ADVERTISEMENT

ಮರಳು ಗಣಿಗಾರಿಕೆಗೆ ಅವಕಾಶ?

ಪಟ್ಟಾ ಭೂಮಿ: ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಗೆ ಸಿದ್ಧತೆ: ಟಾಸ್ಕ್‌ಫೋರ್ಸ್ ಸಮಿತಿ ಸಭೆ ಇಂದು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 7:28 IST
Last Updated 4 ಮಾರ್ಚ್ 2017, 7:28 IST
-ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ
-ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ   

ಬಾಗಲಕೋಟೆ:  ಜಿಲ್ಲೆಯಲ್ಲಿ ಮರಳು ಕೊರತೆ ನೀಗಿಸಲು ಇದೇ ಮೊದಲ ಬಾರಿಗೆ ಪಟ್ಟಾ ಭೂಮಿಯಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ನೀಡಲು ಜಿಲ್ಲಾಡಳಿತ ಮುಂದಾಗಿದೆ.

ಪಟ್ಟಾ ಭೂಮಿಯಲ್ಲಿ ಮರಳು ಗಣಿಗಾರಿಕೆ ನಡೆಸಲು 2016ರ ಆಗಸ್ಟ್ 12ರಂದು ಸರ್ಕಾರ ಜಾರಿಗೆ ತಂದ ನೂತನ ಮರಳು ನೀತಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಅದರ ಅನ್ವಯ ಈಗಾಗಲೇ ಕಂದಾಯ, ಲೋಕೋಪಯೋಗಿ, ನೀರಾವರಿ, ಅರಣ್ಯ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ತಂಡ ಜಂಟಿ ಸಮೀಕ್ಷೆ ನಡೆಸಿದ್ದು, ಬಾದಾಮಿ  ಹಾಗೂ ಹುನಗುಂದ ತಾಲ್ಲೂಕುಗಳ ಕೆಲವೆಡೆ ಪಟ್ಟಾ ಭೂಮಿಯಲ್ಲಿ ಮರಳು ಬ್ಲಾಕ್‌ ಪತ್ತೆಯಾಗಿದೆ.

ಪ್ರಸ್ತಾವ ಸಲ್ಲಿಕೆ ಇಂದು: ‘ಪಟ್ಟಾ ಭೂಮಿಯಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ನೀಡಿದಲ್ಲಿ ಈಗ ಹಳ್ಳ, ನದಿಗಳ ಪಾತ್ರದಿಂದ ಅಕ್ರಮವಾಗಿ ತೆಗೆಯುತ್ತಿರುವ ಮರಳು ದಂಧೆಗೆ ಕಡಿವಾಣ ಬೀಳಲಿದೆ. ಜೊತೆಗೆ ಮರಳಿನ ಕೊರತೆ ನೀಗಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಲಿದೆ’ ಎನ್ನುವ ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಶನಿವಾರ ನಡೆಯಲಿರುವ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾವ ಸಿದ್ಧಪಡಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ ಎಂದರು.

‘ಮೊದಲ ಹಂತದಲ್ಲಿ ಬಾದಾಮಿ ತಾಲ್ಲೂಕಿನ ಕಿತ್ತಲಿ ಹಾಗೂ ಸುಳ್ಳ ಗ್ರಾಮಗಳಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲಾಗುತ್ತಿದೆ. ಈಗಾಗಲೇ ಜಮೀನಿನ ಮಾಲೀಕರಿಗೆ ಲಿಖಿತ ಒಪ್ಪಿಗೆ ಬರೆಸಿಕೊಳ್ಳಲಾಗಿದೆ. ಕಿತ್ತಲಿ ಹಾಗೂ ಸುಳ್ಳದಲ್ಲಿ ನಾಲ್ಕು ಕಡೆ 69 ಎಕರೆ ಪಟ್ಟಾ ಭೂಮಿ ಗುರುತಿಸಲಾಗಿದೆ.

ಅಲ್ಲಿ 5.5 ಲಕ್ಷ ಕ್ಯುಬಿಕ್ ಮೀಟರ್ ಮರಳು ಲಭ್ಯವಿದೆ. ಜೊತೆಗೆ ಮಲಪ್ರಭಾ ನದಿಯೊಳಗಿನ 59 ಎಕರೆ ವಿಸ್ತಾರದಲ್ಲಿ ನಾಲ್ಕು ಮರಳಿನ ಬ್ಲಾಕ್ ಇದ್ದು, ಅಲ್ಲಿಯೂ 1.6 ಲಕ್ಷ ಕ್ಯುಬಿಕ್ ಮೀಟರ್ ಮರಳು ಸಿಗಲಿದೆ. ಅದಕ್ಕೆ ಒಪ್ಪಿಗೆ ನೀಡುವ ವಿಚಾರವೂ ಸಭೆಯ ಮುಂದೆ ಬರಲಿದೆ’ ಎಂದು ಸೋಮನಾಳ ತಿಳಿಸಿದರು.

