ADVERTISEMENT

ಪಾರಂಪರಿಕ ವೈದ್ಯರ ಸಮಾವೇಶಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 6:02 IST
Last Updated 19 ಏಪ್ರಿಲ್ 2017, 6:02 IST
ಕೂಡಲಸಂಗಮದಲ್ಲಿ ನಡೆದ ಪಾರಂಪರಿಕ ವೈದ್ಯರ ರಾಷ್ಟ್ರೀಯ ಸಮಾವೇಶದಲ್ಲಿ ರಾಮಿಗೌಡ, ಸಿ.ಪ್ರಶಾಂತ ಬಾಗಡೆ, ಅಣ್ಣಿ ಗೋಣೆ ಬಸಪ್ಪ, ಶ್ರೀಧರ ದೇಸಾಯಿ ಅವರಿಗೆ ಪಾರಂಪರಿಕ ವೈದ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಕೂಡಲಸಂಗಮದಲ್ಲಿ ನಡೆದ ಪಾರಂಪರಿಕ ವೈದ್ಯರ ರಾಷ್ಟ್ರೀಯ ಸಮಾವೇಶದಲ್ಲಿ ರಾಮಿಗೌಡ, ಸಿ.ಪ್ರಶಾಂತ ಬಾಗಡೆ, ಅಣ್ಣಿ ಗೋಣೆ ಬಸಪ್ಪ, ಶ್ರೀಧರ ದೇಸಾಯಿ ಅವರಿಗೆ ಪಾರಂಪರಿಕ ವೈದ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು   

ಕೂಡಲಸಂಗಮ: ಹಿರಿಯ ಪಾರಂಪರಿಕ ವೈದ್ಯರಿಗೆ ಸರ್ಕಾರ ಮಾಸಾಶನ ಕೊಡುವ ಕಾರ್ಯ ಮಾಡಬೇಕು ಎಂದು ಕರ್ನಾಟಕದ ಪಾರಂಪರಿಕ ವೈದ್ಯ ಪರಿಷತ್ ಅಧ್ಯಕ್ಷ ನೇರ್ಲಿಗೆ ಗುರುಸಿದ್ದಪ್ಪ ಹೇಳಿದರು.ಕೂಡಲಸಂಗಮ ಸಭಾ ಭವನದ ವೈದ್ಯ ಸಂಗಣ್ಣ ವೇದಿಕೆಯಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಪಾರಂಪರಿಕ ವೈದ್ಯ ಸಮ್ಮೇಳನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ಎಲ್ಲ ಕ್ಷೇತ್ರದವರಿಗೆ ನೀಡುತ್ತದೆ. ಆದರೆ ಪ್ರಾಚೀನ ಕಾಲದಿಂದ ಸಮಾಜ ಸೇವೆ ಮಾಡುತ್ತಿರುವ ಪಾರಂಪರಿಕ ವೈದ್ಯರನ್ನು ಪರಿಗಣಿಸುತ್ತಿಲ್ಲ. ಕೂಡಲೇ ಸರ್ಕಾರ ಪಾರಂಪರಿಕ ವೈದ್ಯರಿಗೂ ರಾಜ್ಯೋತ್ಸವ ಪ್ರಶಸ್ತಿ ಬರುವ ವರ್ಷದಿಂದ ಕೊಡುವ ಕಾರ್ಯ ಮಾಡಬೇಕು. ಪ್ರಾಚೀನ ಕಾಲದಿಂದ ಪಾರಂಪರಿಕ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೈದ್ಯರನ್ನು ಗುರುತಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿಲ್ಲ. ಇಂತಹ ಕಾರ್ಯವನ್ನು ನಮ್ಮ ಪಾರಂಪರಿಕ ವೈದ್ಯ ಪರಿಷತ್ತಿನಿಂದ ಮಾಡುತ್ತಿದ್ದೇವೆ. ದೇಶದ ಎಲ್ಲ ಸಂಸ್ಕೃತಿ, ಪರಂಪರೆಗೆ ಸರ್ಕಾರ ಒತ್ತು ಕೊಡುತ್ತಿದೆ. ಆದರೆ, ಆರೋಗ್ಯ ಸೇವೆಯಲ್ಲಿ ತೊಡಗಿದ ನಾಟಿ ವೈದ್ಯರ ಸಂಸ್ಕೃತಿಗೆ ಆದ್ಯತೆ ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಲೋಕಸಭಾ ಸದಸ್ಯ ಪಿ.ಸಿ.ಗದ್ದಿಗೌಡರ ಸಮಾರಂಭ ಉದ್ಘಾಟಿಸಿ ಮಾತನಾಡಿ, ನೈಸರ್ಗಿಕ ಆಹಾರ ಪದ್ಧತಿಯಿಂದ ಉತ್ತಮ ಆರೋಗ್ಯ ಸಿಗುತ್ತದೆ. ಕೃತಕ ಆಹಾರ ಪದಾರ್ಥ ಬಳಕೆಯಿಂದ ಆರೋಗ್ಯ ಕೆಡುವುದು. ಪಾರಂಪರಿಕ ವೈದ್ಯರಿಗೆ ಸಿಗಬೇಕಾದ ಸೌಲಭ್ಯ ಕುರಿತು ಪ್ರಧಾನಿಗಳ ಗಮನಕ್ಕೆ ತರುವ ಕಾರ್ಯ ಮಾಡುತ್ತೆನೆ ಎಂದರು.

