ADVERTISEMENT

ಪ್ರಾಣ ಭಯದಲ್ಲೇ ‘ಆಸರೆ’ ಮನೆಗಳಲ್ಲಿ ವಾಸ!

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 8:47 IST
Last Updated 29 ಏಪ್ರಿಲ್ 2017, 8:47 IST

ಬಾದಾಮಿ: ತಾಲ್ಲೂಕಿನ ಎಸ್‌.ಕೆ. ಆಲೂರ ಗ್ರಾಮದಲ್ಲಿ ಆಸರೆ ಮನೆಗಳ ಗೋಡೆಗಳು ಬಿರುಕು ಬಿಟ್ಟು ನಿವಾಸಿಗಳು ‘ಆಸರೆ’ ಯಿಂದ ವಂಚಿತರಾಗಿದ್ದಾರೆ. ಬಿರುಕು ಬಿಟ್ಟ ಮನೆಯಲ್ಲಿ ವಾಸವಾಗಿದ್ದ ಕುಟುಂಬವು ಜೀವದ ಭಯದಿಂದ ಬದುಕನ್ನು ನೂಕುತ್ತಿದ್ದಾರೆ.ಎಸ್‌.ಕೆ. ಆಲೂರ ಗ್ರಾಮದ ಬಿರುಕುಬಿಟ್ಟ ಆಸರೆ ಮನೆಯಲ್ಲಿ ಅನೇಕ ಕುಟುಂಬಗಳು  ವಾಸವಾಗಿದೆ. ಯಾವಾಗ ಗೋಡೆಗಳು ಬೀಳುತ್ತಿದೆಯೋ ತಿಳಿದಿಲ್ಲ. ಪ್ರಾಣ ಭಯದಿಂದ ಇಲ್ಲಿನ ಕುಟುಂಬ ಗಳು ವಾಸವಾಗಿದ್ದು ಕಂಡು ಬಂದಿತು.

ಬಿರುಕುಬಿಟ್ಟ ಮನೆಯಲ್ಲಿ ಭೀಮಪ್ಪ ಹಿರಲವರ ಕುಟುಂಬದ ಮಕ್ಕಳು ಸೇರಿದಂತೆ ಐದು ಜನ ಇಲ್ಲಿ ವಾಸವಾಗಿ ದ್ದಾರೆ. ಬಿರುಕುಬಿಟ್ಟ ಗೋಡೆಯ ಪಕ್ಕ ದಲ್ಲಿಯೇ ಮಗುವೊಂದು ಮಲಗಿತ್ತು.ಆಸರೆ ಮನೆಗೆ ವಿದ್ಯುತ್‌ ಪೂರೈಕೆಗೆ ಫಿಟಿಂಗ್‌ ಮಾಡಿಲ್ಲ. ನೇರವಾಗಿ ವಿದ್ಯುತ್‌ ತಂತಿಗೆ ಕೊಂಡಿ ಮೂಲಕ ಒಂದು ಲೈಟ್‌ ಹಾಕಿಕೊಂಡಿದ್ದೇವೆ ಎಂದರು. ಮನೆ ದುರಸ್ತಿಗೆ  ಗ್ರಾಮ ಪಂಚಾಯ್ತಿಗೆ  ತಿಳಿಸಿದೆ ಇದುವರೆಗೂ ಯಾರೂ ಬಂದಿಲ್ಲ ಎಂದು ನಿವಾಸಿ ಭೀಮಪ್ಪ ಹೇಳಿದರು.

‘ಮಳಿ ಬಂದು ಹೊಳಿಯಾಗ ನಮ್ಮ ಮನಿ ಎಲ್ಲಾ ಕೊಚಿಕೊಂಡು ಹೋದೂವ್ರಿ. ಸರ್ಕಾರದವರು ಕಟ್ಟಿಸಿದ ಮನ್ಯಾಗ ಅದೀವ್ರಿ. ಆದರೆ ಎಲ್ಲಾ ಮನಿ ಗೂಳು ಕಟ್ಟಿದ ವರ್ಸದಾಗ ಬಿರುಕು ಬಿಟ್ಟಾವ. ಬಿರುಕು ಬಿಟ್ಟ ಮನ್ಯಾಗ ಇರತೀವಿ ’ಎಂದು ವೃದ್ಧ ಹನುಮಂತಪ್ಪ ಹೇಳಿದರು.‘ಮನಿ ಮಗ್ಗಲ ಸಂಡಾಸ ಕೋಲಿ ಕಟ್ಯಾರಿ ಎದುಕೂ ಬಾರದಂಗ ಆಗ್ಯಾವ. ಎಲ್ಲಾ ಬಿದ್ದು ಕಿತುಕೊಂಡು ಹೋಗ್ಯಾವ ಬಹಿರ್ದೆಸೆ ಹೊರಗ ಬಯಲಾಗ ಹೊಕ್ಕಿವ್ರಿ’ ಎಂದು ನಿವಾಸಿಗಳು ಹೇಳಿದರು.

ADVERTISEMENT

ಆಸರೆ ಮನೆಗಳ ರಸ್ತೆಯೆಲ್ಲ ಜಾಲಿ ಮುಳ್ಳಿನ ಕಂಟಿಗಳು ಸ್ವಾಗತಿಸುತ್ತವೆ. ಎಲ್ಲೆಂದರಲ್ಲಿ ರಸ್ತೆಯಲ್ಲಿ ಮುಳ್ಳುಗಳೇ ತುಂಬಿವೆ. ಮನೆಯ ಪಕ್ಕದಲ್ಲಿ ಶೌಚಾ ಲಯಗಳನ್ನು ನಿರ್ಮಿಸಿದ್ದಾರೆ. ಇಲ್ಲಿ ಮೆಕ್ಕೆ ಜೋಳದ ಕಣಿಕೆಯನ್ನು ಹಾಕಲಾಗಿದೆ. ಕೆಲವೆಡೆ ಶೌಚಾಲಯದ ಬಾಗಿಲು ಮಾತ್ರ ಉಳಿದಿರುವುದನ್ನು ವೀಕ್ಷಿಸಿಬಹುದು.  2007 ಮತ್ತು 2009ರಲ್ಲಿ ಮಲಪ್ರಭಾ ನದಿ ನೆರೆ ಪ್ರವಾಹದಿಂದ ನದಿ ದಂಡೆಯ ಮೇಲಿನ ಜನರು ನಲುಗಿದ್ದರು.  ಗ್ರಾಮಗಳೆಲ್ಲ ಸಂಪೂರ್ಣ ವಾಗಿ ಜಲಾವೃತವಾಗಿ ತಗಡಿನ ಶೆಡ್‌ನಲ್ಲಿ ವಾಸವಾಗಿದ್ದನ್ನು ಸ್ಮರಿಸಬಹುದು.

ಬಿಜೆಪಿ ಸರ್ಕಾರದ ಆಡಳಿತದಲ್ಲಿ 2010ರಲ್ಲಿ ನದಿದಂಡೆಯ ಮೇಲಿನ ಗ್ರಾಮಗಳಿಗೆ ಸರ್ಕಾರ ಮತ್ತು ದಾನಿಗಳ ನೆರವಿನಿಂದ  ನಿರಾಶ್ರಿತರಿಗೆ ‘ಆಸರೆ’ ಮನೆಗಳನ್ನು ನಿರ್ಮಿಸಲಾಯಿತು.ತಾಲ್ಲೂಕಿನಲ್ಲಿ ಮಲಪ್ರಭಾ ನದಿ ದಂಡೆಯ ಮೇಲಿನ 34 ಗ್ರಾಮಗಳಿಗೆ ‘ಆಸರೆ ಮನೆಗಳನ್ನು ನಿರ್ಮಿಸಿ ಅವರಿಗೆ ಕಂದಾಯ ಇಲಾಖೆಯಿಂದ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ.

ಆಸರೆ ಮನೆಗಳು ನಿರ್ಮಾಣ ಗೊಂಡವು ಆದರೆ ನಿವಾಸಿಗಳು ಮೂಲ ಸೌಕರ್ಯದಿಂದ ವಂಚಿತರಾಗಿದ್ದಾರೆ. ಆಸರೆ ಮನೆಗಳು ಜಾಲಿ ಗಿಡಗಳಿಂದ ಆವೃತವಾಗಿವೆ. ಇಲ್ಲಿ ಸರಿಯಾಗಿ ರಸ್ತೆ, ಚರಂಡಿ, ಕುಡಿಯುವ ನೀರು ಮತ್ತು ವಿದ್ಯುತ್‌ ಪೂರೈಕೆ ಸರಿಯಾಗಿಲ್ಲ ಎಂದು ನಿವಾಸಿಗಳು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.