ADVERTISEMENT

ಮದ್ಯ ಪ್ರಿಯರಿಗೂ ತಟ್ಟಿದ ‘ಬರ’ದ ಬಿಸಿ !

ಬಾಗಲಕೋಟೆಯಲ್ಲಿ ಶೇ 20ರಷ್ಟು ಮಾರಾಟ ಕುಸಿತ; ಬಿಯರ್ ಕೇಳುವವರಿಲ್ಲ; ಬಂದ್ ಆದ ಪಾಲಿಶಿಂಗ್‌ ಘಟಕ

ವೆಂಕಟೇಶ್ ಜಿ.ಎಚ್
Published 3 ಮಾರ್ಚ್ 2017, 7:48 IST
Last Updated 3 ಮಾರ್ಚ್ 2017, 7:48 IST

ಬಾಗಲಕೋಟೆ:  ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಅಬಕಾರಿ ಇಲಾಖೆಯ ಆದಾಯದ ಮೇಲೂ ಪರಿಣಾಮ ಬೀರಿದೆ. ಜೇಬಿನಲ್ಲಿ ದುಡ್ಡು ಇಲ್ಲದೇ ಮದ್ಯಪ್ರಿಯರು ಕುಡಿಯಲು ಮುಂದಾಗುತ್ತಿಲ್ಲ. ಇಲಾಖೆಯ ಮಾಹಿತಿ ಅನ್ವಯ ಫೆಬ್ರುವರಿ ತಿಂಗಳಲ್ಲಿ ಮದ್ಯ ಮಾರಾಟ ಪ್ರಮಾಣ ಶೇ 20ರಷ್ಟು ಕುಸಿತ ಕಂಡಿದೆ.

  ಜಿಲ್ಲೆಯ 253 ಮದ್ಯದ ಅಂಗಡಿಗಳಿಗೆ ಇಲಾಖೆಯಿಂದ ಫೆಬ್ರುವರಿ ತಿಂಗಳಲ್ಲಿ 1.10 ಲಕ್ಷ ಬಾಕ್ಸ್ ಮದ್ಯ ಮಾರಾಟಕ್ಕೆ ಗುರಿ ನೀಡಲಾಗಿತ್ತು. ಆದರೆ 89,418 ಬಾಕ್ಸ್ ಮಾತ್ರ ಮಾರಾಟವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,01,867 ಬಾಕ್ಸ್‌ ಮಾರಾಟವಾಗಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ವಿಸ್ಕಿ, ರಮ್, ಬ್ರಾಂದಿ, ಜಿನ್ ಮಾರಾಟದಕ್ಕೆ 34,273 ಬಾಕ್ಸ್ ಕಡಿಮೆಯಾಗಿದೆ.

ಹಿಂದಿನ ವರ್ಷವೂ ಮಳೆಯ ಕೊರತೆಯಾಗಿತ್ತು. ಅದರೆ ಮಾರಾಟ ಪ್ರಮಾಣ ಇಷ್ಟೊಂದು ಕುಸಿದಿರಲಿಲ್ಲ.  ಈ ವರ್ಷವೂ ಅದೇ ಪರಿಸ್ಥಿತಿ ಮುಂದುವರೆದಿದೆ ಆದಾಯದಲ್ಲಿ ಋಣಾತ್ಮಕ ಪರಿಣಾಮ ಅನುಭವಿಸುತ್ತಿದ್ದೇವೆ. ಜಾತ್ರೆ, ಹಬ್ಬ–ಹರಿದಿನಗಳಲ್ಲಿ ಮಾತ್ರ ಮಾರಾಟದಲ್ಲಿ ಒಂದಷ್ಟು ಏರಿಕೆ ಕಂಡುಬರುತ್ತದೆ. ಉಳಿದ ದಿನ ಮಾರಾಟ ಪ್ರಮಾಣ ಮಾಮೂಲಿಗಿಂತ ಕಡಿಮೆ ಇರುತ್ತದೆ ಎಂದು ಅಬಕಾರಿ ಇಲಾಖೆ ಅಧಿಕಾರಿ  ಹೇಳುತ್ತಾರೆ. 

ಆದಾಯ ಮೂಲವೇ ಇಲ್ಲ: ಜಿಲ್ಲೆಯಲ್ಲಿ ಕೃಷಿ ಕ್ಷೇತ್ರ ಹೊರತಾಗಿ ಜನರಿಗೆ ಆದಾಯದ ಮೂಲ ಇಲ್ಲಿನ ಸಕ್ಕರೆ ಕಾರ್ಖಾನೆಗಳು ಹಾಗೂ ಇಳಕಲ್‌ ಭಾಗದ ಗ್ರಾನೈಟ್ ಪಾಲಿಶಿಂಗ್ ಘಟಕಗಳು. ಸಾಮಾನ್ಯವಾಗಿ ಪ್ರತಿ ವರ್ಷ 75ರಿಂದ 140 ದಿನಗಳವರೆಗೆ  ಕಾರ್ಖಾನೆಗಳು ಕಬ್ಬು ನುರಿಸುತ್ತಿದ್ದವು.

