ADVERTISEMENT

ಬಡತನದ ಬೇಗೆಯಲ್ಲಿ ಅರಳಿದ ಪ್ರತಿಭೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 6:37 IST
Last Updated 25 ಏಪ್ರಿಲ್ 2017, 6:37 IST
ಬನಹಟ್ಟಿಯ ಪ್ರಶಾಂತ ಹನಗಂಡಿ ಕೆಪಿಎಸ್‌ಸಿಯಲ್ಲಿ ಆಯ್ಕೆ ಪಟ್ಟಿಯಲ್ಲಿ 26ನೇ ರ್‍್ಯಾಂಕ್‌ ಪಡೆದ ಹಿನ್ನೆಲೆಯಲ್ಲಿ ತಂದೆ ಮಲ್ಲಪ್ಪ, ತಾಯಿ ಮಹಾದೇವಿ ಮತ್ತು ಸಹೋದರ ಡಾ.ಯುವರಾಜ ಸಿಹಿ ತಿನಿಸುತ್ತಿರುವುದು
ಬನಹಟ್ಟಿಯ ಪ್ರಶಾಂತ ಹನಗಂಡಿ ಕೆಪಿಎಸ್‌ಸಿಯಲ್ಲಿ ಆಯ್ಕೆ ಪಟ್ಟಿಯಲ್ಲಿ 26ನೇ ರ್‍್ಯಾಂಕ್‌ ಪಡೆದ ಹಿನ್ನೆಲೆಯಲ್ಲಿ ತಂದೆ ಮಲ್ಲಪ್ಪ, ತಾಯಿ ಮಹಾದೇವಿ ಮತ್ತು ಸಹೋದರ ಡಾ.ಯುವರಾಜ ಸಿಹಿ ತಿನಿಸುತ್ತಿರುವುದು   

ಬನಹಟ್ಟಿ:  ಸ್ಥಳೀಯ ಪ್ರಶಾಂತ ಹನಗಂಡಿ ಕೆಪಿಎಸ್‌ಸಿ ಪರೀಕ್ಷೆಯಲ್ಲಿ 26ನೇ ರ್‍್ಯಾಂಕ್‌ ಪಡೆದುಕೊಂಡಿದ್ದು, 23ನೇ ವರ್ಷಕ್ಕೆ ಉಪವಿಭಾಗಾಧಿಕಾರಿ ಸ್ಥಾನ ಪಡೆದುಕೊಂಡ ಅತ್ಯಂತ ಕಿರಿಯ ವ್ಯಕ್ತಿ ಎನ್ನಲಾಗಿದೆ.ಸ್ಥಳೀಯ ಸಹಕಾರಿ ನೂಲಿನ ಗಿರಣಿಯಲ್ಲಿ ಬೆರಳಚ್ಚುಗಾರರಾಗಿ ಮೂವತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಲ್ಲಪ್ಪ ಹನಗಂಡಿ ಅವರ ಎರಡನೆಯ ಪುತ್ರ ಪ್ರಶಾಂತ ಬಡತನದ ಪರಿಸ್ಥಿತಿಯಲ್ಲಿಯೂ ಅದ್ಭುತ ಸಾಧನೆ ಮಾಡಿದ್ದಾರೆ.

ಪ್ರಶಾಂತ ಮೊದಲಿನಿಂದಲೂ ಪ್ರತಿಭಾವಂತ ವ್ಯಕ್ತಿ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 95ರಷ್ಟು ಅಂಕಗಳನ್ನು ಪಡೆದುಕೊಂಡು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡರು. ನಂತರ ಸ್ಥಳೀಯ ಎಸ್‌ಆರ್‌ಎ ಪಿಯು ವಿಜ್ಞಾನ ಕಾಲೇಜು ಸೇರಿಕೊಂಡರು. ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ 93ರಷ್ಟು ಅಂಕಗಳನ್ನು ಪಡೆದುಕೊಂಡರು. ಪಿ.ಸಿ.ಎಂ.ಬಿ.ಯಲ್ಲಿ ಶೇ 97ರಷ್ಟು ಅಂಕಗಳನ್ನು ಪಡೆದುಕೊಂಡರು.

ಪ್ರಶಾಂತ ಹನಗಂಡಿ ಜನರ ಸೇವೆಯನ್ನು ಮಾಡುವ ಉದ್ದೇಶದಿಂದ ನಾನು ಅಧಿಕಾರಿಯಾಗಬೇಕು ಎಂಬ ಗಟ್ಟಿ ನಿರ್ಧಾರವನ್ನು ಹೊಂದಿದ್ದರು. ಅದಕ್ಕಾಗಿ ಅವರು ವಿಜ್ಞಾನ ವಿಷಯದಲ್ಲಿ ಮುಂದುವರಿಯದೆ ಸ್ಥಳೀಯ ತಮ್ಮಣ್ಣಪ್ಪ ಚಿಕ್ಕೋಡಿ ಮಹಾವಿದ್ಯಾಲಯದಲ್ಲಿ ಆರ್ಟ್ಸ್‌ ಪಡೆದುಕೊಂಡು ಓದನ್ನು ಮುಂದುವರಿಸಿದರು. ಅಲ್ಲಿಯೂ ಕೂಡಾ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ 4ನೇ ಸ್ಥಾನ ಪಡೆದುಕೊಳ್ಳುವುದರ ಜೊತೆಗೆ ಅರ್ಥಶಾಸ್ತ್ರ ಮತ್ತು ಭೂಗೋಳ ಶಾಸ್ತ್ರ ವಿಷಯಗಳಲ್ಲಿ ಚಿನ್ನದ ಪದಕ ಪಡೆದುಕೊಂಡರು.

ADVERTISEMENT

ಬೆಂಗಳೂರು ಅಥವಾ ದೆಹಲಿಗೆ ಹೋಗಿ ತರಬೇತಿಯನ್ನು ಪಡೆದು ಕೊಳ್ಳಬೇಕು ಎಂದರೆ ಮನೆಯಲ್ಲಿ ಆರ್ಥಿಕ ತೊಂದರೆ. ಆದ್ದರಿಂದ ಯಾವುದೆ ತರಬೇತಿಗೂ ಹೋಗದೆ ಮನೆಯಲ್ಲಿ ಕುಳಿತುಕೊಂಡು ಓದಲು ಆರಂಭಿಸಿದರು. 2015ರಲ್ಲಿ ಕೆಪಿಎಸ್‌ಸಿ ಪರೀಕ್ಷೆಯನ್ನು ಬರೆದರು. ಕನ್ನಡ ಸಾಹಿತ್ಯ ವಿಷಯವನ್ನು ಐಚ್ಛಿಕ ವಿಷಯವನ್ನಾಗಿ ಪಡೆದುಕೊಂಡರು. 26ನೇ ಸ್ಥಾನ ಪಡೆದುಕೊಂಡಿರುವುದು ಅಭಿಮಾನದ ಸಂಗತಿಯಾಗಿದೆ. ಮುಖ್ಯ ಪರೀಕ್ಷೆಯನ್ನು ಬರೆದ ನಂತರ ಅವರು ದೆಹಲಿಗೆ ಐಎಎಸ್‌ ತರಬೇತಿಯನ್ನು ಪಡೆಯಲು ಹೋಗಿದ್ದರು.

ಪ್ರಶಾಂತ ಅವರು ಅಣ್ಣ ಡಾ.ಯುವರಾಜ ಮಾರ್ಗದರ್ಶನದಲ್ಲಿ ಕೆಪಿಎಸ್‌ಸಿ ಪರೀಕ್ಷೆಯನ್ನು ಓದಲು ಆರಂಭಿಸಿದರು. ಡಾ.ಯುವರಾಜ ಕೂಡಾ ಎಂಬಿಬಿಎಸ್‌ ಮುಗಿಸಿಕೊಂಡು 2011ರ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಈಗ ಪ್ರಶಾಂತ ಉಪವಿಭಾಗಾಧಿಕಾರಿಯಾಗಿ ಆಯ್ಕೆಯಾಗಿರುವುದು ತಂದೆ ಮಲ್ಲಪ್ಪನವರಿಗೆ ಮತ್ತು ತಾಯಿ ಮಹಾದೇವಿಗೆ ಹೆಚ್ಚು ಖುಷಿ ತಂದಿದೆ. ಬಡತನದ ಪರಿಸ್ಥಿತಿಯಲ್ಲಿಯೂ ಮಕ್ಕಳಿಬ್ಬರ ಸಾಧನೆ ಅವರಿಗೆ ಅಪಾರ ಸಂತೋಷವನ್ನು ನೀಡಿದೆ.

‘ನನ್ನ ಒಂದು ಸಾಧನೆಯ ಹಿಂದೆ ನನ್ನ ತಂದೆ, ತಾಯಿ ಅದರಲ್ಲೂ ಮುಖ್ಯವಾಗಿ ನನ್ನ ಸಹೋದರ ಯುವರಾಜರ ಪಾತ್ರ ಬಹು ದೊಡ್ಡದು. ರಾಜ್ಯದಲ್ಲಿಯೇ ಇದ್ದು ಇಲ್ಲಿಯ ಜನರ ಸೇವೆಯನ್ನು ಮಾಡುತ್ತೇನೆ’ ಎನ್ನುತ್ತಾರೆ ಪ್ರಶಾಂತ ಹನಗಂಡಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.