ADVERTISEMENT

ಮಧುರಖಂಡಿ ಮಹಾಲಕ್ಷ್ಮಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 22 ಮೇ 2017, 8:45 IST
Last Updated 22 ಮೇ 2017, 8:45 IST

ಜಮಖಂಡಿ: ಪ್ರತಿ 12 ವರ್ಷಕ್ಕೊಮ್ಮೆ ಜರುಗುವ ತಾಲ್ಲೂಕಿನ ಮಧುರಖಂಡಿ ಗ್ರಾಮದ ಗ್ರಾಮದೇವತೆ ಶ್ರೀ ಮಹಾಲಕ್ಷ್ಮಿ ದೇವಿ ದೊಡ್ಡ ಜಾತ್ರಾ ಮಹೋತ್ಸವ ಮೇ 28 ರಿಂದ ಜೂನ್‌ 3 ರ ವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ ಎಂದು ಜಾತ್ರಾ ಕಮಿಟಿ ಪ್ರಕಟಣೆ ತಿಳಿಸಿದೆ.

ಇದೇ 28 ರಂದು ಬೆಳಿಗ್ಗೆ 7 ಗಂಟೆಗೆ ನೂತನ ಬೆಳ್ಳಿ ಪಲ್ಲಕ್ಕಿ ಪುರಪ್ರವೇಶ ನಡೆ ಯಲಿದೆ. ಬೆಳಿಗ್ಗೆ 10 ಗಂಟೆಗೆ ಶ್ರೀಕರೆಮ್ಮಾ ದೇವಿ ಉಡಿ ತುಂಬುವ ಕಾರ್ಯಕ್ರಮ ನಡೆಯುವುದು. ರಾತ್ರಿ 10 ಗಂಟೆಗೆ ನವಲಗುಂದದ ಶ್ರೀಗುರು ಕುಮಾರೇಶ್ವರ ನಾಟ್ಯ ಸಂಘದ ಕಲಾಬಳಗದಿಂದ ‘ಸಂತ ಶಿಶುನಾಳ ಷರೀಫ’ ಎಂಬ ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಳ್ಳಲಿದೆ.

ಇದೇ 29 ರಂದು ಸಂಜೆ 5 ಗಂಟೆಗೆ ವಾದ್ಯ ವೈಭವದೊಂದಿಗೆ ದೇವಿಯ ಉತ್ಸವ ಜರುಗಲಿದೆ. ರಾತ್ರಿ 10 ಗಂಟೆಗೆ ನವಲಗುಂದದ ಶ್ರೀಗುರು ಕುಮಾರೇಶ್ವರ ನಾಟ್ಯ ಸಂಘದ ಕಲಾಬಳಗದಿಂದ ‘ಬಂಜೆ ತೊಟ್ಟಿಲು’ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.

ADVERTISEMENT

ಇದೇ 30 ರಂದು ಸಂಜೆ 7 ಗಂಟೆಗೆ ದೇವಿಯ ನವರಥೋತ್ಸವ ಜರುಗಲಿದೆ. ರಾತ್ರಿ 10 ಗಂಟೆಗೆ ಗದಗ ಶ್ರೀಕುಮಾರೇ ಶ್ವರ ಪಂ. ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘದ ಕಲಾವಿದರಿಂದ ‘ಶಿವ ಶರಣೆ ಅಕ್ಕಮಹಾದೇವಿ’ ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಳ್ಳಲಿದೆ.

ಇದೇ 31 ರಂದು ಬೆಳಿಗ್ಗೆ ದೇವಿಯ ರಂಗೋಲಿ ಮಂಟಪ ಪೂಜಾ ಸಮಾ ರಂಭ ನಡೆಯಲಿದೆ. ರಾತ್ರಿ 10 ಗಂಟೆಗೆ ಗದಗ ಶ್ರೀಕುಮಾರೇಶ್ವರ ಪಂ. ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘದ ಕಲಾವಿದರಿಂದ ‘ಮಲಮಗಳು’ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಜೂನ 1 ರಂದು ದೇವಿಯ ಪಾರಾಯಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಜೂನ್‌ 2 ರಂದು ಬೆಳಿಗ್ಗೆ ದೇವಿಯ ಉಡಿ ತುಂಬುವ ಹಾಗೂ ಸಂಜೆ 7 ಗಂಟೆಗೆ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರುಗುವವು. ರಾತ್ರಿ 10 ಗಂಟೆಗೆ ನವಲಗುಂದದ ಶ್ರೀಗುರು ಕುಮಾರೇಶ್ವರ ನಾಟ್ಯ ಸಂಘದ ಕಲಾಬಳಗದಿಂದ ‘ಕೈಲಾಗದ ಗಂಡ ಕೈಲಾಸ ಕಂಡ’ ನಾಟಕ ಪ್ರದರ್ಶನ ನಡೆಯಲಿದೆ. ಜೂ.3 ರಂದು ಬೆಳಿಗ್ಗೆ 10 ಗಂಟೆಗೆ ಪಲ್ಲಕ್ಕಿ ಉತ್ಸವ ಹಾಗೂ ಜಾತ್ರಾ ಮಹೋತ್ಸವ ಸಮಾರೋಪ ಸಮಾರಂಭ ಜರುಗಲಿವೆ.

ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಸ್ಪರ್ಧೆಗಳು ಜರುಲಿವೆ. 28 ರಂದು ಓಟದ ಸ್ಪರ್ಧೆ, ತೆರಬಂಡಿ ಸ್ಪರ್ಧೆ, 29 ರಂದು ಬಾಕ್‌ ಹ್ಯಾಂಡಲ್‌ ಸೈಕಲ್‌ ಸ್ಪರ್ಧೆ, 2 ಹಲ್ಲಿ ಟಗರಿನ ಕಾಳಗ, 4 ಹಲ್ಲಿನ ಟಗರಿನ ಕಾಳಗ, 6 ಹಲ್ಲಿನ ಟಗರಿನ ಕಾಳಗ ಸ್ಪರ್ಧೆಗಳು, 30 ರಂದು ಜೋಡೆತ್ತಿನ ಒಂದು ನಿಮಿಷದ ಬಂಡಿ ಸ್ಪರ್ಧೆ, ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆ, ಗುಂಡು ಎತ್ತುವ ಸ್ಪರ್ಧೆ, ಚೀಲ ಎತ್ತುವ ಸ್ಪರ್ಧೆ, 31 ರಂದು ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿ ಹಾಗೂ ಜೂ.1 ದು ಜೋಡು ಕುದುರೆ ಗಾಡಿ ರೇಸ್‌, ಮುಕ್ತ ಹಗ್ಗ ಜಗ್ಗುವ ಸ್ಪರ್ಧೆಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.