ಈ ಹಂಗಾಮಿನಲ್ಲಿ 50ರಿಂದ 60 ದಿನಗಳಿಗೇ ಬಂದ್ ಆಗಿವೆ. ಜೊತೆಗೆ ಪಾಲಿಶಿಂಗ್ ಘಟಕಗಳು ಬಂದ್‌ ಆಗಿವೆ. ಇದರಿಂದ ಜನರ ಬಳಿ ಹಣ ಇಲ್ಲ. ಇದು ಮಾರಾಟದಲ್ಲಿ ಕುಸಿತ ಪ್ರಮಾಣ ಹೆಚ್ಚಳಕ್ಕೆ ಕಾರಣ ಎಂದು ಬಾಗಲಕೋಟೆ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ನಿಂಗನಗೌಡ ಎನ್.ಪಾಟೀಲ ಹೇಳುತ್ತಾರೆ.

ಅಧಿಕ ಮುಖಬೆಲೆಯ ನೋಟು ನಿಷೇಧದ ಪರಿಣಾಮ ಜನರ ಬಳಿ ಸಾಕಷ್ಟು ನಗದು ಇಲ್ಲವಾಗಿದೆ. ಅವರು ಕುಡಿಯಲು ಹಿಂದೇಟು ಹಾಕುತ್ತಿದ್ದಾರೆ. ನಗರ ಪ್ರದೇಶದ ಮದ್ಯದಂಗಡಿಗಳಿಗೆ ಶೇ 40ರಷ್ಟು ಗ್ರಾಮೀಣರೇ ಗ್ರಾಹಕರಾಗಿರುತ್ತಾರೆ. ನೋಟು ರದ್ಧತಿಯ ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ಕೂಲಿ ಕಾರ್ಮಿಕರಿಗೆ ಪ್ರತಿ ನಿತ್ಯ ಕೂಲಿ ಹಣ ಸಿಗುತ್ತಿಲ್ಲ.

ವಾರಕ್ಕೊಮ್ಮೆ ಇಲ್ಲವೇ ತಿಂಗಳಿಗೊಮ್ಮೆ ಸಿಗುತ್ತದೆ. ಹಾಗಾಗಿ ಅವರ ಬಳಿ ಹಣ ಓಡಾಡುತ್ತಿಲ್ಲ. ಹೀಗಾಗಿ ಹಗಲು ಹೊತ್ತು ಕುಡಿಯಲು ಬರುವವರು ಕಡಿಮೆಯಾಗಿದ್ದಾರೆ. ಇದು ಮಾರಾಟ ಕುಸಿಯಲು ಮತ್ತೊಂದು ಕಾರಣ ಎಂದು ತಿಳಿಸಿದರು.

ಭಾರೀ ಕುಸಿತ: ಸಾಮಾನ್ಯವಾಗಿ ಬಿಸಿಲಿನ ಪ್ರಮಾಣ ಏರಿಕೆಯಾಗುತ್ತಿದ್ದಂತೆಯೇ ಬಿಯರ್ ಮಾರಾಟ ಹೆಚ್ಚುತ್ತದೆ. ಆದರೆ ಈ ಬಾರಿ ಫೆಬ್ರುವರಿ ತಿಂಗಳಲ್ಲಿಯೇ ಶೇ 16 ಕುಸಿತ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಪ್ರಮಾಣ ಸುಮಾರು 90 ಸಾವಿರ ಬಾಕ್ಸ್‌ನಷ್ಟು ಕಡಿಮೆಯಾಗಿದೆ.

ADVERTISEMENT

ಬೇರೆ ಮದ್ಯಗಳಿಗೆ ಹೋಲಿಸಿದರೆ ಮದ್ಯ ಮಾರಾಟ ಕಂಪೆನಿಗಳು ಬಿಯರ್‌ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿವೆ. ಇದುಮಾರಾಟ ಕುಸಿಯಲು ಪ್ರಮುಖ ಕಾರಣ ಎಂದು ಅಬಕಾರಿ ಇಲಾಖೆ ಮೂಲಗಳು ಹೇಳುತ್ತವೆ.

*
ಹಣ ಇಲ್ಲವೆಂದು ಉದ್ರಿ ಕೊಡಲು ಆಗುವುದಿಲ್ಲ.  ಅಂಗಡಿ, ಅರಿವೆ, ಕಿರಾಣಿ ಸಾಲಕೊಟ್ಟರೆ ಮನೆಗೆ ಹೋಗಿ ವಸೂಲಿ ಮಾಡುತ್ತಾರೆ. ನಾವು ಹಾಗೆ ಮಾಡಲು ಆಗುವುದಿಲ್ಲ.
-ನಿಂಗನಗೌಡ ಪಾಟೀಲ,
ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.