ADVERTISEMENT

‘ಬಸ್ ನಿಲ್ದಾಣ ಕಾಮಗಾರಿ ಡಿಸೆಂಬರ್‌ಗೆ ಪೂರ್ಣ’

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 7:05 IST
Last Updated 20 ಮಾರ್ಚ್ 2017, 7:05 IST

ಜಮಖಂಡಿ: ನಗರದ ನೂತನ ಬಸ್‌ ನಿಲ್ದಾಣ ಹಾಗೂ ಬಸ್‌ ಡಿಪೊ ನಿರ್ಮಾಣ ಕಾಮಗಾರಿಯನ್ನು 2017 ರ ಡಿಸೆಂಬರ್‌ ಅಂತ್ಯದ ವೇಳೆಗೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ನಿರ್ದೇಶನ ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಜಮಖಂಡಿ ಘಟಕದ ಸುಮಾರು ₹ 14.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬಸ್‌ ನಿಲ್ದಾಣ ಮತ್ತು ಬಸ್‌ ಡಿಪೊ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿದ ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ಈಗ ಕೈಗೊಳ್ಳಲಾಗಿರುವ ಕಾಮಗಾರಿಗಳು ಬೇಗ ಪೂರ್ಣಗೊಳ್ಳಲಿ ಎಂಬ ಸದುದ್ದೇಶದಿಂದ 2016–17ನೇ ಸಾಲಿನ ರಾಜ್ಯ ಮುಂಗಡ ಪತ್ರದಲ್ಲಿ ನೀಡಲಾಗಿದ್ದ ಅನುದಾನದ ಜೊತೆಗೆ 2017–18ನೇ ಸಾಲಿನ ಅನುದಾನವನ್ನು ಸೇರಿಸಿಕೊಂಡು ಕಾಮಗಾರಿಗಳಿಗೆ ಟೆಂಡರ್‌ ಕರೆಯಲಾಗಿತ್ತು. ಆದ್ದರಿಂದ ಉದ್ದೇಶಿತ ಕಾಮಗಾರಿಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಅಭಿವೃದ್ಧಿ ವಿಷಯದಲ್ಲಿ ಹಳೇ ಮೈಸೂರು, ಮುಂಬಯಿ–ಕರ್ನಾಟಕ, ಹೈದ್ರಾಬಾದ–ಕರ್ನಾಟಕ ಎಂಬ ಪ್ರಾದೇಶಿಕ ತಾರತಮ್ಯ ಮಾಡುತ್ತಿಲ್ಲ.

ಬಾಗಲಕೋಟೆಯ ನೂತನ ಬಸ್‌ ನಿಲ್ದಾಣಕ್ಕೆ ₹ 10 ಕೋಟಿ, ಮುಧೋಳ ಬಸ್‌ ನಿಲ್ದಾಣಕ್ಕೆ ₹ 2.5 ಕೋಟಿ, ಲೋಕಾಪುರ ಬಸ್‌ ನಿಲ್ದಾಣಕ್ಕೆ ₹ 1 ಕೋಟಿ ಅನುದಾನ ನೀಡಲಾಗಿದೆ. ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಅನುದಾನ ಒದಗಿಸುವ ಭರವಸೆ ನೀಡಿದರು.

ಜಮಖಂಡಿ ಕಂದಾಯ ಉಪವಿಭಾಗದ ವ್ಯಾಪ್ತಿಯಲ್ಲಿ 5 ಬಸ್‌ ಡಿಪೊಗಳು ಬರುವುದಾದರೆ ಜಮಖಂಡಿ ನಗರಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿ ಮಂಜೂರು ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಬರುವ ಮೇ–ಜೂನ್‌ ತಿಂಗಳಿನಲ್ಲಿ ಹೊಸ ಬಸ್‌ಗಳನ್ನು ಖರೀದಿ ಮಾಡಲಾಗುವುದು ಎಂದರು.

