಾವಳಿಯ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಜಿಲ್ಲಾಧಿಕಾರಿ ಆ ನಿಟ್ಟಿನಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಕಾಲ ಮಿತಿಯಲ್ಲಿ ಕನ್ನಡ ಅನುಷ್ಠಾನ ಸಭೆಗಳು ನಡೆಸಿ ವರದಿ ಸಲ್ಲಿಸಬೇಕು ಎಂದರು.

ಜಿಲ್ಲೆಯಲ್ಲಿ ದುರಸ್ಥಿಯಲ್ಲಿರುವ ಸರ್ಕಾರಿ ಶಾಲೆ ಕಟ್ಟಡಗಳು ಎಷ್ಟು? ಎಂಬ ಪ್ರಶ್ನೆಗೆ ಉತ್ತರಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಎಸ್. ಕರಿಚಣ್ಣವರ 599 ಶಾಲೆಗಳಲ್ಲಿ ದುರಸ್ಥಿ ಹಂತದಲ್ಲಿವೆ.

ಅದರಲ್ಲಿ ನೀಲಾನಗರದಲ್ಲಿ ಪೀಠೋಪಕರಣಗಳ ವ್ಯವಸ್ಥೆ ಇಲ್ಲ, ಪೀಠೋಪಕರಣಕ್ಕೆ ಅನುದಾನ ಮಂಜೂರಾಗಿದ್ದರೂ ವಿತರಣೆ ಆಗಿಲ್ಲ, ರಕ್ಷಣಾ ಗೋಡೆ, ಶೌಚಾಲಯ, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ ಇಲ್ಲ, ಮುಧೋಳ ತಾಲ್ಲೂಕಿನ ಕೆಲವು ಪ್ರೌಢಶಾಲೆಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ವಿಜ್ಞಾನ ಶಿಕ್ಷಕರ ಕೊರತೆ ಇದೆ ಎಂದು ಸಭೆಗೆ ತಿಳಿಸಿದರು.

ಈ ಬಗ್ಗೆ ಇಲಾಖೆ ಯಾವ ಕ್ರಮ ಕೈಗೊಂಡಿದೆ ಎಂದು ಕೇಳಿದಾಗ, ‘ಅತಿಥಿ ಶಿಕ್ಷಕರನ್ನು ಸೆಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ನೇಮಿಸುವುದರಿಂದ ಶಿಕ್ಷಕರ ಕೊರತೆ ಯಾಗುತ್ತಿದೆ. ಇದರಿಂದ ಮಕ್ಕಳ ದಾಖಲಾತಿ ಪ್ರಮಾಣ ಕುಂಠಿತವಾಗುತ್ತಿದೆ’ ಎಂದು ಸಭೆಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎ. ಮೇಘಣ್ಣವರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ, ಹೆಚ್ಚು ವರಿ ಜಿಲ್ಲಾಧಿಕಾರಿ ಅಶೋಕ ದುಡ ಗುಂಟಿ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಮಹಾಂತೇಶ ಹಟ್ಟಿ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು, ತಹಶೀಲ್ದಾರರು ಉಪಸ್ಥಿತರಿದ್ದರು.

‘ಹೊರ ರಾಜ್ಯದ ಕಾರ್ಮಿಕರು: ವರದಿ ನೀಡಿ’
ಜಿಲ್ಲೆಯ ಗಣಿ ಪ್ರದೇಶ ಮತ್ತು ಸಿಮೆಂಟ್ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರು ವವರಲ್ಲಿ ಬಹುತೇಕರು ಕನ್ನಡೇತರ ಇದ್ದಾರೆ ಎಂಬ ದೂರುಗಳು ಬಂದಿವೆ. ಈ ಬಗ್ಗೆ ಪರಿಸರ ಇಲಾಖೆ, ಗಣಿ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ನಿಯಮಾನು ಸಾರ ಕ್ರಮ ಕೈಗೊಂಡು 15 ದಿನಗಳೊಳಗಾಗಿ ವರದಿ ಸಲ್ಲಿಸಬೇಕು.

ADVERTISEMENT

ತಪ್ಪಿದಲ್ಲಿ ನಾನೇ ಭೇಟಿ ನೀಡಿ ಕ್ರಮಕ್ಕೆ ಮುಂದಾ ಗುವೆ ಎಂದು ಎಚ್ಚರಿಸಿದರು. ಜೊತೆಗೆ ಕಾರ್ಖಾನೆಗಳಲ್ಲಿ ಕನ್ನಡ ನಾಮಫಲಕ ಗಳನ್ನು ಕಡ್ಡಾಯವಾಗಿ ಅಳವಡಿಸಲು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.