ಒತ್ತಾಯ ಇಲ್ಲ: ಪಟ್ಟಾ ಭೂಮಿಯಲ್ಲಿ ಮರಳು ಬ್ಲಾಕ್ ಪತ್ತೆಯಾದರೂ ರೈತರು ಮುಂದೆ ಬಂದಲ್ಲಿ ಮಾತ್ರ ಅಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲಾಗುತ್ತದೆ. ಲಭ್ಯವಿರುವ ಮರಳಿನಲ್ಲಿ ಶೇ 25ರಷ್ಟು ಸರ್ಕಾರಕ್ಕೆ ಕೊಡಬೇಕಿದೆ. ಅದನ್ನು ಸರ್ಕಾರಿ ಕಾಮಗಾರಿಗಳಿಗೆ ಮಾತ್ರ ಬಳಕೆ ಮಾಡಿಕೊಳ್ಳಲಾಗುವುದು.

ಉಳಿದ ಮರಳನ್ನು ಜಮೀನಿನ ಮಾಲೀಕರು ಮಾರಾಟ ಮಾಡಬಹುದಾಗಿದೆ. ಆದರೆ ಸೂಕ್ತ ಬೆಲೆಯನ್ನು ಟಾಸ್ಕ್‌ಫೋರ್ಸ್‌ ಸಮಿತಿಯೇ ನಿರ್ಧರಿಸಲಿದೆ. ಸದ್ಯ ಬಾದಾಮಿ ತಾಲ್ಲೂಕಿನ ರೈತರು ಮುಂದೆ ಬಂದಿರುವ ಕಾರಣ ಅಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲು ಮುಂದಾಗಿರುವುದಾಗಿ ಉಪವಿಭಾಗಾಧಿಕಾರಿ ಹೇಳಿದರು.

ADVERTISEMENT

ಬದಲಾವಣೆ ಕಡ್ಡಾಯ
ಮರಳು ತೆಗೆಯುವ ಪಟ್ಟಾ ಭೂಮಿ ನದಿಯಿಂದ 50 ಮೀಟರ್‌ ದೂರದಲ್ಲಿ ಇರಬೇಕು.  ಆ ಭೂಮಿಯನ್ನು ಮಾಲೀಕರು ಮೊದಲು ಕೃಷಿಯೇತರ (ಎನ್‌ಎ) ಎಂದು ಬದಲಾಯಿಸಿಕೊಳ್ಳಬೇಕಿದೆ. ಅಕ್ಕಪಕ್ಕದ ಜಮೀನುಗಳ ಮಾಲೀಕರ ಒಪ್ಪಿಗೆ ಹಾಗೂ  ಪರಿಸರ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕಿದೆ.

ಭೂಮಿಯಲ್ಲಿ ಕೇವಲ 5 ಮೀಟರ್‌ಗಳಷ್ಟು ಆಳದಲ್ಲಿ ಮಾತ್ರ ಮರಳು ತೆಗೆಯಬಹುದಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ಸೂಕ್ತ ರಸ್ತೆ ಸಂಪರ್ಕ ಇದ್ದು, ಅಕ್ಕಪಕ್ಕದ ಜಮೀನುಗಳಿಂದ ನಿಗದಿತ ದೂರದಲ್ಲಿ ಮಾತ್ರ ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗುತ್ತದೆ. ಗಣಿಗಾರಿಕೆ ಪೂರ್ಣಗೊಂಡ ನಂತರ  ಮಣ್ಣು ಹಾಕಿ ಅಲ್ಲಿ ಕೃಷಿ ಚಟುವಟಿಕೆ ಮುಂದುವರೆಸಬಹುದಾಗಿದೆ’ ಎಂದು  ತಿಳಿಸಿದರು.

*
ಹೊಸ ಮರಳು ನೀತಿ ಅನ್ವಯ ಪಟ್ಟಾಭೂಮಿ ಗುರುತಿಸಲಾಗಿದೆ. ಅಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲು  ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತಿದೆ.
-ಶಂಕರಗೌಡ ಸೋಮನಾಳ,
ಉಪವಿಭಾಗಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.