ಶಾಸಕ ಸಿದ್ದು ನ್ಯಾಮಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿಂಗಾಪುರ ಮಾದರಿಯಲ್ಲಿ ಜಮಖಂಡಿ ಬಸ್‌ ನಿಲ್ದಾಣವನ್ನು ನಿರ್ಮಾಣ ಮಾಡಲಾಗುವುದು. ಜಮಖಂಡಿಯಲ್ಲಿ ನಗರ ಬಸ್‌ ಸಂಚಾರ ಆರಂಭಿಸುವ ಉದ್ದೇಶಕ್ಕಾಗಿ 6 ಹೊಸ ಬಸ್‌ಗಳನ್ನು ಒದಗಿಸುವ ಭರವಸೆಯನ್ನು ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ನೀಡಿದ್ದಾರೆ ಎಂದರು.

ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ಬಸ್‌ ನಿಲ್ದಾಣ ನಿರ್ಮಾಣಕ್ಕಾಗಿ 2 ಎಕರೆ ಜಮೀನನ್ನು ಸಾರಿಗೆ ಸಂಸ್ಥೆಯ ಹೆಸರಿಗೆ ವರ್ಗಾಯಿಸಲಾಗಿದೆ. ಹುನ್ನೂರದಿಂದ ಎ.ಜಿ. ದೇಸಾಯಿ ವೃತ್ತದ ವರೆಗೆ 18 ಮೀ ಅಗಲದ ರಸ್ತೆ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ನಗರದಲ್ಲಿ ಹೈಟೆಕ್‌ ಗ್ರಂಥಾಲಯ ಆರಂಭಿಸಲು ₹1.30 ಕೋಟಿ ಅನುದಾನ ಮಂಜೂರು ಆಗಿದೆ ಎಂದರು.

ಮಾಜಿ ಶಾಸಕ ಬಾಬುರೆಡ್ಡಿ ತುಂಗಳ ಮಾತನಾಡಿದರು. ವಾಕರಸಾ ಸಂಸ್ಥೆಯ ಅಧ್ಯಕ್ಷ ಸದಾನಂದ ಡಂಗನವರ ಸಮಾರಂಭವನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ನಗರಸಭೆ ಅಧ್ಯಕ್ಷ ರಾಜು ಪಿಸಾಳ, ಜವಳಿ ನಿಗಮದ ಉಪಾಧ್ಯಕ್ಷ ನಜೀರ್‌ ಕಂಗನೊಳ್ಳಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸುನಂದಾ ಮುಗಳಖೋಡ, ಉಪಾಧ್ಯಕ್ಷೆ ಸುಂದ್ರವ್ವ ಬೆಳಗಲಿ.

ರೇಷ್ಮಾ ಖಾದ್ರಿ, ಸಾವಿತ್ರಿ ಗುಳಬಾಳ, ವಾಕರಸಾ ಸಂಸ್ಥೆ ನಿರ್ದೇಶಕ ಮುತ್ತಣ್ಣ ಹಿಪ್ಪರಗಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವರ್ಧಮಾನ ನ್ಯಾಮಗೌಡ, ಸಾವಳಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕಲ್ಲಪ್ಪ ಗಿರಡ್ಡಿ, ಎಸಿ ರವೀಂದ್ರ ಕರಲಿಂಗಣ್ಣವರ, ತಹಶೀಲ್ದಾರ್‌ ಪಿ.ಎಸ್‌. ಚನಗೊಂಡ, ಟಿಪಿಇಒ ಎನ್‌.ವೈ. ಬಸರಿಗಿಡದ, ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ ಮತ್ತಿತರರು ವೇದಿಕೆಯಲ್ಲಿದ್ದರು.

ಆಕಾಶವಾಣಿ ಕಲಾವಿದ ಕುಮಾರ ಬಡಿಗೇರ ಪ್ರಾರ್ಥನೆ ಗೀತೆ ಹಾಡಿದರು. ಸವಿತಾ ಬಿರಾದಾರ ನಾಡಗೀತೆ ಹಾಡಿದರು. ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಆರ್‌. ವಿನೋತ್‌ ಪ್ರಿಯಾ ಸ್ವಾಗತಿಸಿದರು. ಚಿದಂಬರ್‌ ಸವಾಯಿ ನಿರೂಪಿಸಿದರು. ವಿಭಾಗೀಯ ಸಾರಿಗೆ ಅಧಿಕಾರಿ ಪಿ.ವಿ. ಮೇತ್ರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT