ADVERTISEMENT

‘ಮರಳು ಲೂಟಿ ಶ್ರೇಯ ಬಿಜೆಪಿ ಸರ್ಕಾರದ್ದು’

​ಪ್ರಜಾವಾಣಿ ವಾರ್ತೆ
Published 26 ಮೇ 2017, 9:53 IST
Last Updated 26 ಮೇ 2017, 9:53 IST

ಬೀಳಗಿ (ಬಾಗಲಕೋಟೆ): ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದ ಅವಧಿಯಲ್ಲಿ ಮರಳು ಲೂಟಿಯಾಗಿದೆ. ನಾಲ್ಕು ವರ್ಷಗಳ ಕಾಲ ಸುಮ್ಮನೆ ಕುಳಿತಿದ್ದ ಮಾಜಿ ಸಚಿವ ಮುರುಗೇಶ ನಿರಾಣಿ ಈಗ ದಿಢೀರನೆ ಧ್ವನಿ ಎತ್ತಿರುವುದು ಚುನಾವಣೆ ಗಿಮಿಕ್ ಮಾತ್ರ’ ಎಂದು ಶಾಸಕ ಜೆ.ಟಿ ಪಾಟೀಲ ತಿರುಗೇಟು ನೀಡಿದರು.

ತಾಲ್ಲೂಕಿನ ಯಡಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆಯ ಅಕ್ರಮ–ಸಕ್ರಮ ಯೋಜನೆ ಅಡಿಯಲ್ಲಿ ಮಂಜೂರಾದ ಫಲಾನುಭವಿಗಳಿಗೆ ಮನೆಗಳ ಹಕ್ಕುಪತ್ರ ವಿತರಣೆ ಮಾಡಿ ಅವರು ಮಾತನಾಡಿ ದರು. ನಿರಾಣಿ ಅಧಿಕಾರದಲ್ಲಿ ಇದ್ದ ಏಳು ವರ್ಷದ ಅವಧಿಯಲ್ಲಿ ಯಡಹಳ್ಳಿ ಗ್ರಾಮ ದಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಯೋಗ್ಯ ಬೆಲೆ ಕೊಡಿಸಬೇಕಾಗಿತ್ತು. ಏಕೆ ಕೊಡಿಸಲಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.

ಸರ್ಕಾರದ ಮಟ್ಟದಲ್ಲಿ ಭೂಮಿ ಬೆಲೆ ಹೆಚ್ಚಿಸಲು ಕಳೆದ ಮೂರು ವರ್ಷಗಳಿಂದ ಅವಿರತ ಶ್ರಮವಹಿಸಿ ಇಂದು ಪ್ರತಿ ಎಕರೆಗೆ ₹ 25 ಲಕ್ಷ ಕೊಡಿಸಲು ಮುಂದಾಗಿದ್ದೇನೆ. ಇದರ ಪ್ರಯೋಜನವನ್ನು ನಿರಾಣಿ ಅವರ ಗ್ರಾಮದವರೂ ಪಡೆಯಲಿದ್ದಾರೆ ಎಂದು ಹೇಳಿದರು.

ADVERTISEMENT

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತೆಗ್ಗಿ-, ಸಿದ್ದಾಪುರ, ಸೊನ್ನ, ರೊಳ್ಳಿ, ಸಾವಳಗಿ, ತುಂಗಳ ಸೇರಿದಂತೆ ವಿವಿಧ ಏತನೀರಾವರಿ ಯೋಜನೆಗಳಿಗೆ ಮಂಜೂರಾತಿ ದೊರೆತಿದೆ. ನಿರಾಣಿ ಅವರು ತಮ್ಮ ಅವಧಿಯಲ್ಲಿ ಎಷ್ಟು  ನೀರಾವರಿ ಯೋಜನೆಗಳಿಗೆ ಆಡಳಿತಾ ತ್ಮಕ ಮಂಜೂರಾತಿ ಪಡೆದಿದ್ದಾರೆ ಎಂಬುವುದನ್ನು ದಾಖಲೆ ಸಹಿತ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಬಾದಾಮಿ ತಾಲ್ಲೂಕಿನಲ್ಲಿ 30,265 ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ₹ 238 ಕೋಟಿ, ಬೀಳಗಿ ತಾಲ್ಲೂಕಿನ ಯಳ್ಳಿಗುತ್ತಿ ಗ್ರಾಮದಲ್ಲಿ ಖುಷ್ಕಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ₹ 32 ಕೋಟಿ  ಬಿಡುಗಡೆ ಯಾಗಿದೆ. ಇಷ್ಟರಲ್ಲಿಯೇ ಟೆಂಡರ ಕರೆದು ಕೆಲಸ ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ಕಳಸಕೊಪ್ಪ ಕೆರೆ ತುಂಬಿಸಿದ್ದರಿಂದ ಸುತ್ತಲಿನ 15 ಕಿ.ಮೀ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಿದೆ. ಇದರಿಂದ ತೆರೆದ ಬಾವಿ ಹಾಗೂ ಕೊಳವೆ  ಬಾವಿಗಳು ವರ್ಷಪೂರ್ತಿ ನೀರು ತುಂಬಿಕೊಳ್ಳಲು ಅನುಕೂಲವಾಗಿದೆ.  ಕಳಸಕೊಪ್ಪ ಕೆರೆ ತುಂಬಿಸುವ ಯೋಜನೆ ತಮ್ಮ ಅವಧಿಯಲ್ಲಿ ಮಂಜೂರಾಗಿತ್ತು ಎಂದು ನಿರಾಣಿ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಅವರಿಂದಲೂ ಸುಳ್ಳು ಹೇಳಿಸಿದ್ದಾರೆ ಎಂದು ಜೆ.ಟಿ.ಪಾಟೀಲ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.