ADVERTISEMENT

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, 20 ವರ್ಷಗಳ ಹಿಂದೆ ಕೃತಕ ಆಹಾರ ಪದ್ಧತಿಗೆ ಮಾರು ಹೋದ ಜನರಿಗೆ ಇಂದು ದೇಸಿ ಆಹಾರ ಪದ್ಧತಿಯ ಮಹತ್ವ ಅರಿವಾಗುತ್ತಿದೆ. ಪ್ರಾಚೀನ ಕಾಲದಿಂದಲೂ ನಾಟಿ ಚಿಕಿತ್ಸೆಯ ಮೂಲಕ ಜನರ ಸೇವೆ ಮಾಡುತ್ತಿರುವ ಪಾರಂಪರಿಕ ವೈದ್ಯರನ್ನು ಗುರುತಿಸಿ ಸೂಕ್ತ ಸೌಲಭ್ಯ ಕೊಡುವ ಕಾರ್ಯವನ್ನು ಸರ್ಕಾರ ಮಾಡಬೇಕು ಎಂದರು.

ಇಳಕಲ್‌ ಚಿತ್ತರಗಿ ಸಂಸ್ಥಾನಮಠದ ಗುರುಮಾಹಾಂತ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಹಾಗೂ ಪಾರಂಪರಿಕ ವೈದ್ಯ  ಪರಿಷತ್ತಿನ ಗೌರವಾಧ್ಯಕ್ಷ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿದರು.ಇಳಕಲ್‌ ಚಿತ್ತರಗಿ ಮಠದ ಡಾ.ಮಹಾಂತ ಸ್ವಾಮೀಜಿ, ಕಲಬುರ್ಗಿ ಜಿಲ್ಲೆ ಬಂದರವಾಡ ಸುರಗೀಮಠದ ಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಶಿರೋಡ ರಾಮಾರೂಢ ಮಠದ ಶಂಖಾರೂಢ ಸ್ವಾಮೀಜಿ, ಇರಕಲ್ ಶಿವಶಕ್ತಿ ಪೀಠದ ಬಸವ ಪ್ರಸಾದ ಸ್ವಾಮೀಜಿ, ಬಸವ ಬೃಂಗೇಶ ಸ್ವಾಮೀಜಿ, ಸತ್ಯನಾರಾಯಣ ಭಟ್, ಎಂ.ಗೋಪಾಲಕೃಷ್ಣ, ಕೆ.ಪ್ರಕಾಶ ಮುಂತಾದವರು ಇದ್ದರು. ಸಮಾರಂಭದಲ್ಲಿ ಬಾಡೆನೂರು ಶಾಂತವೀರಪ್ಪ ಸಂಪಾದನೆಯ ಪಾರಂಪರಿಕ ವೈದ್ಯ ಮಾಹಿತಿ ಕೋಶ ಹಾಗೂ ನಾಟಿ ವೈದ್ಯ ವಿಹಾರ ಪುಸಕ್ತವನ್ನು ಬಿಡುಗಡೆ ಮಾಡಲಾಯಿತು.  500ಕ್ಕೂ ಅಧಿಕ ಪಾರಂಪರಿಕ ವೈದ್ಯರು ಸಮಾರಂಭದಲ್ಲಿ  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.